ADVERTISEMENT

ಪಾಕಿಸ್ತಾನದ ಹೇಳಿಕೆ ಬೆಂಬಲಿಸಿದ ಚೀನಾ

ಪಿಟಿಐ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೀಜಿಂಗ್‌: ಪಾಕಿಸ್ತಾನವನ್ನು ‘ಭಯೋತ್ಪಾದನೆ ರಫ್ತು ರಾಷ್ಟ್ರ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ತಳ್ಳಿಹಾಕಿರುವ ಚೀನಾ, ಮಿತ್ರರಾಷ್ಟ್ರದ ಬೆಂಬಲಕ್ಕೆ ನಿಂತಿದೆ.

‘ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಕೈಗೊಂಡಿರುವ ಎಲ್ಲ ವಿಧದ ಹೋರಾಟವನ್ನು ಅಂತರರಾಷ್ಟ್ರೀಯ ಸಮುದಾಯವೂ ಬೆಂಬಲಿಸಬೇಕು, ಈ ವಿಚಾರದಲ್ಲಿ ಎಲ್ಲರೂ ಕೈ ಜೋಡಿಸಬೇಕು’ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನ್ಯಿಂಗ್‌ ತಿಳಿಸಿದ್ದಾರೆ.

ಲಂಡನ್‌ನಲ್ಲಿ ನಡೆದ ‘ಭಾರತ್‌ ಕಿ ಬಾತ್‌, ಸಬ್‌ ಕೆ ಸಾಥ್‌’ನಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಭಯೋತ್ಪಾದಕರ ರಫ್ತು ಕಾರ್ಖಾನೆಯಾಗಿದೆ. ಇಂತಹ ರಫ್ತು ಚಟುವಟಿಕೆಯನ್ನು ಸಹಿಸುವುದಿಲ್ಲ. ಇಂತಹವರು ಹಿಂಬದಿಯಿಂದ ದಾಳಿ ಮಾಡುತ್ತಾರೆ, ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡಲಿದ್ದೇವೆ’ ಎಂದು ತಿಳಿಸಿದ್ದರು.

ADVERTISEMENT

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವಿದೇಶಾಂಗ ಸಚಿವರ ಸಭೆ ಮುಂದಿನ ವಾರ ನಡೆಯಲಿದ್ದು, ಇದಕ್ಕೂ ಮುನ್ನವೇ ಹುವಾ ಅವರು ಪಾಕಿಸ್ತಾನ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

ಏಪ್ರಿಲ್‌ 24ರಂದು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಶನಿವಾರ ಇಲ್ಲಿಗೆ ಬರಲಿದ್ದು, ಚೀನಾದ ವಿದೇಶಾಂಗ ಸಚಿವೆ ವಾಂಗ್‌ ಯಿ ಜೊತೆ ಭಾನುವಾರ ಮಾತುಕತೆ ನಡೆಸಲಿದ್ದಾರೆ.

ಚೀನಾ, ರಷ್ಯಾ, ಭಾರತ, ಪಾಕಿಸ್ತಾನ, ತಜಕಿಸ್ತಾನ, ಕಜಕ್‌ಸ್ತಾನ, ಉಜ್ಬೇಕಿಸ್ತಾನ ಹಾಗೂ ಕಿರ್ಗಿಸ್ತಾನವು ಎಸ್‌ಸಿಒ ಸದಸ್ಯರಾಷ್ಟ್ರಗಳಾಗಿದ್ದು, ಈ ಪೈಕಿ ರಷ್ಯಾವು ಒಕ್ಕೂಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

‘ಈ ಕ್ಷೇತ್ರದಲ್ಲಿ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಎಸ್‌ಸಿಒ ಒತ್ತು ನೀಡುತ್ತಿದೆ. ಆರಂಭದಿಂದಲೂ ಭದ್ರತೆ ವಿಚಾರಕ್ಕೆ ಎಸ್‌ಸಿಒ ಪ್ರಮುಖ ಆದ್ಯತೆ ನೀಡಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.