ADVERTISEMENT

ಮುಷರಫ್ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

ಇಸ್ಲಾಮಾಬಾದ್ (ಪಿಟಿಐ): ಮುಂದಿನ  ತಿಂಗಳ 11 ರಂದು ಪಾಕಿಸ್ತಾನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಚಿತ್ರಾಲ್ ಕ್ಷೇತ್ರದಿಂದಲೂ ಸ್ಪರ್ಧಿಸದಂತೆ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಷರಫ್‌ಗೆ ಪಾಕ್ ಚುನಾವಣಾ ನ್ಯಾಯಮಂಡಳಿ ನಿರ್ಬಂಧ ಹೇರಿದೆ.

ಈ ರೀತಿ ಆದೇಶಿಸುವ ಮೂಲಕ ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ತಣ್ಣಿರು ಎರಚಿದೆ. ಚಿತ್ರಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಮುಷರಫ್ ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿತ್ತು. ಆದರೆ ಚುನಾವಣಾ ನ್ಯಾಯಮಂಡಳಿಯು ಮುಷರಫ್ ಅಭ್ಯರ್ಥಿತನವನ್ನು ತಿರಸ್ಕರಿಸಿದ ಕಾರಣ ಸಾರ್ವತ್ರಿಕ ಚುನಾವಣೆ ನಡೆಯುವ  ಸುಮಾರು ಒಂದು ತಿಂಗಳ ಮೊದಲೇ ಸಂಸತ್ತನ್ನು ಪ್ರವೇಶಿಸುವ ಮುಷರಫ್ ಯತ್ನ ಅಂತ್ಯಕಂಡಿದೆ.

69 ವರ್ಷದ ಮುಷರಫ್, ಚಿತ್ರಾಲ್, ಕರಾಚಿ, ಕಸೂರ್ ಹಾಗೂ ಇಸ್ಲಾಮಾಬಾದ್- ಈ  ನಾಲ್ಕು ಸಂಸತ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದ್ದರು.
ಮಂಗಳವಾರ ಬೆಳಿಗ್ಗೆ ಇಸ್ಲಾಮಾಬಾದ್ ಹಾಗೂ ಪಂಜಾಬ್ ಪ್ರಾಂತ್ಯದ ಕಸೂರ್ ಕ್ಷೇತ್ರಗಳಿಂದ ಸ್ಪರ್ಧಿಸದಂತೆ ಮುಷರಫ್‌ಗೆ, ಮತ್ತೆರಡು ಚುನಾವಣಾ ನ್ಯಾಯಮಂಡಳಿಗಳು ನಿರ್ಬಂಧಿಸಿದ್ದವು.

ಹೈಕೋರ್ಟ್ ನ್ಯಾಯಮೂರ್ತಿ ಗಳನ್ನು ಒಳಗೊಂಡ ಚುನಾವಣಾ ನ್ಯಾಯಮಂಡಳಿಗಳು, ನ್ಯಾಷನಲ್ ಅಸೆಂಬ್ಲಿ ಕ್ಷೇತ್ರಗಳಿಗೆ ಸ್ಪರ್ಧಿಸಿದ್ದ ಮುಷರಫ್ ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ ಕ್ರಮವನ್ನು ಎತ್ತಿಹಿಡಿದಿವೆ. ಕರಾಚಿ ಸಂಸತ್ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕಾರಗೊಂಡಿದ್ದನ್ನು ಪ್ರಶ್ನಿಸಿ ಮುಷರಫ್ ಸಲ್ಲಿಸಿದ್ದ ಮನವಿಯನ್ನು ಮತ್ತೊಂದು ಚುನಾವಣಾ ನ್ಯಾಯ ಮಂಡಳಿ ವಜಾಗೊಳಿಸಿದ ಒಂದು ದಿನದ ಬಳಿಕ ಈ ಹೊಸ ಬೆಳವಣಿಗೆ ನಡೆದಿವೆ.

ಚಿತ್ರಾಲ್ ಪ್ರಕರಣದ ಹಿನ್ನೆಲೆ: ಪೆಶಾವರ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಒಳಗೊಂಡ ಚುನಾವಣಾ ನ್ಯಾಯಮಂಡಳಿ, ಚಿತ್ರಾಲ್ ಜಿಲ್ಲೆಯ ಚುನಾವಣಾ ಅಧಿಕಾರಿ ಮುಷರಫ್ ಅವರ ನಾಮಪತ್ರಗಳನ್ನು ಸ್ವೀಕರಿಸಿದರ ವಿರುದ್ಧ ಐವರು ಮುಷರಫ್ ವಿರೋಧಿಗಳು ಸಲ್ಲಿಸಿದ ಮನವಿಯನ್ನು ಮಂಗಳವಾರ ಸ್ವೀಕರಿಸಿದೆ.
2007ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಮುಷರಫ್ ಸಂವಿಧಾನವನ್ನು ಉಲ್ಲಂಘಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಮುಷರಫ್ ವಿರೋಧಿಗಳು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT