ADVERTISEMENT

ಬಾಬರ್ ಕ್ಷಿಪಣಿ ಯಶಸ್ವಿ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನವು ಮಂಗಳವಾರ 700 ಕಿ.ಮೀ. ದೂರ ಕ್ರಮಿಸಬಲ್ಲ   ಹತ್ಫ್-7 (ಬಾಬರ್) ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ನಡೆಸಿದ್ದು, ಅದರಲ್ಲಿ ಯಶಸ್ಸು ಕಂಡಿದೆ.
ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ಈ ನೌಕಾ ಕ್ಷಿಪಣಿ ಭಾರತದ ಒಳನಾಡು ತಲುಪುವ ಸಾಮರ್ಥ್ಯ ಹೊಂದಿದೆ.

ಈ ಒಂದು ತಿಂಗಳಿನಲ್ಲಿ ಪಾಕಿಸ್ತಾನ ಉಡಾವಣೆ ಮಾಡುತ್ತಿರುವ ಐದನೇ ಕ್ಷಿಪಣಿ ಇದಾಗಿದ್ದು, ಉಡಾವಣೆ ಮಾಡಲಾದ ಸ್ಥಳವನ್ನು ಗೌಪ್ಯವಾಗಿಡ ಲಾಗಿತ್ತು. ದೇಶದ ಭದ್ರತಾ ವ್ಯವಸ್ಥೆ ಬಲಪಡಿಸಲು ಈ ಪರೀಕ್ಷೆ ನಡೆಸಲಾಗಿದೆ ಎಂದು ಸೇನೆ ಹೇಳಿಕೆ ನೀಡಿದೆ.

 ಕೆಳಮಟ್ಟದಲ್ಲಿ ಹಾರುವ ಈ ಕ್ಷಿಪಣಿಯನ್ನು ಸಂಪೂರ್ಣ ದೇಶಿಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದ್ದು, ಶತ್ರು ದೇಶಗಳ ರೇಡಾರ್ ಕಣ್ಣು ತಪ್ಪಿಸಿ ನಿಖರವಾಗಿ ತನ್ನ ಗುರಿ ತಲುಪುವ ಸಾಮರ್ಥ್ಯ ಇದಕ್ಕಿದೆ.
ಏಪ್ರಿಲ್ 25ರಂದು 1000 ಕಿ.ಮೀ. ದೂರ ಚಿಮ್ಮಬಲ್ಲ  ಖಂಡಾಂತರ ಕ್ಷಿಪಣಿ ಹತ್ಫ್-4 ಅನ್ನು ಪಾಕಿಸ್ತಾನ ಉಡಾವಣೆ ನಡೆಸಿತ್ತು.

5000 ಕಿ.ಮೀ. ದೂರದ ಗುರಿ ಮುಟ್ಟಬಲ್ಲ ಅಗ್ನಿ-5 ಕ್ಷಿಪಣಿಯನ್ನು ಭಾರತ ಉಡಾಯಿಸಿದ ಆರೇ ದಿನಗಳಲ್ಲಿ ಪಾಕ್ ಈ ಪರೀಕ್ಷೆ ಕೈಗೊಂಡಿತ್ತು.ಮೇ 10 ರಂದು 290 ಕಿ.ಮೀ. ದೂರ ಸಾಮರ್ಥ್ಯದ ಹತ್ಫ್-3, ಮೇ 29ರಂದು 60 ಕಿ.ಮೀ.ದೂರ ಸಾಮರ್ಥ್ಯದ ಹತ್ಫ್-9 ಹಾಗೂ ಮೇ 31 ರಂದು 350 ಕಿಮೀ ದೂರ ಸಾಮರ್ಥ್ಯದ ಹತ್ಫ್-8 ಪರಮಾಣು ಸಿಡಿ ತಲೆ ಹೊತ್ತೊಯ್ಯಬಲ್ಲ ಕ್ಷಿಪಣಿಗಳ ಪರೀಕ್ಷೆಗಳನ್ನು ಪಾಕ್ ಯಶಸ್ವಿಯಾಗಿ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

 ಕ್ಷಿಪಣಿ ಉಡಾವಣಾ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಂಡ ದೇಶದ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳನ್ನು ಪಾಕ್ ಅಧ್ಯಕ್ಷ ಹಾಗೂ ಪ್ರಧಾನಿ ಅಭಿನಂದಿಸಿದ್ದಾರೆ.ಪಾಕಿಸ್ತಾನ ಶಾಂತಿಯುತ ರಾಷ್ಟ್ರ, ಆದರೆ ನಮ್ಮ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಾ ಗುವುದು ಎಂದು ಪ್ರಧಾನಿ ಯುಸೂಫ್ ರಜಾ ಗಿಲಾನಿ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.

ಸೇನಾ ಸಿಬ್ಬಂದಿ ಸಮಿತಿ ಅಧ್ಯಕ್ಷ ಜನರಲ್ ಖಾಲೀದ್ ಶಾಮೀಮ್ ವಿನ್ನೆ, ಸೇನಾ ಯೋಜನಾ ವಿಭಾಗದ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಖಾಲೀದ್ ಅಹ್ಮದ್ ಕಿದ್ವಾಯಿ, ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.