ADVERTISEMENT

ಬ್ರಹ್ಮಾಂಡ ಭ್ರಷ್ಟಾಚಾರ: ಮುಂಚೂಣಿಯಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಲಂಡನ್ (ಪಿಟಿಐ): ಭ್ರಷ್ಟಾಚಾರ ಪಿಡುಗಿನ ನಿಯಂತ್ರಣಕ್ಕೆ ಭಾರತ ಸರ್ಕಾರ ಪರಿಣಾಮಕಾರಿಯಾದ ಬಿಗಿ ಕ್ರಮಗಳನ್ನು  ಕೈಗೊಳ್ಳುತ್ತಿಲ್ಲ, ಜಾಗತಿಕ ಸರಾಸರಿ ಪ್ರಮಾಣಕ್ಕೆ ಹೋಲಿಸಿದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಂತೂ ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿ ಬೆಳೆದಿದೆ ಎನ್ನುವ ಅಂಶ ಜಾಗತಿಕ ಮಟ್ಟದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

`ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್' ಸಂಸ್ಥೆಯು `ಗ್ಲೋಬಲ್ ಕರಪ್ಶನ್ ಬ್ಯಾರೊಮೀಟರ್- 2013' ಹೆಸರಿನಡಿ ಜಗತ್ತಿನ 107 ರಾಷ್ಟ್ರಗಳ 1,14,270 ಜನರನ್ನು ಸಂದರ್ಶಿಸಿ ಭ್ರಷ್ಟಾಚಾರ ಕುರಿತು ಅಭಿಪ್ರಾಯಗಳನ್ನು ಆಧರಿಸಿದ ವರದಿ ಸಿದ್ಧಪಡಿಸಿದೆ. ಭಾರತದಲ್ಲಿ ಸಂದರ್ಶಿಸಿದವರ ಪೈಕಿ ಶೇ 70ರಷ್ಟು ಜನ ಕಳೆದ ಎರಡು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

`ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಭಾರತದಲ್ಲಿನ ಸರ್ಕಾರ ವಿಫಲವಾಗಿದ್ದು ಈ ಸಂಬಂಧ ಜನರ ವಿಸ್ವಾಸವನ್ನು ಅದು ಕಳೆದುಕೊಂಡಿದೆ' ಎಂದು ಸಂಸ್ಥೆಯ ಏಷ್ಯಾ ಪೆಸಿಫಿಕ್ ವಲಯದ ವ್ಯವಸ್ಥಾಪಕಿ ರುಕ್ಸಾನಾ ನನಯಕ್ಕರ ತಿಳಿಸಿದ್ದಾರೆ.

`ಭ್ರಷ್ಟಾಚಾರ ನಿಗ್ರಹಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ' ಎಂಬುದನ್ನು ತಾವು ನಂಬುವುದಿಲ್ಲ ಎಂದು ಭಾರತದಲ್ಲಿ ಸಮೀಕ್ಷೆಗೆ ಒಳಪಡಿಸಲಾದವರಲ್ಲಿ ಶೇ 68 ಜನ ಹೇಳಿದ್ದಾರೆ. ಹೀಗಾಗಿ ಜನರು ಈ ವಿಷಯದಲ್ಲಿ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ರುಕ್ಸಾನಾ ವಿವರಿಸಿದ್ದಾರೆ.

ರಾಜಕೀಯ ಪಕ್ಷಗಳು ಭ್ರಷ್ಟಾಚಾರದ ಪ್ರಮುಖ ಸಂಸ್ಥೆಗಳಾಗಿದ್ದರೆ ನಂತರದ ಸ್ಥಾನ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಒಳಪಡುತ್ತದೆ. ಭಾರತಕ್ಕೆ ಸಂಬಂಧಿಸಿದಂತೆಯೂ ಈ ವಿಷಯ ಮತ್ತಷ್ಟು ಖಚಿತವಾಗಿದ್ದು ಶೇ 86ರಷ್ಟು ಜನ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಲಂಚ ಪಡೆಯುವಿಕೆ ವಿಷಯದಲ್ಲಿ ಪೊಲೀಸ್ ವ್ಯವಸ್ಥೆಗೆ ಅಗ್ರಸ್ಥಾನ (ಶೇ 62) ಸಿಕ್ಕಿದ್ದು ನಂತರದ ಸ್ಥಾನ ನೋಂದಣಿ, ಲೈಸನ್ಸ್ ನೀಡಿಕೆ, ಶಿಕ್ಷಣ ಸಂಸ್ಥೆ, ಭೂಮಿಗೆ ಸಂಬಂಧಿಸಿದ ವ್ಯವಹಾರಗಳು, ನ್ಯಾಯಾಂಗ ವ್ಯವಸ್ಥೆಯದು ಎಂದು ಸಮೀಕ್ಷೆ ತಿಳಿಸಿದೆ.

ಭ್ರಷ್ಟಾಚಾರವು ಅವಶ್ಯಕ ಸಾಮಗ್ರಿಗಳ ಬೆಲೆ ಏರಿಕೆಗೂ ಕಾರಣವಾಗಿ ಇದರಿಂದ ಜನಸಾಮಾನ್ಯರ ಜೇಬಿಗೂ ಕತ್ತರಿ ಬೀಳುತ್ತಿದೆ. ಇದೇ ಹೊತ್ತಿಗೆ ಪ್ರಜಾತಂತ್ರ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೂ ಧಕ್ಕೆ ತಗುಲಲಿದೆ.

ಲಂಚದ ಪ್ರಮಾಣ ಹೆಚ್ಚಳದಿಂದ ಜನಸಾಮಾನ್ಯರು ಹೊರೆ ಅನುಭವಿಸುವ ಜತೆಯಲ್ಲಿ ಸಂಪನ್ಮೂಲಗಳ ಸಮಾನ ಹಂಚಿಕೆಗೂ ಇದರಿಂದ ಅಡ್ಡಿಯಾಗುತ್ತದೆ. ಜನ ಕಾನೂನಿನ ಮೇಲೆ ಇಟ್ಟಿರುವ ವಿಶ್ವಾಸ ಕ್ಷೀಣವಾಗಿ ಸಮಾಜದ ಏಕತೆಗೂ ಧಕ್ಕೆಯಾಗುತ್ತದೆ ಎಂದು ವರದಿ ತಿಳಿಸಿದೆ. ಜಾಗತಿಕವಾಗಿ ಶೇ 28ರಷ್ಟು ಪುರುಷರು ಲಂಚ ನೀಡುತ್ತಿದ್ದರೆ ಮಹಿಳೆಯರ ಪ್ರಮಾಣ ಶೇ 25 ಇದೆ. ನೇಪಾಳ, ಪಾಕಿಸ್ತಾನಗಳಲ್ಲೂ ಮಹಿಳೆಯರಿಗಿಂತ ಪುರುಷರೇ ಲಂಚ ನೀಡುವುದರಲ್ಲಿ ಮುಂದೆ ಇದ್ದಾರೆ. ಕೊಲಂಬಿಯಾದಲ್ಲಿ ಶೇ 16ರಷ್ಟು ಪುರುಷರು ಲಂಚ ನೀಡುತ್ತಿದ್ದರೆ ಮಹಿಳೆಯರ ಪ್ರಮಾಣ ಶೇ 27 ಇದೆ.

ಇಂಗ್ಲೆಂಡ್‌ನಲ್ಲಿ ಮಾಧ್ಯಮ ಹಾಗೂ ರಾಜಕೀಯ ಪಕ್ಷಗಳು ಭ್ರಷ್ಟಾಚಾರ ವಿಷಯದಲ್ಲಿ ಮುಂದೆ ಇದ್ದು, ಈ ದೇಶದಲ್ಲಿ ಲಂಚ ನೀಡುವ ಪ್ರಮಾಣ ಶೇ 5 ಮಾತ್ರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.