ADVERTISEMENT

ಬಿನ್ ಲಾಡೆನ್‌ ರಕ್ತಸಿಕ್ತ ಬದುಕು

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST
ಬಿನ್ ಲಾಡೆನ್‌ ರಕ್ತಸಿಕ್ತ ಬದುಕು
ಬಿನ್ ಲಾಡೆನ್‌ ರಕ್ತಸಿಕ್ತ ಬದುಕು   

ವಾಷಿಂಗ್ಟನ್ (ಪಿಟಿಐ): ಅಮೆರಿಕ ವಿರುದ್ಧ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಸೌದಿ ಅರೇಬಿಯಾದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ.

2001ರಲ್ಲಿ ಅಮೆರಿಕದ ‘ವರ್ಲ್ಡ್ ಟ್ರೇಡ್ ಸೆಂಟರ್’ ಮೇಲೆ ದಾಳಿ ನಡೆಸುವಲ್ಲಿ ಪ್ರಮುಖ ಸೂತ್ರದಾರನಾಗಿದ್ದ ಲಾಡೆನ್ ಬೇಟೆಗೆ ಹತ್ತು ವರ್ಷಗಳಿಂದ ಅಮೆರಿಕ ಪಡೆಗಳು ಯತ್ನಿಸುತ್ತಲೇ ಇದ್ದವು. ಹಾಗಾಗಿ ಆತ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿದ್ದ. ಆತನ ರಕ್ತಸಿಕ್ತ ಅಧ್ಯಾಯದ ವಿವರ ಇಂತಿದೆ.

1957: ಸೌದಿ ಅರೇಬಿಯಾದ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಿದ್ದ ಮಹಮ್ಮದ್ ಅವಾದ್ ಬಿನ್ ಲಾಡೆನ್‌ನ 17ನೇ ಮಗನಾಗಿ ಜನಿಸಿದ. ಆತನ ತಂದೆ ಯಮೆನ್‌ನಿಂದ ವಲಸೆ ಬಂದು ಸೌದಿ ಅರೇಬಿಯಾದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದ.

ADVERTISEMENT

1969: ಒಸಾಮ ತಂದೆ ಮಹಮ್ಮದ್ ಲಾಡೆನ್ ನಿಧನ. ಆ ಸಂದರ್ಭದಲ್ಲಿ 11 ವರ್ಷದವನಾಗಿದ್ದ ಒಸಾಮ, ಸುಮಾರು ಎಂಟು ಕೋಟಿ ಡಾಲರ್ ಆಸ್ತಿಯ ಒಡೆಯನಾದ. ಜೆಡ್ಡಾದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಿದ.

1973: ಒಸಾಮ ಭಯೋತ್ಪಾದಕ ಮುಸ್ಲಿಂ ಸಂಘಟನೆಗಳ ಜತೆ ನಂಟು. ಜತೆಗೆ ಕಟ್ಟಡ ನಿರ್ಮಾಣ ಹೊಣೆಯನ್ನೂ ನಿಭಾಯಿಸಿದ.

1979: ಆಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ದಾಳಿಯನ್ನು ವಿರೋಧಿಸಿ, ಆಫ್ಘಾನಿಸ್ತಾನದ ಮುಜಾಹಿದ್ದೀನ್‌ಗಳಿಗೆ ಬೆಂಗಾವಲಾಗಿ ನಿಂತ.

1988: ಅಲ್ ಖೈದಾಗೆ ಹಣಕಾಸು ನೆರವು ಒದಗಿಸುವ ಮುಖ್ಯ ವ್ಯಕ್ತಿಯಾದ.

1989: ಆಫ್ಘಾನಿಸ್ತಾನದಿಂದ ಸೋವಿಯತ್ ರಷ್ಯಾ ಪಡೆಗಳು ಹಿಂತಿರುಗಿದ ಮೇಲೆ ಒಸಾಮ ಸೌದಿ ಅರೇಬಿಯಾಗೆ ಹಿಂತಿರುಗಿ, ಕುಟುಂಬದ ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರೆಸಿದ. ಈ ಸಂದರ್ಭದಲ್ಲಿಯೇ ಆತ, ಆಫ್ಘನ್ ಯುದ್ಧದಲ್ಲಿ ಸಂತ್ರಸ್ತರಾದವರಿಗೆ ನಿಧಿ ಸಂಗ್ರಹಿಸಲು ಆರಂಭಿಸಿದ. ಇದೇ ಸಂದರ್ಭದಲ್ಲಿ ಅಲ್ ಖೈದಾ ಸಂಘಟನೆ ಮುಸ್ಲಿಂ ಭಯೋತ್ಪಾದಕರೊಂದಿಗೆ ಜಗತ್ತಿನ  ಸುಮಾರು 60 ದೇಶಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿತು. ಆ ಸಂಘಟನೆಗಳಿಗೆ ಒಸಾಮ ಹಣಕಾಸು ನೆರವು ಒದಗಿಸುತ್ತಿದ್ದ.

1991: ಕುವೈತ್‌ನಿಂದ ಇರಾಕ್ ಪಡೆಗಳನ್ನು ಹೊರ ಹಾಕಲು ಅಮೆರಿಕ ನೇತೃತ್ವದ ಪಡೆಗಳು ಯುದ್ಧ ಸಾರಿದವು. ಸೌದಿ ಅರೇಬಿಯಾದಲ್ಲಿ ಅಮೆರಿಕ ಪಡೆ ಇರುವುದರ ವಿರುದ್ಧ ಬಿನ್ ಲಾಡೆನ್ ಅಮೆರಿಕ ವಿರುದ್ಧ ‘ಜಿಹಾದಿ’ ಘೋಷಣೆ ಮಾಡಿದ.

1991: ರಾಷ್ಟ್ರ ದ್ರೋಹದ ಚಟುವಟಿಕೆ ಹಿನ್ನೆಲೆಯಲ್ಲಿ ಒಸಾಮನನ್ನು ಸೌದಿ ಅರೇಬಿಯಾದಿಂದ ಗಡಿಪಾರು ಮಾಡಲಾಯಿತು. ನಂತರ ಸುಡಾನ್‌ನಲ್ಲಿ ಆಶ್ರಯ ಪಡೆದ.

1993: ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಬಾಂಬ್ ಸ್ಫೋಟ. ಆರು ಮಂದಿ ಸಾವು, ನೂರಾರು ಮಂದಿಗೆ ಗಾಯ. ಈ ಸ್ಫೋಟದ ಆರೋಪಿಗಳಲ್ಲಿ ಆರು ಮಂದಿ ಮುಸ್ಲಿಂ ಮೂಲಭೂತವಾದಿಗಳ ಕೈವಾಡ ಇದ್ದು, ಇವರೆಲ್ಲಾ ಲಾಡೆನ್ ಜತೆ ನಂಟು ಹೊಂದಿದ್ದರು. ಈ ಎಲ್ಲರಿಗೆ ಅಮೆರಿದಲ್ಲಿ ಶಿಕ್ಷೆ ವಿಧಿಸಲಾಯಿತು.

ಅದೇ ವರ್ಷ ನವೆಂಬರ್‌ನಲ್ಲಿ ರಿಯಾದ್‌ನಲ್ಲಿ ಬಾಂಬ್ ಸ್ಫೋಟ. ಈ ಸ್ಥಳದಲ್ಲಿಯೇ ಅಮೆರಿಕ ಸೇನಾ ಸಲಹೆಗಾರ ಕೆಲಸ ನಿರ್ವಹಿಸುತ್ತಿದ್ದ. ಘಟನೆಯಲ್ಲಿ ಐವರು ಅಮೆರಿಕ ಯೋಧರು ಹಾಗೂ ಇಬ್ಬರು ಭಾರತೀಯ ನಾಗರಿಕರು ಮೃತಪಟ್ಟರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ದಾಳಿಯನ್ನೂ ಲಾಡೆನ್ ಗುಂಪು ನಡೆಸಿತ್ತು.

1994: ಇಸ್ಲಾಂ ಧರ್ಮದ ಕುರಿತು ಕೆಲವು ಘೋಷಣೆಗಳನ್ನು ಮಾಡಿದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಲಾಡೆನ್‌ನ ಪೌರತ್ವವನ್ನು ಮಾನ್ಯ ಮಾಡಿತು.

1996 ಜೂನ್ 25: ಸೌದಿ ಅರೇಬಿಯಾದ ಖೊಬಾರ್‌ನಲ್ಲಿ ಅಮೆರಿಕ ಮಿಲಿಟರಿ ನೆಲೆಯಲ್ಲಿ ಒಂದು ಲಾರಿಯಷ್ಟು ಸ್ಫೋಟಕ ಸ್ಫೋಟಗೊಂಡು 19 ಅಮೆರಿಕ ನಾಗರಿಕರು ಸತ್ತು 386 ಮಂದಿ ಗಾಯಗೊಂಡರು.

1996: ಅಮೆರಿಕ ಮತ್ತು ಸೌದಿ ಅರೇಬಿಯಾ ಒತ್ತಡದಿಂದ ಸುಡಾನ್ ಸರ್ಕಾರ ಲಾಡೆನ್‌ನನ್ನು ಗಡಿಪಾರು ಮಾಡಿತು. ತನ್ನ ಮೂವರು ಪತ್ನಿಯರು ಹಾಗೂ ಹತ್ತು ಮಕ್ಕಳೊಂದಿಗೆ ಲಾಡೆನ್ ಆಫ್ಘಾನಿಸ್ತಾನಕ್ಕೆ ತೆರಳಿದ.

1998 ಆಗಸ್ಟ್ 7: ನೈರೋಬಿ, ಕೀನ್ಯಾ, ದರ್-ಎ-ಸಲಾಮ್ ಹಾಗೂ ತಾಂಜಾನಿಯಾದ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ, ಭಾರಿ ಸ್ಫೋಟಕ ಸ್ಫೋಟ. 224 ಮಂದಿ ಸಾವು.

1998 ಆಗಸ್ಟ್ 20: ತನ್ನ ರಾಯಭಾರ ಕಚೇರಿಗಳ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಆಫ್ಘಾನಿಸ್ತಾನ ಮತ್ತು ಸುಡಾನ್‌ನಲ್ಲಿ ಲಾಡೆನ್ ನಡೆಸುತ್ತಿದ್ದ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಅಮೆರಿಕ ದಾಳಿ. ಇಪ್ಪತ್ತು ಮಂದಿ ಸಾವು. ಈ ಸಂದರ್ಭದಲ್ಲಿ ಲಾಡೆನ್ ಅಲ್ಲಿರಲಿಲ್ಲ.

1998 ನವೆಂಬರ್: ಅಮೆರಿಕ ರಾಯಭಾರ ಕಚೇರಿಗಳ ಮೇಲೆ ನಡೆದ ದಾಳಿಗೆ ಬಿನ್ ಕಾರಣ ಎಂದು ಅಮೆರಿಕ ನ್ಯಾಯಾಲಯ ಘೋಷಣೆ. ಲಾಡೆನ್ ಸೆರೆ ಹಿಡಿಯಲು ಸಹಕರಿಸಿದವರಿಗೆ ಐವತ್ತು ಲಕ್ಷ ಡಾಲರ್ ಬಹುಮಾನ ಘೋಷಣೆ.

1999: ಅಮೆರಿಕದ ಎಫ್‌ಬಿಐ ತನ್ನ ‘ಮೋಸ್ಟ್ ವಾಂಟೆಡ್’ ಪಟ್ಟಿಯ ಹತ್ತು ಮಂದಿಯಲ್ಲಿ ಲಾಡೆನ್ ಹೆಸರು ಸೇರಿಸಿತು.

2000 ಅಕ್ಟೋಬರ್ 12: ಯಮೆನ್‌ನಲ್ಲಿರುವ ಯುಎಸ್‌ಎಸ್ ಕೋಲ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ. 17 ಮಂದಿ ಅಮೆರಿಕ ನಾಗರಿಕರ ಹತ್ಯೆ.

2001: ಆಫ್ರಿಕಾದ ಅಮೆರಿಕ ರಾಯಭಾರ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಲಾಡೆನ್‌ನ ನಾಲ್ವರಿಗೆ ಜೈಲು ಶಿಕ್ಷೆ.

2001: ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಪೆಂಟಗನ್ ಮೇಲೆ ದಾಳಿ ಮೂರು ಸಾವಿರ ಮಂದಿ ಸಾವು.

2001 ಸೆಪ್ಟೆಂಬರ್ 13: ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಪೆಂಟಗನ್ ದಾಳಿಯ ಪ್ರಮುಖ ಸೂತ್ರದಾರ ಲಾಡೆನ್ ಎಂದು ಅಮೆರಿಕ ಘೋಷಣೆ. ಲಾಡೆನ್ ಬಗ್ಗೆ ಮಾಹಿತಿ ನೀಡಿದವರಿಗೆ 2.5 ಕೋಟಿ ಡಾಲರ್ ಬಹುಮಾನ ಘೋಷಣೆ.

2001 ಸೆಪ್ಟೆಂಬರ್ 13: ಬಿನ್ ಲಾಡೆನ್ ಆಶ್ರಯದ ತಾಲಿಬಾನ್ ಆಳ್ವಿಕೆ ಕೊನೆಗೊಳಿಸುವಂತೆ ಒತ್ತಾಯಿಸಿ ಆಫ್ಘನ್‌ನಲ್ಲಿದ್ದ ತಾಲಿಬಾನ್ ಸರ್ಕಾರದ ವಿರೋಧಿ ಪಡೆಗಳು ರಾಜಧಾನಿ ಕಾಬೂಲ್‌ಗೆ ಮುತ್ತಿಗೆ.

2001 ಡಿಸೆಂಬರ್ 7: ಆಫ್ಘನ್ ವಿರೋಧಿ ಪಡೆಗಳು ತೊರಾ ಬೊರಾ ಪರ್ವತ ಶ್ರೇಣಿಯಲ್ಲಿ ನಡೆಸಿದ ದಾಳಿಯಲ್ಲಿ ಕೂದಲೆಳೆಯಲ್ಲಿ ಲಾಡೆನ್ ಹಾಗೂ ಆತನ ಬೆಂಬಲಿಗರು ತಪ್ಪಿಸಿಕೊಂಡರು. ಅಲ್ಲಿಂದ ಪಾಕಿಸ್ತಾನಕ್ಕೆ ಕಾಲ್ಕಿತ್ತ.

2002: ಅಮೆರಿಕ ನೇತೃತ್ವದ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ತಾಲಿಬಾನ್ ಪತನಹೊಂದಿತು. ಇದರಿಂದ ಅಲ್ ಖೈದಾಗೆ ಭಾರಿ ಹಿನ್ನೆಡೆ.

2002 ಮಾರ್ಚ್: ಲಾಡೆನ್ ಅಡಗಿಕೊಂಡಿದ್ದಾನೆ ಎನ್ನಲಾದ ಪೂರ್ವ ಆಫ್ಘನ್‌ನ ಪರ್ವತ ಪ್ರದೇಶದಲ್ಲಿ ತೀವ್ರಗೊಂಡ ಸೇನಾ ಕಾರ್ಯಾಚರಣೆ. ಅಲ್ ಜಜೀರಾ ಟಿವಿ ವಾಹಿನಿ ಮೂಲಕ ಲಾಡೆನ್ ಧ್ವನಿ ಮುದ್ರಿಕೆ ಸಂದೇಶ. ಪುನಃ ಸುದ್ದಿ ಮಾಡಿದ.

2003: ಲಾಡೆನ್ ಜೀವಂತವಾಗಿದ್ದು, ಆಫ್ಘನ್‌ನಲ್ಲಿಯೇ ಅಡಗಿರುವ ಸಾಧ್ಯತೆ ಇದೆ ಎಂದು ಆಗಿನ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿಕೆ. ವಿಶ್ವಾದ್ಯಂತ ಇರುವ ಮುಸ್ಲಿಮ್ ಜನಾಂಗದವರು ಒಂದಾಗಿ ‘ಜಿಹಾದಿ’ಗೆ ಮುಂದಾಗುವಂತೆ ಕರೆ ಅಲ್ ಜರೀರಾ ವಾಹಿನಿ ಮೂಲಕ ಕರೆ ನೀಡಿದ ಲಾಡೆನ್.

2004 ಜನವರಿ 4: ಅಲ್ ಜಜೀರಾ ವಾಹಿನಿ ಪುನಃ ಲಾಡೆನ್ ಧ್ವನಿ ಸುರಳಿಯನ್ನು ಬಿತ್ತರ ಮಾಡಿತು. ಕೊಲ್ಲಿ ರಾಷ್ಟ್ರಗಳ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಅಮೆರಿಕ ತನ್ನ ಪ್ರಭುತ್ವ ಸಾಧಿಸಲು ಯತ್ನಿಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರೆ.

2004 ಮಾರ್ಚ್: ಅಮೆರಿಕ ನೇತೃತ್ವದ ಪಡೆಗಳಿಂದ ಅಲ್ ಖೈದಾ ವಿರುದ್ಧದ ಆಫ್ಘನ್- ಪಾಕ್ ಗಡಿಯಲ್ಲಿ ತೀವ್ರಗೊಂಡ ದಾಳಿ.

2009: ಲಾಡೆನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಹೇಳಿಕೆ.

2011 ಮೇ 2: ಅಮೆರಿಕ ಪಡೆಗಳು ಪಾಕಿಸ್ತಾನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಲಾಡೆನ್ ಹತ್ಯೆ ಮಾಡಿರುವುದಾಗಿ ಅಧ್ಯಕ್ಷ ಬರಾಕ್ ಒಬಾಮ ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.