ಮೆಲ್ಬರ್ನ್(ಪಿಟಿಐ): ದಿನಕ್ಕೆ 8 ಲೋಟ ನೀರು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಎಂಬ ನಂಬಿಕೆ ಬೆಳೆಸಿಕೊಂಡಿದ್ದೀರಾ? ಇದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಬಾಯಾರಿಕೆಯಾಗದಿದ್ದರೂ ನೀರು ಕುಡಿಯುತ್ತಿದ್ದೀರಾ?
ನಿಲ್ಲಿ, ಇದು ಬಾಟಲಿ ನೀರು ಸಂಗ್ರಹಿಸಿ ಮಾರಾಟ ಮಾಡುವ ಕಂಪೆನಿಗಳು ಸುಖಾಸುಮ್ಮನೇ ಮಾಡುತ್ತಿರುವ ಸುಳ್ಳು ಪ್ರಚಾರ !
ಹೀಗೆಂದು ಆಸ್ಟ್ರೇಲಿಯಾದ ಲಾ ಟ್ರೋಬ್ ವಿಶ್ವವಿದ್ಯಾಲಯದ ಸಂಶೋಧಕ ಸ್ಪೆರೊ ಸಿಂಡೋಸ್ ಹೇಳಿದ್ದಾರೆ.
ಆಸ್ಟ್ರೇಲಿಯಾದ `ಸಾರ್ವಜನಿಕ ಆರೋಗ್ಯ~ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಸಂಶೋಧನಾ ಲೇಖನದಲ್ಲಿ ಸಿಂಡೋಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀರಡಿಕೆ ನೀಗಿಸಿಕೊಳ್ಳಲು ದ್ರವ ವಸ್ತುವಾದ ಚಹಾ, ಕಾಫಿ, ಹಣ್ಣಿನ ರಸದಂತಹ ಯಾವುದೇ ಪೇಯವನ್ನು ಸೇವಿಸಬಹುದು ಎಂದಿರುವ ಅವರು ದಿನಕ್ಕೆ 2 ಲೀಟರ್‌ಗಳಷ್ಟು ನೀರು ದೇಹಕ್ಕೆ ಸಾಕು ಎಂದಿದ್ದಾರೆ.
ನೀರು ಆರೋಗ್ಯವೃದ್ಧಿಗೆ ಸಹಾಯಕ ಹೌದು. ಆದರೆ, ಎಂಟು ಲೋಟ ನೀರು ಕುಡಿಯಲೇಬೇಕು ಎಂಬುದು ಉತ್ಪ್ರೇಕ್ಷಿತ ಅಂದಾಜು. ಮೂವತ್ತು ವರ್ಷಗಳ ಹಿಂದೆ ಎಲ್ಲಿಯೂ ನೀರಿನ ಬಾಟಲ್‌ಗಳು ಕಾಣುತ್ತಿರಲಿಲ್ಲ.
ಈಗ ಅದು ಫ್ಯಾಷನ್ ಆಗಿದೆ. ಇದನ್ನೆಲ್ಲ ನೋಡಿದರೆ ಎಂಟು ಲೋಟ ನೀರು ಕುಡಿಯಬೇಕು ಎಂಬ ಪ್ರಚಾರದ ಹಿಂದೆ ನೀರು ಮಾರಾಟ ಕಂಪೆನಿಗಳ ಹುನ್ನಾರ ಕಾಣುತ್ತಿದೆ ಎಂದು ಸಿಂಡೋಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.