ADVERTISEMENT

ಫಲ ನೀಡಬಹುದೇ ಭೇಟಿ, ಚರ್ಚೆ, ಹಸ್ತಲಾಘವ

ಏಜೆನ್ಸೀಸ್
Published 12 ಜೂನ್ 2018, 6:26 IST
Last Updated 12 ಜೂನ್ 2018, 6:26 IST
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   

ಸಿಂಗಾಪುರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ  ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ಸಿಂಗಾಪುರದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಮುಖಾಮುಖಿಯಾಗಿದ್ದಾರೆ. ಮಾತುಕತೆ ಇದೀಗ ಆರಂಭವಾಗಿದೆ. ವಿಶ್ವದ ವಿವಿಧ ದೇಶಗಳು ಈ ಮಾತುಕತೆಯ ಫಲಿತಾಂಶವನ್ನು ಕಾತರದಿಂದ ಎದುರು ನೋಡುತ್ತಿವೆ.

ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್​ ಪರಸ್ಪರ ಕೈ ಕುಲುಕಿ ನಗೆ ಬೀರಿದ ಇಬ್ಬರೂ ನಾಯಕರು, ಈ ಐತಿಹಾಸಿಕ ಭೇಟಿ ಯಶಸ್ಸು ಸಾಧಿಸಬಹುದು ಎಂಬ ಭರವಸೆ ಮೂಡಿಸಿದರು.

ಈ ವೇಳೆ ಮಾತನಾಡಿದ ಟ್ರಂಪ್, ‘ಈ ಭೇಟಿಯ ಮಹತ್ವ ನಮಗೆ ಗೊತ್ತಿದೆ. ಮಾತುಕತೆಯಲ್ಲಿ ಯಶಸ್ಸು ಸಾಧಿಸುತ್ತೇವೆ ಎಂಬ ಭರವಸೆ ಮೂಡುತ್ತಿದೆ. ಈ ಮೂಲಕ ಎರಡು ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಕಿಮ್, ‘ಇತಿಹಾಸದಲ್ಲಿ ನಾವು ಕಷ್ಟದ ಹಾದಿ ಸವೆಸಿದ್ದೇವೆ. ಹಲವು ಏರಿಳಿತಗಳನ್ನು ಕಂಡಿದ್ದೇವೆ. ಅವೆಲ್ಲವನನ್ನೂ ಎದುರಿಸಿ ಇಂದು ಇಲ್ಲಿಗೆ ಬಂದು ನಿಂತಿದ್ದೇವೆ’ ಎಂದು ಹೇಳಿದರು.

‘ಕಿಮ್ ಮೇಲೆ ನನಗೆ ನಂಬಿಕೆಯಿದೆ. ಇವರು ಪರಮಾಣು ಅಣ್ವಸ್ತ್ರ ಸಮಸ್ಯೆ ಹಾಗೂ ಗೊಂದಲವನ್ನು ಬಗೆಹರಿಸಲಿದ್ದಾರೆ. ಇದಕ್ಕಾಗಿ ಇಬ್ಬರು ಜತೆಗೂಡಿ ಪ್ರಯತ್ನಿಸಲಿದ್ದೇವೆ. ಪರಸ್ಪರ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕಾದ ಸಾಕಷ್ಟು ಸವಾಲುಗಳಿವೆ. ಈ ಶೃಂಗಸಭೆಯಿಂದ ಎರಡು ರಾಷ್ಟ್ರಗಳ ನಡುವಿನ ಸಂದೇಹಗಳು ಮರೆಯಾಗಲಿವೆ. ಶಾಂತಿ ನೆಲೆಸಲು ಸಾಧ್ಯವಾಗಲಿದೆ’ ಎಂದು ಟ್ರಂಪ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.