ADVERTISEMENT

ಪಾಕಿಸ್ತಾನದ ಪರಮಾಣು ಶಕ್ತಿ ರಹಸ್ಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನವು ತನ್ನ ರಹಸ್ಯ ಪರಮಾಣುಶಕ್ತಿ ತಂತ್ರಜ್ಞಾನ ಮತ್ತು ಸಾಧನಗಳನ್ನು ಇರಾನ್ ಮತ್ತು ಲಿಬಿಯಾದಂತಹ ರಾಷ್ಟ್ರಗಳ ಜತೆ ಹಂಚಿಕೊಂಡಿದೆ ಎಂದು ಐಎಸ್‌ಐ ವರದಿ ಹೇಳಿದೆ.

`ಸಂದರ್ಭದ ವಿಲಕ್ಷಣ ಸ್ವರೂಪ ಮತ್ತು ಆಗ ಇದ್ದ ಸಡಿಲ ವ್ಯವಸ್ಥೆಗಳು ಮತ್ತು ಈ ರಾಷ್ಟ್ರಗಳಿಗೆ ಹಿಂದಿನ ಸರ್ಕಾರಗಳಿಗಿದ್ದ ವೈಯಕ್ತಿಕ ಋಣಭಾರಗಳಿಂದಾಗಿ ಈ ಘಟನೆ ನಡೆದಿರುವುದು ಅತ್ಯಂತ ದುರದೃಷ್ಟಕರ~ ಎಂದು ವರದಿ ತಿಳಿಸಿದೆ.

 ಕುಖ್ಯಾತ ವಿಜ್ಞಾನಿ ಎ.ಕ್ಯೂ. ಖಾನ್ ಮತ್ತು ಇತರರನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯು ಪ್ರಶ್ನಿಸಿರುವುದರ ಆಧಾರದ ಮೇಲೆ ಐಎಸ್‌ಐ ವರದಿ ಸಿದ್ಧಪಡಿಸಿದೆ ಎಂದು `ಫಾಕ್ಸ್ ನ್ಯೂಸ್~ ಭಾನುವಾರ ಹೇಳಿದೆ.

ಈ ವರದಿಯು ಪಾಶ್ಚಾತ್ಯ ಬೇಹುಗಾರಿಕಾ ಸಂಸ್ಥೆಗಳ ನಡುವೆ ಸುತ್ತಾಡಿದೆ.ಆದರೆ ಪಾಕಿಸ್ತಾನದಿಂದ ಪರಮಾಣುಶಕ್ತಿ ತಂತ್ರಜ್ಞಾನವನ್ನು ಪಡೆದಿದೆಯೆಂದು ಪಾಶ್ಚಾತ್ಯ ರಾಷ್ಟ್ರಗಳು ಹೇಳುವ ಉತ್ತರ ಕೊರಿಯಾದ ಪ್ರಸ್ತಾಪ ಈ ವರದಿಯಲ್ಲಿ ಇಲ್ಲ.

ಪಾಕಿಸ್ತಾನವು ಪರಮಾಣು ಶಕ್ತಿ ತಂತ್ರಜ್ಞಾನವನ್ನು ಪಡೆಯಲು ಮತ್ತು ರಾಷ್ಟ್ರದಲ್ಲಿ ಪರಮಾಣು ಅಸ್ತ್ರಗಳನ್ನು ತಯಾರಿಸುವ ಘಟಕ ಸ್ಥಾಪಿಸಲು ಎಲ್ಲಾ ರೀತಿಯ ಅಧಿಕೃತ ಮತ್ತು ಅನಧಿಕೃತ ಮಾರ್ಗಗಳನ್ನು ಬಳಸಿಕೊಂಡಿದೆ ಎಂಬುದನ್ನೂ ವರದಿಯಲ್ಲಿ ಐಎಸ್‌ಐ ಒಪ್ಪಿಕೊಂಡಿದೆ.

ಮೈತ್ರಿ ಕಾಯ್ದುಕೊಳ್ಳುವ ದೃಷ್ಟಿಯಿಂದಷ್ಟೆ ಇರಾನ್ ಮತ್ತು ಲಿಬಿಯಾಕ್ಕೆ ನೆರವು ನೀಡಲಾಗಿದೆ ಎಂದು ಐಎಸ್‌ಐ ಹೇಳಿದೆ.

ವರದಿಯಲ್ಲಿನ ಅಂಶೆ: ಪಾಕಿಸ್ತಾನದ ಸೇನಾಪಡೆಯ ಮಾಜಿ ಮುಖ್ಯಸ್ಥ ಜ. ಅಸ್ಲಾಂ ಬೇಗ್ ಅವರು ಪರಮಾಣು ರಂಗದಲ್ಲಿ ಇರಾನ್‌ಗೆ ಸಹಕಾರ ನೀಡಲು ಬಯಸಿದ್ದರು. ಇದಕ್ಕೆ ಬದಲಾಗಿ ಪಾಕಿಸ್ತಾನದ ರಕ್ಷಣಾ ಬಜೆಟ್‌ಗೆ ಆರ್ಥಿಕ ನೆರವಿನ ಭರವಸೆ ಅವರಿಗೆ ದೊರಕಿತ್ತು.

ಬೆನಜೀರ್ ಭುಟ್ಟೋ ಸರ್ಕಾರ ಕೂಡ ಸಹಕಾರ ನೀಡುವ ಒತ್ತಡದಲ್ಲಿ ಸಿಲುಕಿತ್ತು. ರಕ್ಷಣಾ ಸಲಹೆಗಾರ ಜ. ಇಮ್ತಿಯಾಜ್ ಅಲಿ ಅವರು ಪ್ರಧಾನಿಗೆ ನೀಡಿದ ಒಪ್ಪಿಗೆ/ ನಿರ್ಧಾರ ಮತ್ತು ಸೂಚನೆ ಮೇರೆಗೆ  ಕೆಆರ್‌ಎಲ್ (ಖಾನ್ ರಿಸರ್ಚ್ ಲ್ಯಾಬೊರೇಟರೀಸ್) ಇರಾನ್‌ಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಕೆಲವು ಮಾಹಿತಿಯನ್ನು ಒದಗಿಸಿತು ಎಂದು ವರದಿ ಹೇಳಿದೆ.

ಇರಾನ್‌ಗೆ ನೀಡಿದ ಮಾಹಿತಿಯು ಅದು ಸಣ್ಣ ಪ್ರಾಯೋಗಿಕ ಘಟಕ ಆರಂಭಿಸಲು ಕೂಡ ಸಾಕಾಗುವಷ್ಟು ಇರಲಿಲ್ಲ. ಇರಾನ್‌ನವರು ಅದಾಗಲೇ ಯೂರೋಪಿನ ಪೂರೈಕೆದಾರರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು ಅಲ್ಲದೆ ದುಬೈ (ಫಾರೂಕ್) ಮೂಲಕ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು~.

`ಇರಾನ್‌ನವರು ಕೆಲವು ಮಾಹಿತಿಗಾಗಿ ಫಾರೂಕ್‌ಗೆ 50 ಲಕ್ಷ ಡಾಲರ್ ಹಣ ನೀಡಿ ನೆರವಾಗಲು ಕೋರಿದ್ದರು. ಫಾರೂಕ್ ಈ ಹಣದಲ್ಲಿ ಕೆಲಭಾಗವನ್ನು ತನ್ನ ಮತ್ತು ಇರಾನ್‌ನವರ ಪರಿಚಯ ಭೇಟಿ ಮಾಡಿಸಿದ್ದ ಡಾ. ನಿಯಾಜಿ ಎಂಬುವರಿಗೆ ನೀಡಿದ್ದ. ಕೆಲ ಭಾಗವನ್ನು ತನ್ನ ಸ್ವಂತ ಖಾತೆಗೆ ಜಮಾ ಮಾಡಿದ್ದ~ ಎಂದು ವರದಿ ಹೇಳಿದೆ.

ಸ್ವಲ್ಪ ಹಣವನ್ನು ಹೈದರ್ ಜಮಾನ್ ಎಂಬ ಕಾಲ್ಪನಿಕ ಹೆಸರಿನಲ್ಲಿದ್ದ ಖಾತೆಗೆ ಹಾಕಲಾಗಿತ್ತು. ಈ ಖಾತೆಯನ್ನು ಮೊದಲು ಫಾರೂಕ್ ನಂತರದಲ್ಲಿ ಫಾರೂಕ್‌ನ ಸೋದರ ಸಂಬಂಧಿ ತಾಹಿರ್ ಮತ್ತು ಎ.ಕ್ಯೂ. ಖಾನ್ ಅವರು ಬಳಸಿಕೊಳ್ಳಬಹುದಾಗಿತ್ತು.

`ಪಾಕಿಸ್ತಾನದಲ್ಲಿ ಖಾನ್ ಅವರ ಕೆಲವು ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಈ ಖಾತೆಯಿಂದಲೇ ದೇಣಿಗೆ ನೀಡಲಾಯಿತು~ ಎಂದು ವರದಿ ಹೇಳಿದೆ.

ವೈಜ್ಞಾನಿಕವಾಗಿ ಈ ರಾಷ್ಟ್ರಗಳು ಹಿಂದುಳಿದಿರುವುದರಿಂದ ಈ ರೀತಿಯ ಪ್ರಾಯೋಗಿಕ ಘಟಕ ಸ್ಥಾಪಿಸಲು  ಸಾಧ್ಯವಾಗುವುದಿಲ್ಲ ಎಂದೇ ನಂಬಲಾಗಿತ್ತು ಎಂದು ಐಎಸ್‌ಐ ವಾದಿಸಿದೆ.

`ಪಾಕಿಸ್ತಾನವು 1976ರ ಮಧ್ಯಭಾಗದಲ್ಲಿ ಸಂಸ್ಥೆಯನ್ನು (ಪರಮಾಣು ಸಂಶೋಧನೆ) ಸ್ಥಾಪಿಸಿದಾಗ ಯಾವುದೇ ಮಾರ್ಗದಿಂದಲಾದರೂ ಪ್ರತಿಯೊಂದನ್ನೂ ಪಡೆದುಕೊಳ್ಳಲು ಯೋಜನೆಯ ನಿರ್ದೇಶಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು~ ಎಂದು ವರದಿ ಹೇಳಿದೆ.

`1971ರಲ್ಲಿ ರಾಷ್ಟ್ರ ವಿಭಜನೆ ಹಿನ್ನೆಲೆಯಲ್ಲಿ ಮತ್ತು 1974ರಲ್ಲಿ ಭಾರತದ ಪರಮಾಣು ಪರೀಕ್ಷೆ ಬಳಿಕ ಪಾಕಿಸ್ತಾನದ ಭದ್ರತೆ ಮತ್ತು ಅಸ್ತಿತ್ವಕ್ಕೆ ನೇರ ಮತ್ತು ಸ್ಪಷ್ಟ ಬೆದರಿಕೆ ಇತ್ತು~ ಎಂದು ವರದಿ ತಿಳಿಸಿದೆ.

ಆಗ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್ ಜಿಯಾಉಲ್ ಹಕ್ ಅವರು, ಪರಮಾಣು ಶಕ್ತಿಗೆ ಸಂಬಂಧಿಸಿದಂತೆ `ಬೇಡಿಕೊಳ್ಳಿ, ಎರವಲಾಗಿ ಪಡೆಯಿರಿ ಅಥವಾ ಕದಿಯಿರಿ~ ಎಂಬುದೇ ಈ ದಿನಗಳ ನೀತಿ ಎಂದು ಘೋಷಿಸಿದ್ದರು.

ಕೈಗಾರಿಕಾ ಮೂಲಸೌಕರ್ಯಗಳಿಲ್ಲದ ಪಾಕಿಸ್ತಾನವು ಪರಮಾಣು ಶಕ್ತಿಗೆ ಸಂಬಂಧಿಸಿದ ಪ್ರತಿ ವಸ್ತು ಮತ್ತು ಸಾಧನಗಳನ್ನು ಖರೀದಿಸಬೇಕಿತ್ತು, ವಿದೇಶಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಸಾಧನಸಲಕರಣೆ ಪಡೆಯಬೇಕಿತ್ತು. ಅಲ್ಲದೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸಲುವಾಗಿ ನಿರ್ಬಂಧಗಳನ್ನು ದಾಟಿ ಬರಲು ದೇಶದೊಳಗೆ ಮತ್ತು ವಿದೇಶಗಳಲ್ಲಿ ಮಾರುವೇಷದ ಕಂಪೆನಿಗಳೊಂದಿಗೆ ತನ್ನದೇ ಜಾಲವನ್ನು ರೂಪಿಸಿಕೊಳ್ಳಬೇಕಿತ್ತು .

 ಇಂತಹ ಕಂಪೆನಿಗಳು ಕುವೈತ್, ಬಹ್ರೇನ್, ಯುಎಇ, ಸಿಂಗಪುರ್, ಇಂಗ್ಲೆಂಡ್, ಜರ್ಮನಿ, ಲುಕ್ಸೆಂಬರ್ಗ್, ಸ್ವಿಟ್ಜರ್‌ಲೆಂಡ್ ಮೊದಲಾದೆಡೆ ಕಾರ್ಯಾಚರಣೆ ನಡೆಸುತ್ತಿದ್ದವು ಎಂದು ವರದಿ ವಿವರಣೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.