ADVERTISEMENT

ಮೆಮೊಗೇಟ್ ಹಗರಣ: ಇಜಾಜ್ ಹಾಜರಿಗೆ ಫೆ.9ರ ಗಡುವು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ):  ಮೆಮೊಗೇಟ್ ಹಗರಣದ ಪ್ರಮುಖ ಸಾಕ್ಷಿ  ಪಾಕ್ ಮೂಲದ ಅಮೆರಿಕ ಉದ್ಯಮಿ ಮನ್ಸೂರ್ ಇಜಾಜ್ ಮಂಗಳವಾರ  ಇಲ್ಲಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ರಚಿಸಿದ ಆಯೋಗದ ಮುಂದೆ  ಹಾಜರಾಗಲಿಲ್ಲ.

ಆಯೋಗದ ಮುಂದೆ ಹಾಜರಾಗಬೇಕಿದ್ದರೆ ತಮಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ಇಜಾಜ್ ಕೋರಿದ್ದರು.
 ಆಯೋಗದ ಸೂಚನೆ ಮೇರೆಗೆ ಅವರಿಗೆ ಭದ್ರತೆ ಒದಗಿಸಲು ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಒಪ್ಪಿಗೆ ನೀಡಿದ್ದರು. ಆದಾಗ್ಯೂ ಇಜಾಜ್ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಅವರ ಪರ ವಕೀಲರು  ತಿಳಿಸಿದರು.

ಇಲ್ಲಿನ ಹೈಕೋರ್ಟ್ ಕಟ್ಟಡ ಸಂಕೀರ್ಣದಲ್ಲಿ ವಿಚಾರಣೆ ನಡೆಸಿದ ಆಯೋಗವು ಫೆ. 9ರೊಳಗೆ ಆಯೋಗದ ಮುಂದೆ ಹಾಜರಾಗಿ ಸಾಕ್ಷ್ಯ ಹೇಳುವಂತೆ ಗಡುವು ನೀಡಿತು.  ತಮ್ಮ ಕಕ್ಷಿದಾರರು ಬಂಧನದ ಆತಂಕದಲ್ಲಿ ಇದ್ದಾರೆ. ಆದ್ದರಿಂದ ಅವರು ಹಾಜರಾಗಿಲ್ಲ ಎಂದು ಇಜಾಜ್ ಅವರ ವಕೀಲರು ಆಯೋಗಕ್ಕೆ ವಿವರಣೆ ನೀಡಿದರು.

 ಜನವರಿ 16ರಂದು ಹಾಜರಾಗಲು ವಿಫಲರಾದ ಇಜಾಜ್‌ಗೆ, ಜ. 24ಕ್ಕೆ ಹಾಜರಾಗುವಂತೆ ಆಯೋಗವು ಸೂಚಿಸಿತ್ತು.

ಪಾಕ್ ಸರ್ಕಾರ ತಮ್ಮ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಯಾವುದೇ ಭರವಸೆ ನೀಡದ ಕಾರಣ ತಮ್ಮ ಸಾಕ್ಷ್ಯವನ್ನು ಲಂಡನ್ ಅಥವಾ ಜ್ಯೂರಿಚ್‌ನಲ್ಲಿ ದಾಖಲಿಸಿಕೊಳ್ಳುವಂತೆ ಮನ್ಸೂರ್ ಇಜಾಜ್ ಅವರು ಆಯೋಗವನ್ನು ಕೋರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.