ADVERTISEMENT

ಮತಾಂತರ ತಡೆಗೆ ಸಂವಿಧಾನ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 19:30 IST
Last Updated 18 ಆಗಸ್ಟ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ದೇಶದ ದಕ್ಷಿಣ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವುದನ್ನು ತಡೆಯಲು ಸಂವಿಧಾನಕ್ಕೆ ತಿದ್ದುಪಡಿ ತಂದು ಹೊಸ ಕಾಯ್ದೆ ರೂಪಿಸುವಂತೆ ಸಿಂಧ್ ಸರ್ಕಾರಕ್ಕೆ ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಸೂಚಿಸಿದ್ದಾರೆ.

ಈ ಸಂಬಂಧ ಕರಾಚಿಯಲ್ಲಿ ನಡೆದ ಸಭೆಯಲ್ಲಿ ಪ್ರಾಂತೀಯ ಕಾನೂನು ಸಚಿವ ಅಯಾಜ್ ಸೂಮ್ರ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ಸಂವಿಧಾನ ತಿದ್ದುಪಡಿಗೆ ಅನುವಾಗುವಂತೆ ಕರಡು ಕಾಯ್ದೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಿಂಧ್ ಮುಖ್ಯಮಂತ್ರಿ ಖ್ವಾಯಿಂ ಅಲಿ ಷಾ ಅವರಿಗೆ ಜರ್ದಾರಿ ನಿರ್ದೇಶನ ನೀಡಿದ್ದಾರೆ.

ಈ ಸಮಿತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿಂದೂ ಪಂಚಾಯತ್‌ನ ನಾಯಕರು ಸೇರಿರುತ್ತಾರೆ ಎಂದು ತನ್ನ ಮೂಲಗಳು ಉಲ್ಲೇಖಿಸಿ `ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ.

ಮುಖ್ಯಮಂತ್ರಿ ಷಾ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಂಸದೆಯಾಗಿರುವ ಜರ್ದಾರಿಯವರ ಸಹೋದರಿ ಫರ್ಯಾಲ್ ತಾಲ್ಪುರ್ ಅವರು ಹಿಂದೂಗಳ ಸ್ಥಿತಿಗತಿಯ ಬಳಿಕ ಜರ್ದಾರಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಕೇವಲ ಮತಾಂತರಕ್ಕೆ ಸಂಬಂಧಿಸಿದ ಊಹಾಪೋಹಗಳ ಆಧಾರದ ಮೇಲೆ ಹಿಂದೂಗಳು ಭಾರತಕ್ಕೆ ವಲಸೆ ಹೋಗುತ್ತಿದ್ದಾರೆಂಬ ವರದಿಗಳಿವೆ. ಆದರೆ ಬಲವಂತ ಮತಾಂತರಕ್ಕೆ ವಿರುದ್ಧವಾಗಿ ಕಾನೂನು ಮಾಡಬೇಕೆಂದು ಹಿಂದೂ ಸಮುದಾಯದವರು ಕೂಡ ಆಗ್ರಹಿಸಿದ್ದಾರೆ ಎಂಬುದಾಗಿ ಷಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮೂಲಗಳು ಹೇಳಿವೆ.

ಕಾಯ್ದೆಯ ಕರಡು ಸಿದ್ಧಪಡಿಸುವುದಕ್ಕೂ ಮುನ್ನ ಜಾಕೊಬಾಬಾದ್‌ಗೆ ಭೇಟಿ ನೀಡಿ, ಹಿಂದೂ ಸಮುದಾಯದ ಪ್ರತಿನಿಧಿಗಳೊಂದಿಗೆ ಮಾತನಾಡುವಂತೆ ತಾಲ್ಪುರ್ ಹಾಗೂ ಷಾಗೆ ಜರ್ದಾರಿ ತಿಳಿಸಿದ್ದಾರೆ.

ಬಲವಂತರ ಮತಾಂತರ, ಹಣಕ್ಕಾಗಿ ಅಪಹರಣ ಹಾಗೂ ಬಲಾತ್ಕಾರದ ವಸೂಲಿ ಇನ್ನಿತರ ಕಿರುಕುಳದ ಕಾರಣ ಸಿಂಧ್ ಪ್ರಾಂತ್ಯದಿಂದ ಭಾರತಕ್ಕೆ ವಲಸೆ ಹೊರಟ ಹಿಂದೂಗಳನ್ನು ಭೇಟಿಯಾಗಿ ಸಮಸ್ಯೆ ಆಲಿಸಲು ಮೂವರು ಸಂಸದರ ಸಮಿತಿಯನ್ನು ಜರ್ದಾರಿ  ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.