ADVERTISEMENT

`ಪ್ರಾದೇಶಿಕ ಯುದ್ಧ' ಸಾಧ್ಯತೆ: ಸಿರಿಯಾ

ಒಬಾಮ ಪ್ರಸ್ತಾವನೆಗೆ ಇಬ್ಬರು ಸೆನೆಟರ್‌ಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಕೈರೊ (ಪಿಟಿಐ): ಸಿರಿಯಾದ ಮೇಲೆ ನಡೆಯುವ ಯಾವುದೇ ಸೇನಾ ದಾಳಿಯು `ಪ್ರಾದೇಶಿಕ ಯುದ್ಧ'ಕ್ಕೆ ಕಾರಣವಾಗಬಹುದು ಎಂದು ಅಧ್ಯಕ್ಷ ಬಷರ್ ಅಲ್-ಅಸಾದ್ ಎಚ್ಚರಿಸಿದ್ದಾರೆ.

ಫ್ರಾನ್ಸ್‌ನ ದಿನ ಪತ್ರಿಕೆ `ಲೆ ಫಿಗರೊ'ಗೆ ನೀಡಿದ ಸಂದರ್ಶನದಲ್ಲಿ ಅಸಾದ್ ಈ ಎಚ್ಚರಿಕೆ ನೀಡಿದ್ದಾರೆ.

`ಒಂದು ವೇಳೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸಿರಿಯಾದ ಮೇಲೆ ಸೇನಾ ಕಾರ್ಯಾಚರಣೆ ಕೈಗೊಂಡರೆ ಎಲ್ಲೆಲ್ಲೂ ಹಿಂಸಾಚಾರ ಮತ್ತು ಭಯೋತ್ಪಾದನೆ ಹರಡಲಿದೆ. ಒಮ್ಮೆ ಬಾಂಬ್ ಸ್ಫೋಟಗೊಳ್ಳಲು ಆರಂಭಿಸಿದರೆ, ಎಲ್ಲರೂ ಪರಿಸ್ಥಿತಿಯ ನಿಯಂತ್ರಣ ಕಳೆದುಕೊಳ್ಳಲಿದ್ದಾರೆ' ಎಂದು ಅಸಾದ್ ಪ್ರತಿಪಾದಿಸಿದ್ದಾರೆ.

`ದಾಳಿ ನಡೆದರೆ, ಪ್ರಾದೇಶಿಕ ಯುದ್ಧದ ಆತಂಕ ಸೃಷ್ಟಿಯಾಗಲಿದೆ' ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಒಂದು ವೇಳೆ, ಸಿರಿಯಾ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ ಫ್ರಾನ್ಸ್ ಭಾಗವಹಿಸಿದರೆ ಅದರಿಂದಾಗುವ ಪರಿಣಾಮಗಳನ್ನು ಅದು ಎದುರಿಸಬೇಕಾಗುತ್ತದೆ ಎಂದೂ ಅಸಾದ್ ಎಚ್ಚರಿಸಿದ್ದಾರೆ.

ಆಗಸ್ಟ್ 21ರಂದು ಡಮಾಸ್ಕಸ್‌ನ ಹೊರವಲಯದಲ್ಲಿ ಮುಗ್ಧ ನಾಗರಿಕರ ಮೇಲೆ ಸಿರಿಯಾ ಆಡಳಿತ ರಾಸಾಯನಿಕ ಅಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ಮತ್ತು ಫ್ರಾನ್ಸ್ ಗಳು ಸಿರಿಯಾದ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಅಸಾದ್ ಈ ಹೇಳಿಕೆ ನೀಡಿದ್ದಾರೆ.

ಸೆನೆಟರ್‌ಗಳ ಬೆಂಬಲ: ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಸಂಬಂಧ ಅಮೆರಿಕ ಅಧ್ಯಕ್ಷ ಒಬಾಮ ಅವರು ಕಾಂಗ್ರೆಸ್ ಮುಂದಿಟ್ಟಿರುವ ಪ್ರಸ್ತಾವಕ್ಕೆ ಸೆನೆಟರ್‌ಗಳಾದ ಜಾನ್ ಮೆಕ್‌ಕೈನ್  ಮತ್ತು ಲಿಂಡ್ಸೆ ಗ್ರಹಾಂ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ತಮ್ಮ ಪ್ರಸ್ತಾವನೆಗೆ ಕಾಂಗ್ರೆಸ್ ಸಮ್ಮತಿಸುವ ವಿಶ್ವಾಸವನ್ನು ಒಬಾಮ ವ್ಯಕ್ತಪಡಿಸಿದ್ದಾರೆ.

ಈ ಪ್ರಸ್ತಾವನೆ ವಿರುದ್ಧ ಹಾಕುವ ಮತವು ಈಗ ಮಾತ್ರವಲ್ಲದೇ ಭವಿಷ್ಯದಲ್ಲಿ ಮಹಾದುರಂತಕ್ಕೆ ಕಾರಣವಾಗಲಿದೆ' ಎಂದು ರಿಪಬ್ಲಿಕನ್ ಪಕ್ಷದ ಸೆನೆಟರ್ ಮೆಕ್‌ಕೈನ್ ಹೇಳಿದ್ದಾರೆ.

`ಒಬಾಮ ಪ್ರಸ್ತಾಪಿಸಿರುವ ಪ್ರಸ್ತಾವನೆಯು ಮೇಲ್ಮನೆ ಮತ್ತು ಕೆಳಮನೆಗಳಲ್ಲಿ ಬಹುಮತದಿಂದ ಅಂಗೀಕಾರಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಬಯಸುತ್ತೇವೆ' ಎಂದು ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಮೆಕ್‌ಕೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT