ADVERTISEMENT

ನೇಪಾಳಕ್ಕೆ ಚೀನಾ ಪ್ರಧಾನಿ ಅಚ್ಚರಿ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಕಠ್ಮಂಡು (ಪಿಟಿಐ): ಚೀನಾ ಪ್ರಧಾನಿ ವೆನ್ ಜಿಯಾಬಾವೊ ಶನಿವಾರ ಇಲ್ಲಿಗೆ ನೀಡಿದ ಅಲ್ಪಕಾಲಿಕ ಮತ್ತು ಅಚ್ಚರಿಯ ಭೇಟಿಯಲ್ಲಿ ಮೂಲಭೂತ ಸೌಕರ್ಯ ಮತ್ತು ಭದ್ರತಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೇಪಾಳಕ್ಕೆ ಸುಮಾರು 13.5 ಕೋಟಿ ಅಮೆರಿಕನ್ ಡಾಲರ್‌ಗಳ ನೆರವನ್ನು ಪ್ರಕಟಿಸುವ ಮೂಲಕ ಸ್ಥಗಿತವಾಗಿದ್ದ ಎರಡೂ ದೇಶಗಳ ಬಾಂಧವ್ಯಕ್ಕೆ ಹೊಸ ದಿಕ್ಕು ತೋರಿದ್ದಾರೆ.

ಈ ಮೂಲಕ ವಿಶ್ವದ ಎರಡನೇ ಬೃಹತ್ ಆರ್ಥಿಕ ಶಕ್ತಿಯ ಹಿರಿಯ ಮುಖಂಡರೊಬ್ಬರು ಕಳೆದ ಒಂದು ದಶಕದಲ್ಲಿ ನೀಡಿದ ಮೊದಲ ಭೇಟಿ ಇದೆನಿಸಿದೆ. ಇದರಿಂದ ಚೀನಾ ದಕ್ಷಿಣದಲ್ಲಿರುವ ತನ್ನ ನೆರೆರಾಷ್ಟ್ರವನ್ನು ಸೆಳೆಯಲು ಮುಂದಾಗಿದೆ. ಕೇವಲ ಒಂದು ದಿನದ ಈ ದಿಢೀರ್ ಭೇಟಿಯಲ್ಲಿ ವೆನ್, ನೇಪಾಳದ ಉನ್ನತ ನಾಯಕರೊಡನೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಬಿಗಿ ಭದ್ರತೆಯ ಮಧ್ಯೆ ತಮ್ಮ ನೇತೃತ್ವದ ನಿಯೋಗದೊಡನೆ ಬಂದ ವೆನ್, ಮೊದಲಿಗೆ ನೇಪಾಳ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳ ಬಗ್ಗೆ ಸಮಾಲೋಚಿಸಿದರು. ನಂತರ ನೇಪಾಳ ಅಧ್ಯಕ್ಷ ರಾಮ್‌ಬರನ್ ಯಾದವ್ ಅವರನ್ನು ರಾಷ್ಟ್ರಪತಿ ಭವನದ ಲ್ಲಿ ಭೇಟಿಯಾಗಿ ಚರ್ಚಿಸಿದರು. ಆಮೇಲೆ ಮಾವೊವಾದಿ ಪಕ್ಷದ ಮುಖ್ಯಸ್ಥ ಪ್ರಚಂಡ ಮತ್ತು ನೇಪಾಳ ಕಾಂಗ್ರೆಸ್ ಮುಖ್ಯಸ್ಥ ಸುಶೀಲ್ ಕೊಯಿರಾಲ ಅವರನ್ನೂ ಭೇಟಿ ಮಾಡಿ ಮಾತನಾಡಿದರು.

ADVERTISEMENT

50 ಕೋಟಿ ಡಾಲರ್ ಒಪ್ಪಂದ:

ಭಟ್ಟಾರಾಯ್ ಮತ್ತು ಅವರ ಇಬ್ಬರು ಸಂಪುಟ ಸಹೋದ್ಯೋಗಿಗಳಾದ ವಿದೇಶಾಂಗ ಸಚಿವ ನಾರಾಯಣ್ ಕಾಜಿ ಶ್ರೇಷ್ಠ ಹಾಗೂ ಗೃಹ ಸಚಿವ ಬಿಜಯ ಕುಮಾರ್ ಗಚ್ಚಾದಾರ್  ಅವರು ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲ್ಪಟ್ಟ ಚೀನಾ ಪ್ರಧಾನಿಯವರನ್ನು ಸ್ವಾಗತಿಸಿದರು. ಅಲ್ಲಿಂದ ನೇರವಾಗಿ ಸಿಂಘ್‌ದರ್ಬಾರ್‌ಗೆ ತೆರಳಿ ಪರಸ್ಪರ ಸಭೆಯನ್ನು ನಡೆಸಿದರು. ಉಭಯತ್ರರು ಸುಮಾರು 50 ಕೋಟಿ ಅಮೆರಿಕನ್ ಡಾಲರ್‌ಗಳಿಗೂ ಅಧಿಕ ಮೊತ್ತದ ಎಂಟು ಒಪ್ಪಂದಗಳಿಗೆ ಸಹಿ ಹಾಕಿದ್ದು, ಅದರ ವಿವರಗಳನ್ನು ಬಹಿರಂಗಪಡಿಸಿಲ್ಲ.

ವೆನ್ ಭೇಟಿಯ ಹಿನ್ನೆಲೆಯಲ್ಲಿ ಭಾರಿ ಭದ್ರತೆಯನ್ನು ಏರ್ಪಡಿಸಿದ್ದು, ಹೀಗಾಗಿ ವಿಮಾನ ನಿಲ್ದಾಣ ಮತ್ತು ಸಭೆ ನಡೆದ ಸಿಂಘ್‌ದರ್ಬಾರ್‌ಗೆ  ಪತ್ರಕರ್ತರಿಗೂ ಪ್ರವೇಶಾವಕಾಶ ನೀಡಲಿಲ್ಲ. ಕೆಲವು ಛಾಯಾಚಿತ್ರಗ್ರಾಹಕರು ಮತ್ತು ಸರ್ಕಾರಿ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶಾವಕಾಶಕಲ್ಪಿಸಲಾಗಿತ್ತು.

ಅಲ್ಪಕಾಲಿಕ ಭೇಟಿ ನೀಡಿರುವ ವೆನ್, ತಮ್ಮ ದಿಢೀರ್ ಪ್ರವಾಸದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕಳೆದ ತಿಂಗಳು ನೀಡಬೇಕಿದ್ದ ತಮ್ಮ ಭೇಟಿ ರದ್ದಾದ ಹಿನ್ನೆಲೆಯಲ್ಲಿ ಈಗ ಆಗಮಿಸಿರುವುದಾಗಿ ಮೂಲಗಳು ತಿಳಿಸಿವೆ. ವೆನ್ ಭೇಟಿಯನ್ನು ರಹಸ್ಯವಾಗಿಟ್ಟರೂ, ಮೂಲಭೂತ ಸೌಲಭ್ಯ ಯೋಜನೆಗಳಿಗೆ ಶತಕೋಟಿ ಡಾಲರ್‌ಗಳ ಬಂಡವಾಳ ಹೂಡಿಕೆ ಕುರಿತು ನೇಪಾಳ ಪ್ರಧಾನಿಯೊಂದಿಗೆ ಚರ್ಚಿಸಿರುವುದಾಗಿ ನಂಬಲಾಗಿದೆ. ಚೀನಾ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಭಟ್ಟಾರಾಯ್ ಅವರ ಆಹ್ವಾನದ ಮೇರೆಗೆ ವೆನ್ ಈ ಭೇಟಿ ನೀಡಿರುವುದಾಗಿ ತಿಳಿಸಲಾಗಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 11.45ಕ್ಕೆ ವಿಶೇಷ ವಿಮಾನದಲ್ಲಿ ವೆನ್ ಇಲ್ಲಿ ಬಂದಿಳಿದರು. ಇದಕ್ಕೂ ಒಂದು ತಾಸು ಮುನ್ನ ಚೀನಾ ಪಾಸ್‌ಪೋರ್ಟ್ ಹೊಂದಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ನಾರಾಯಣಹಿತಿ ಅರಮನೆಯ ವಸ್ತುಸಂಗ್ರಹಾಲಯ ಪ್ರದೇಶದಲ್ಲಿ ಪೊಲೀಸರು ಬಂಧಿಸಿದರು. ಇವರನ್ನು ಟಿಬೆಟನ್ ಕಾರ್ಯಕರ್ತರೆಂದು ಶಂಕಿಸಲಾಗಿದ್ದು ಇವರಲ್ಲಿ ಇಬ್ಬರು ಬೌದ್ಧಭಿಕ್ಷುಗಳ ಉಡುಪು ಧರಿಸಿದ್ದರು.

ಗುರುವಾರ ರಾತ್ರಿಯೂ ಭಾರತಕ್ಕೆ ತೀರ್ಥಯಾತ್ರೆ ಕೈಗೊಂಡು ರಾಜಧಾನಿಗೆ ವಾಪಸ್ಸಾಗುತ್ತಿದ್ದ ಸುಮಾರು 154 ಟಿಬೆಟನ್ನರನ್ನು ಪೊಲೀಸರು ಬಂಧಿಸಿದ್ದರು. ವೆನ್ ನೇಪಾಳ ಭೇಟಿಯ ನಂತರ ನೇರವಾಗಿ ಸೌದಿ ಅರೇಬಿಯಾ ಪ್ರವಾಸಕ್ಕೆ ಪ್ರಯಾಣ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.