ADVERTISEMENT

ಮಿತಿಮೀರಿದ ಇಂಗಾಲ ಹೊರಸೂಸುವಿಕೆ

ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಸಂಸ್ಥೆ ವರದಿ

ಏಜೆನ್ಸೀಸ್
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಮಿತಿಮೀರಿದ ಇಂಗಾಲ ಹೊರಸೂಸುವಿಕೆ
ಮಿತಿಮೀರಿದ ಇಂಗಾಲ ಹೊರಸೂಸುವಿಕೆ   

ಜಿನೀವಾ: ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಸಾಂದ್ರತೆ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಪ್ಯಾರಿಸ್ ಹವಾಮಾನ ವೈಪರೀತ್ಯ ಒಪ್ಪಂದದ ಕಠಿಣ ಕ್ರಮಗಳನ್ನು ಪಾಲಿಸದಿದ್ದರೆ ಅಪಾಯ ಎದುರಾಗಲಿದೆ ಎಂದು ಅದು ಎಚ್ಚರಿಕೆ ನೀಡಿದೆ.

‘2016ರಲ್ಲಿ ದಾಖಲೆಯ ವೇಗದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ವಾತಾವರಣವನ್ನು ಸೇರಿದೆ’ ಎಂದು ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಸಂಸ್ಥೆ ತಿಳಿಸಿದೆ.

2015ರಲ್ಲಿ 400 ಪಿಪಿಎಂನಿಂದ (ಪಾರ್ಟ್ಸ್ ಪರ್ ಮಿಲಿಯನ್) 2016ರಲ್ಲಿ 403.3 ಪಿಪಿಎಂಗೆ ಹೆಚ್ಚಳವಾಗಿದೆ. ಮಾನವನ ಚಟುವಟಿಕೆಗಳು ಹಾಗೂ ಪ್ರಬಲ ಎಲ್‌ನಿನೊ ವಿದ್ಯಮಾನಗಳೂ ಇದಕ್ಕೆ ಕಾರಣ ಎಂದು ಸಂಸ್ಥೆ ಹೇಳಿದೆ.

ADVERTISEMENT

1750ರಿಂದ ವಾತಾವರಣಕ್ಕೆ ಸೇರುತ್ತಿರುವ ಅಪಾಯಕಾರಿ ಅನಿಲಗಳ ಮೇಲೆ ನಿಗಾ ಇಟ್ಟಿರುವ ಸಂಸ್ಥೆಯು ತನ್ನ ವಾರ್ಷಿಕ ವರದಿಯಲ್ಲಿ ಇದನ್ನು ಪ್ರಕಟಿಸಿದೆ.

ವಾತಾವರಣದಲ್ಲಿ ಈಗಿರುವ ಇಂಗಾಲದ ಡೈಆಕ್ಸೈಡ್‌ನ ಸಾಂದ್ರತೆ ಪ್ರಮಾಣವು ಸುಮಾರು 30 ಲಕ್ಷ ವರ್ಷಗಳ ಹಿಂದೆಯೂ ಭೂಮಿಯ ಮೇಲೆ ಕಂಡುಬಂದಿತ್ತು. ಆಗ ಸಮುದ್ರಮಟ್ಟವು 20 ಮೀಟರ್ ಏರಿಕೆಯಾಗಿತ್ತು ಎಂದೂ ವರದಿ ಹೇಳಿದೆ.

‘ಇಂಗಾಲ ಹಾಗೂ ಇತರೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತೀವ್ರಗತಿಯಲ್ಲಿ ಕಡಿತಗೊಳಿಸದಿದ್ದಲ್ಲಿ, ಈ ಶತಮಾನದ ಕೊನೆ ಹೊತ್ತಿಗೆ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಲಿದೆ’ ಎಂದು ಸಂಸ್ಥೆ ಮುಖ್ಯಸ್ಥ ಪೆಟ್ಟೆರಿ ತಾಲಸ್ ಅವರು ಹೇಳಿದ್ದಾರೆ.

2015ರಲ್ಲಿ 196 ದೇಶಗಳು ಸಹಿ ಹಾಕಿದ್ದ ಐತಿಹಾಸಿಕ ಪ್ಯಾರಿಸ್ ಹವಾಮಾನ ವೈಪರೀತ್ಯ ತಡೆ ಒಪ್ಪಂದವು ಸಂದಿಗ್ಧತೆಯಲ್ಲಿ ಸಿಲುಕಿದೆ. ನಿಯಮಗಳಲ್ಲಿ ಮಾರ್ಪಾಡು ಮಾಡುವಂತೆ ಪಟ್ಟು ಹಿಡಿದಿರುವ ಅಮೆರಿಕ, ಒಪ್ಪಂದದಿಂದ ಹೊರಬರುವುದಾಗಿ ಬೆದರಿಕೆಯನ್ನೂ ಒಡ್ಡಿದೆ.

ಮುಂದಿನ ವಾರ ಜರ್ಮನಿಯ ಬಾನ್‌ನಲ್ಲಿ ಹವಾಮಾನ ವೈಪರೀತ್ಯ ಕುರಿತ ಸಮಾವೇಶ ನಿಗದಿಯಾಗಿದೆ.

‘ಈ ಸಂಖ್ಯೆಗಳು ಸುಳ್ಳು ಹೇಳುತ್ತಿಲ್ಲ. ಅತಿಹೆಚ್ಚು ಇಂಗಾಲದ ಅನಿಲವನ್ನು ನಾವು ಹೊರಸೂಸುತ್ತಿದ್ದೇವೆ. ಇದು ಸಂಪೂರ್ಣ ಬದಲಾಗಬೇಕಿದೆ’ ಎಂದು ವಿಶ್ವಸಂಸ್ಥೆಯ ಎರಿಕ್ ಸೋಲ್ಹಿಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.