ADVERTISEMENT

ಬಲೂಚ್ ನಾಯಕರಿಗೆ ಕ್ಷಮಾದಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಬಲೂಚಿಸ್ತಾನದ ಜನರಿಗೆ ಸ್ವಯಂ ಆಡಳಿತದ ಹಕ್ಕು ನೀಡಬೇಕೆಂದು ಅಮೆರಿಕದ ಸಂಸತ್ತಿನಲ್ಲಿ ಗೊತ್ತುವಳಿ ಅಂಗೀಕರಿಸಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಸರ್ಕಾರ, ಭೂಗತವಾಗಿರುವ ಬಲೂಚ್ ನಾಯಕರಿಗೆ ಕ್ಷಮಾದಾನ ನೀಡುವುದಾಗಿ ಹೇಳಿದೆ.

ಬಲೂಚಿಸ್ತಾನ ನಾಯಕರು ದೇಶಕ್ಕೆ ವಾಪಸಾದಲ್ಲಿ ಅವರ ವಿರುದ್ಧ ಇರುವ ಎಲ್ಲ ಪ್ರಕರಣಗಳಿಗೂ ತೆರೆ ಎಳೆಯುವುದಾಗಿ ಪಾಕ್ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಭರವಸೆ ನೀಡಿದ್ದಾರೆ.

ಬಲೂಚ್ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿರುವ ಬ್ರಹಮ್‌ದಗ್ ಬುಗ್ತಿ ಹಾಗೂ ಹರ್‌ಬ್ಯಾರ್ ಮರ‌್ರಿ ಅವರಿಗೂ ಈ ಆಹ್ವಾನ ನೀಡಲಾಗಿದ್ದು, ದೇಶದ ರಾಜಕೀಯ ಹಾಗೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಕರೆ ನೀಡಲಾಗಿದೆ.

ಬಲೂಚಿಸ್ತಾನಕ್ಕೆ ಅಭಿವೃದ್ಧಿ ಪ್ಯಾಕೇಜ್ ಅನುಷ್ಠಾನಗೊಳಿಸುವ ಸಂಬಂಧದ ಸಭೆಯ ನಂತರ ಮಾತನಾಡಿದ ಮಲಿಕ್, `ಸಮಸ್ಯೆಗೆ ರಾಜಕೀಯ ಪರಿಹಾರ ನೀಡಬೇಕು ಎಂಬುದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಆಶಯವಾಗಿದೆ~ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.