ADVERTISEMENT

ನೂರು ಕೋಟಿ ಡಾಲರ್ ಚುನಾವಣಾ ನಿಧಿ:ದಾಖಲೆ ನಿರ್ಮಾಣದ ಒಬಾಮ ದಾಪುಗಾಲು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಎರಡನೇ ಅವಧಿಗೂ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿರುವ ಬರಾಕ್ ಒಬಾಮ, ಒಂದು ನೂರು ಕೋಟಿ ಡಾಲರ್‌ಗಳಷ್ಟು ಚುನಾವಣಾ ನಿಧಿ ಸಂಗ್ರಹಿಸುವ ದಾಖಲೆಯತ್ತ ದಾಪುಗಾಲು ಹಾಕುತ್ತಿದ್ದಾರೆ. 

ಕಳೆದ ತಿಂಗಳಷ್ಟೆ 18.1 ಕೋಟಿ ಡಾಲರ್‌ಗಳಷ್ಟು ನಿಧಿಯನ್ನು ಒಬಾಮ ಸಂಗ್ರಹಿಸಿದ್ದು, ಸದ್ಯ 94.7 ಕೋಟಿ ಡಾಲರ್‌ಗಳಷ್ಟು ನಿಧಿ ಅವರಲ್ಲಿ ಇದೆ.ಚುನಾವಣೆಗೆ ಇನ್ನೂ ಒಂದು ತಿಂಗಳು (ನ. 6ರಂದು ಮತದಾನ) ಇದ್ದು, ಅಷ್ಟರಲ್ಲಿ ಒಬಾಮ ಅವರು ಒಂದು ನೂರು ಕೋಟಿ ಡಾಲರ್‌ಗಳ ಮೊತ್ತವನ್ನು ತಲುಪುವ ಸಾಧ್ಯತೆ ಇದೆ.

ಇದು ಸಾಧ್ಯವಾದರೆ ಒಬಾಮ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ನಿಧಿ ಸಂಗ್ರಹಿಸಿದ ಮೊತ್ತ ಮೊದಲಿಗರಾಗುತ್ತಾರೆ.`ಸೆಪ್ಟೆಂಬರ್‌ನಲ್ಲಿ 18,25,813 ಜನರಿಂದ 18.1 ಕೋಟಿ ಡಾಲರ್‌ಗಳನ್ನು ಚುನಾವಣಾ ನಿಧಿ ಸಂಗ್ರಹಿಸಲಾಗಿದೆ~ ಎಂದು ಒಬಾಮ `ಟ್ವಿಟರ್~ನಲ್ಲಿ ಬರೆದುಕೊಂಡಿದ್ದಾರೆ.

`2012ನೇ ಇಸ್ವಿಯಲ್ಲಿ ಈ ವರೆಗೆ ಡೆಮಾಕ್ರೆಟಿಕ್ ಪಕ್ಷಕ್ಕೆ ಒಂದು ಕೋಟಿ ಡಾಲರ್‌ಗಳಷ್ಟು ಮೊತ್ತವು ದೇಣಿಗೆಯಾಗಿ ಹರಿದುಬಂದಿದೆ. ಇದು ದೇಶದ ತಳಮಟ್ಟದ ರಾಜಕಾರಣದಲ್ಲೇ ಚಾರಿತ್ರಿಕ ದಾಖಲೆ. ವಿಶೇಷವೆಂದರೆ 5.67 ಲಕ್ಷ ಕ್ಕೂ ಹೆಚ್ಚು ಮಂದಿ ಇದೇ ಮೊದಲ ಬಾರಿಗೆ ದೇಣಿಗೆ ನೀಡಿದ್ದಾರೆ.

ಇದು ವರೆಗೂ ಸಂಗ್ರಹವಾಗಿರುವ ನಿಧಿಯಲ್ಲಿ ಸೆಪ್ಟೆಂಬರ್‌ನಲ್ಲಿ ಸಂಗ್ರಹವಾಗಿರುವ ಮೊತ್ತವೇ ಅಧಿಕವಾದುದು~ ಎಂದು ಒಬಾಮ ಅವರ ಚುನಾವಣಾ ಪ್ರಚಾರ ಕಾರ್ಯದ ವ್ಯವಸ್ಥಾಪಕ ಜಿಮ್ ಮೆಸಿನಾ ಅವರು ಬೆಂಬಲಿಗರಿಗೆ ಬರೆದಿರುವ ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆಗಸ್ಟ್‌ನಲ್ಲಿ ಒಬಾಮ ಅವರಿಗೆ 14.1 ಕೋಟಿ ಡಾಲರ್ ದೇಣಿಗೆ ಹರಿದುಬಂದಿತ್ತು. ಒಬಾಮ ಪ್ರತಿಸ್ಪರ್ಧಿ ಮಿಟ್ ರೋಮ್ನಿ ಅವರು ಸೆಪ್ಟೆಂಬರ್‌ನಲ್ಲಿ ಸಂಗ್ರಹವಾದ ಚುನಾವಣಾ ನಿಧಿಯನ್ನು ಘೋಷಿಸಿಲ್ಲ. ಆದರೆ, ಡೆನ್ವರ್‌ನಲ್ಲಿ ಒಬಾಮ ಅವರೊಂದಿಗೆ ನಡೆದ ಮುಖಾಮುಖಿ ಚರ್ಚೆಯ ಸಂದರ್ಭದಲ್ಲಿ ಬರೀ 24 ತಾಸಿನೊಳಗೆ 1.2 ಕೋಟಿ ಡಾಲರ್ ಸಂಗ್ರಹವಾಗಿದೆ ಎಂದು ರೋಮ್ನಿ ಅವರ ವಕ್ತಾರರು `ಟ್ವಿಟರ್~ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.