ADVERTISEMENT

ಭಾರತದ ಜ್ವಾಲಾಮುಖಿ ಕಾರಣ

ಡೈನೊಸಾರ್‌ ಸಂತತಿ ಸಾಮೂಹಿಕ ಅಳಿವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2016, 19:30 IST
Last Updated 7 ಜುಲೈ 2016, 19:30 IST
ಭಾರತದ ಜ್ವಾಲಾಮುಖಿ ಕಾರಣ
ಭಾರತದ ಜ್ವಾಲಾಮುಖಿ ಕಾರಣ   

ವಾಷಿಂಗ್ಟನ್‌ (ಪಿಟಿಐ): ಭೂಮಿಯಲ್ಲಿ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳ ಸಂತತಿ ಸಾಮೂಹಿಕವಾಗಿ ಅಳಿಯಲು ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ ಮತ್ತು  ಮೆಕ್ಸಿಕೊಗೆ ಅಪ್ಪಳಿದ ಕ್ಷುದ್ರಗ್ರಹ ಕಾರಣ ಎಂಬುದನ್ನು ಹೊಸ ಅಧ್ಯಯನವೊಂದು ಖಚಿತ ಪಡಿಸಿದೆ.

ಇತ್ತೀಚೆಗಷ್ಟೇ ಅಭಿವೃದ್ಧಿ ಪಡಿಸಲಾಗಿರುವ ‘ಕಾರ್ಬೊನೇಟ್‌ ಕ್ಲಂಪ್ಡ್‌ ಐಸೊಟೋಪ್‌ ಪ್ಯಾಲಿಯೊ ಥರ್ಮೋಮೀಟರ್‌’ ಎಂಬ ಹೊಸ ವಿಧಾನದ ಮೂಲಕ ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದ ಆ್ಯಂಡ್ರಿಯಾ ಡಟ್ಟನ್‌ ಅವರು ಮಿಚಿಗನ್‌ ವಿಶ್ವವಿದ್ಯಾಲಯದ ಸಹೋದ್ಯೋಗಿಗಳ ನೆರವಿನಿಂದ ಈ ಅಧ್ಯಯನ ನಡೆಸಿದ್ದರು.

ಈ ವಿಧಾನವನ್ನು ಬಳಸಿಕೊಂಡು ಪ್ರಾಚೀನ ಕಾಲದಲ್ಲಿದ್ದ ಅಂಟಾರ್ಕ್ಟಿಕಾ ಸಾಗರದ ಉಷ್ಣಾಂಶವನ್ನು ಪುನರ್‌ ಸೃಷ್ಟಿಸಲು ಅಧ್ಯಯನಕಾರರು ಯಶಸ್ವಿಯಾಗಿದ್ದಾರೆ.

ಜೊತೆಗೆ, ಅಧ್ಯಯನದ ಭಾಗವಾಗಿ ಅಂಟಾರ್ಕ್ಟಿಕಾ ಸಾಗರದಲ್ಲಿರುವ  ಸೆಮೋರ್‌ ದ್ವೀಪದಲ್ಲಿ ಪತ್ತೆಯಾಗಿದ್ದ ಮೃದ್ವಂಗಿಗಳ ಪಳೆಯುಳಿಕೆಗಳ 29 ಕೋಶಗಳಲ್ಲಿದ್ದ ರಾಸಾಯನಿಕ ಸಂಯೋಜನೆಗಳನ್ನು ವಿಶ್ಲೇಷಿಸಿದ್ದಾರೆ.

‘ಪ್ರಾಚೀನ ಸಾಗರದ ಉಷ್ಣಾಂಶ 14 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು (–10 ಡಿಗ್ರಿ ಸೆಲ್ಸಿಯಸ್‌) ಹೆಚ್ಚಾಗಿದ್ದು ಅಧ್ಯಯನದಿಂದ ತಿಳಿದು ಬಂದಿದೆ. ಇದು ಕ್ರಿಟೇಷಿಯ ಅವಧಿ (ಮಧ್ಯಜೀವಿ ಕಲ್ಪದ ಉತ್ತರಾರ್ಧ) ಅಂತ್ಯದ ವೇಳೆಗೆ ಸಂಭವಿಸಿದ, ಭೂಮಿಯ ಉಷ್ಣಾಂಶವನ್ನು ಹೆಚ್ಚಿಸಿದ ಎರಡು ಘಟನೆಗಳಿಗೆ ಸಂಬಂಧ ಕಲ್ಪಿಸುತ್ತದೆ’ ಎಂದು ಅಧ್ಯಯನಕಾರರು ಹೇಳಿದ್ದಾರೆ.

‘ಒಂದು,  ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ; ಮತ್ತೊಂದು ಮೆಕ್ಸಿಕೊದ ಯುಕಟನ್‌ ದ್ವೀಪಕಲ್ಪಕ್ಕೆ ಕ್ಷುದ್ರಗ್ರಹ ಅಥವಾ ಧೂಮಕೇತು ಅಪ್ಪಳಿಸಿದ ಘಟನೆ’ ಎಂದು ಅವರು ವಿವರಿಸಿದ್ದಾರೆ.

ಕ್ರಿಟೇಷಿಯ ಅವಧಿ ಅಂತ್ಯ ಮತ್ತು ಪ್ರಾಚೀನ ಶಿಲಾಯುಗದ ಆರಂಭ ಅವಧಿ ಅಂದರೆ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳು  ಸಾಮೂಹಿಕವಾಗಿ ನಾಶ ಹೊಂದಿವೆ ಎಂದು ನಂಬಲಾಗಿದೆ.

ಈ ಅವಧಿಯಲ್ಲಿ ಭೂಮಿಯಲ್ಲಿ ಇರಿಡಿಯಂ (ಪ್ಲಾಟಿನಂ ಬಳಗದ ರಾಸಾಯನಿಕ ಮೂಲವಸ್ತು) ಅಂಶ ಇತ್ತು ಎಂಬುದನ್ನು ವಿಜ್ಞಾನಿಗಳು ತೋರಿಸಿದ್ದಾರೆ. ಇದೇ ಇರಿಡಿಯಂ ಆಕಾಶಕಾಯಗಳಾದ ಕ್ಷುದ್ರಗ್ರಹ, ಉಲ್ಕೆಗಳು ಮತ್ತು ಧೂಮಕೇತುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಕ್ರಿಟೇಷಿಯ ಅವಧಿಯಲ್ಲಿದ್ದ ಜೀವಿಗಳೆಲ್ಲ ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ನಾಶ ಹೊಂದಿದ್ದವು ಎಂಬ ವಾದಕ್ಕೆ ಇದು ಮತ್ತಷ್ಟು ಪುಷ್ಟಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.