ADVERTISEMENT

ಪಾಕಿಸ್ತಾನದಲ್ಲಿ ಸ್ಫೋಟ: ಅವಾಮೀ ಧುರೀಣ ಪಾರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 9:56 IST
Last Updated 17 ಏಪ್ರಿಲ್ 2013, 9:56 IST

ಇಸ್ಲಾಮಾಬಾದ್ (ಪಿಟಿಐ): ವಾಯವ್ಯ ಪಾಕಿಸ್ತಾನದಲ್ಲಿ ರಸ್ತೆ ಬದಿಯಲ್ಲಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಜಾತ್ಯತೀತ ಅವಾಮೀ ನ್ಯಾಷನಲ್ ಪಾರ್ಟಿಯ (ಎಎನ್ ಪಿ) ನಾಯಕ ಫಾರೂಖ್ ಖಾನ್ ಅಲ್ಪ ಅಂತರದಲ್ಲಿ  ಪಾರಾದರು.

6 ಮಂದಿಯ ಸಾವು ಹಾಗೂ ಸುಮಾರು 50 ಮಂದಿ ಗಾಯಗೊಳ್ಳಲು ಕಾರಣವಾದ ಬಾಂಬ್ ಸ್ಫೋಟ ಸಂಭವಿಸಿದ ಒಂದು ದಿನದ ಬಳಿಕ ಖಾನ್ ಕಾರನ್ನು ಗುರಿಯಾಗಿಟ್ಟುಕೊಂಡು ಈದಿನ ದಾಳಿ ನಡೆಸಲಾಗಿದೆ.


ಛರಿಸಡ್ಡಾ ಜಿಲ್ಲೆಯ ಸರ್ಧೇರಿ ಪ್ರದೇಶಲ್ಲಿನ ತಮ್ಮ ಮನೆಯಿಂದ ಹೊರ ಬರುತ್ತಿದ್ದಂತೆಯೇ ಖಾನ್ ಕಾರಿನ ಮೇಲೆ ದೂರ ನಿಯಂತ್ರಿತ ಬಾಂಬ್ ಎಸೆಯಲಾಯಿತು. ಸ್ಥಳೀಯ ಕಾಲಮಾನ ಬೆಳಿಗ್ಗೆ 10.45ರ ವೇಳೆಗೆ ಪಕ್ಷದ ಮುಖ್ಯಸ್ಥ ಅಸ್ಫಂಡ್ಯಾರ್ ವಲಿ ಖಾನ್ ಪರ ಪ್ರಚಾರಕ್ಕಾಗಿ ಹೊರಟಾಗ ಖಾನ್ ಕಾರಿನ ಮೇಲೆ ಬಾಂಬ್ ದಾಳಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಖಾನ್ ಅವರಿಗೆ ತರಚಿದ ಗಾಯಗಳಾಗಿದ್ದು, ಆಸ್ಪತ್ರೆಗೆ ಒಯ್ಯಬೇಕಾದ ಅಗತ್ಯ ಬರಲಿಲ್ಲ ಎಂದು ಎಎನ್ ಪಿ ಕಾರ್ಯಕರ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.