ADVERTISEMENT

ದಾಳಿ ಗುರಿ ಇಸ್ರೇಲ್ ರಾಜತಂತ್ರಜ್ಞರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬ್ಯಾಂಕಾಕ್ (ಪಿಟಿಐ): ಇಲ್ಲಿ ನಡೆದ ಮೂರು ಸ್ಫೋಟಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಮೂವರು ಇರಾನಿಯರು, ಇಸ್ರೇಲ್ ರಾಜತಾಂತ್ರಿಕರನ್ನೇ ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದರು ಹಾಗೂ ಇಲ್ಲಿನ ಸ್ಫೋಟ ಸಂಭವಿಸಿದ ಸ್ಥಳಗಳಲ್ಲಿ ಸಿಕ್ಕ ಅಯಸ್ಕಾಂತೀಯ ಬಾಂಬ್‌ನ ತುಣುಕುಗಳಿಗೂ  ನವದೆಹಲಿ, ಜಾರ್ಜಿಯಾಗಳಲ್ಲಿ ಸಿಕ್ಕ ಬಾಂಬ್ ತುಣುಕುಗಳಿಗೂ ಸಾಮ್ಯತೆ ಇದೆ ಎಂದು ಥಾಯ್ಲೆಂಡ್ ಪೊಲೀಸ್ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ತನ್ನ ರಾಜತಾಂತ್ರಿಕರ ಮೇಲಿನ ದಾಳಿ ಯ ಹಿಂದೆ ಇರಾನ್‌ನ ಕೈವಾಡವಿದೆ ಎಂದು ಇಸ್ರೇಲ್ ಮಾಡುತ್ತಿರುವ ಆರೋಪಕ್ಕೆ ಇದು ಇನ್ನಷ್ಟು ಪುಷ್ಟಿ ನೀಡಿದೆ.

ಇಲ್ಲಿ ಬಂಧಿಸಲಾಗಿರುವ ಮೂವರು ಇರಾನಿಯರು ಹಾಗೂ ನವದೆಹಲಿ, ಜಾರ್ಜಿಯಾಗಳಲ್ಲಿ ಸ್ಫೋಟದ ಸಂಚು ಹೆಣೆದವರು ಒಂದೇ ಜಾಲದವರು ಎಂದು ಥಾಯ್ಲೆಂಡ್‌ನಲ್ಲಿರುವ ಇಸ್ರೇಲ್ ರಾಯಭಾರಿ ಇಟ್‌ಝಾಕ್ ಶೋಹಮ್ ಆಪಾದಿಸಿದ ಬೆನ್ನಲ್ಲೇ ಪೊಲೀಸ್ ಮುಖ್ಯಸ್ಥ ಜನರಲ್ ಪ್ರ್ಯೂಪ್ಯಾನ್ ಧಾಮಪೊಂಗ್ ಮೇಲಿನಂತೆ ಹೇಳಿದ್ದಾರೆ.

ವಿಶ್ವಸಂಸ್ಥೆಗೆ ಇಸ್ರೇಲ್ ದೂರು
ತನ್ನ ಪ್ರಜೆಗಳು ಹಾಗೂ ರಾಜತಾಂತ್ರಿಕ ಕಚೇರಿಗಳನ್ನು ಗುರಿಯಾಗಿಸಿಕೊಂಡು ನವದೆಹಲಿ ಸೇರಿದಂತೆ ಜಗತ್ತಿನ ಹಲವೆಡೆ ದಾಳಿಗಳ ಹಿಂದೆ ಇರಾನ್ ಕೈವಾಡವಿದೆ ಎಂದು ಇಸ್ರೇಲ್ ವಿಶ್ವಸಂಸ್ಥೆಗೆ ದೂರು ನೀಡಿದೆ.

ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ಕಾಯಂ ಪ್ರತಿನಿಧಿಯಾಗಿರುವ ರಾನ್ ಪ್ರೊಸರ್ ಈ ಸಂಬಂಧ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಪತ್ರ ಬರೆದಿದ್ದಾರೆ.

`ಉಗ್ರರ ಜಾಲ ಭಾರತದಲ್ಲಿ ಸಕ್ರಿಯ~
ಜೆರುಸಲೇಂ (ಪಿಟಿಐ): ಭಯೋತ್ಪಾದನಾ ಜಾಲಗಳು ಭಾರತದಲ್ಲಿ ಇನ್ನೂ ಸಕ್ರಿಯವಾಗಿದ್ದು, ನವದೆಹಲಿ ಸ್ಫೋಟದ ಅನುಭವವು ಉಗ್ರರ ನಿಗ್ರಹದಲ್ಲಿ ಭಾರತ-ಇಸ್ರೇಲ್‌ಗಳ ಸಹಕಾರ ಇನ್ನಷ್ಟು ಸದೃಢವಾಗಲು ಪಾಠವಾಗಬೇಕು ಎಂದು ಇಸ್ರೇಲ್ ಹೇಳಿದೆ.

`ನವದೆಹಲಿ ಸ್ಫೋಟ ಪ್ರಕರಣವು ಭಾರತದಲ್ಲಿ ಉಗ್ರರ ಜಾಲಗಳು ಸಕ್ರಿಯವಾಗಿರುವುದಕ್ಕೆ ಸ್ಪಷ್ಟ ನಿದರ್ಶನ. ಈಗ, ನಾವು ಉಗ್ರರ ಗುರಿಯಾಗಿದ್ದೇವೆ. ಆದರೆ ಈ ಮುನ್ನ ಭಾರತೀಯರ ಮೇಲೂ ಅವರು ದಾಳಿಗಳನ್ನು ನಡೆಸಿದ್ದಾರೆ~ ಎಂದು ಇಂಧನ ಹಾಗೂ ಜಲಸಂಪನ್ಮೂಲ ಸಚಿವ ಉಝಿ ಲಂಡಾವು ಹೇಳಿದ್ದಾರೆ.

ಉಝಿ ಅವರು ಮುಂದಿನ ವಾರ ಭಾರತಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.