ADVERTISEMENT

ಮೂರು ವಿದ್ಯಾರ್ಥಿಗಳ ಕಾಲ್ಪಟ್ಟಿ ತೆಗೆದ ವಲಸೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 16:50 IST
Last Updated 17 ಫೆಬ್ರುವರಿ 2011, 16:50 IST

ವಾಷಿಂಗ್ಟನ್ (ಪಿಟಿಐ): ಟ್ರೈವ್ಯಾಲಿ ವಿಶ್ವವಿದ್ಯಾಲಯದ ವೀಸಾ ಹಗರಣದಿಂದಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಮೆರಿಕ ಸರ್ಕಾರವು ಇನ್ನೂ ಮೂವರು ಭಾರತೀಯ ವಿದ್ಯಾರ್ಥಿಗಳ ಕಾಲ್ಪಟ್ಟಿ ತೆಗೆದುಹಾಕಿದೆ.

‘ಯಾರೋ ಮಾಡಿದ ತಪ್ಪಿಗಾಗಿ ಭಾರತೀಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ ಮತ್ತು ಸಮಸ್ಯೆಯನ್ನು ಬಗೆಹರಿಸಲು ಕೈಗೊಂಡ ಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂಬ ಅರಿವೂ ನಮಗಿದೆ. ಭಾರತ ಸರ್ಕಾರದ ಆತಂಕ ನಮಗೆ ಅರ್ಥವಾಗುತ್ತದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಪಿ. ಜೆ. ಕ್ರೌಲಿ ತಿಳಿಸಿದ್ದಾರೆ.

‘ವೀಸಾ ನೀಡಿಕೆಯಲ್ಲಿ ಮೋಸ ಆಗಿರುವುದು ಆತಂಕಕಾರಿ ವಿಚಾರವಾಗಿರುವುದರಿಂದ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿ ಭಾರತ ಸರ್ಕಾರದ ಮತ್ತು ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಈ ನಡುವೆ, ವಲಸೆ ಮತ್ತು ಸುಂಕ ಜಾರಿ ಇಲಾಖೆಯ ಅಧಿಕಾರಿಗಳು ಇನ್ನೂ ಮೂವರು ಭಾರತೀಯ ವಿದ್ಯಾರ್ಥಿಗಳ ಕಾಲ್ಪಟ್ಟಿಯನ್ನು ತೆಗೆದು ಅವರ ಪಾಸ್‌ಪೋರ್ಟ್‌ಗಳನ್ನು ವಾಪಸ್ ಮಾಡಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ಭಾರತದ ಕಾನ್ಸುಲ್ ಜನರಲ್ ಸುಶ್ಮಿತಾ ಗಂಗೂಲಿ ಥಾಮಸ್ ತಿಳಿಸಿದ್ದಾರೆ.

ಕಳೆದ ವಾರ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಕಾಲ್ಪಟ್ಟಿಯನ್ನು ತೆಗೆಯಲಾಗಿದೆ. ಒಟ್ಟು 18 ವಿದ್ಯಾರ್ಥಿಗಳಿಗೆ ಕಾಲ್ಪಟ್ಟಿ ಹಾಕಲಾಗಿತ್ತು. ಒಟ್ಟು ಐದು ಜನರ ಕಾಲ್ಪಟ್ಟಿಯನ್ನು ತೆಗೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.