ADVERTISEMENT

ಮೊಬೈಲ್‌ನಿಂದ ಕ್ಯಾನ್ಸರ್: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST

ನ್ಯೂಯಾರ್ಕ್/ ಮೆಲ್ಬರ್ನ್ (ಪಿಟಿಐ): ಮೊಬೈಲ್ ಫೋನ್ ಅಥವಾ ವೈರ್‌ಲೆಸ್ ಉಪಕರಣಗಳ ಅತಿಯಾದ ಬಳಕೆಯಿಂದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ಎಚ್ಚರಿಸಿದೆ. ಅದರ ಬದಲಿಗೆ ಈ ಉಪಕರಣಗಳ ಸಂಪರ್ಕಕ್ಕೆ ನೇರವಾಗಿ ಬರದಂತೆ ಹ್ಯಾಂಡ್‌ಫ್ರೀ ಅಥವಾ ಸಾಧ್ಯವಿದ್ದಲ್ಲೆಲ್ಲ ಸ್ಥಿರ ದೂರವಾಣಿಗಳನ್ನು ಬಳಸುವಂತೆ ಅದು ಸಲಹೆ ನೀಡಿದೆ.

ಇಂಥ ಉಪಕರಣಗಳಿಂದ ವಿದ್ಯುತ್ಕಾಂತೀಯ ತರಂಗಗಳು ಹೊರಹೊಮ್ಮುತ್ತವೆ. ಅವು ಕ್ಯಾನ್ಸರ್‌ಜನಕವಾಗಿರುವ ಸಾಧ್ಯತೆ ಹೆಚ್ಚು ಎಂದು ಅಂತರ ರಾಷ್ಟ್ರೀಯ ಕ್ಯಾನ್ಸರ್ ಅಧ್ಯಯನ ಸಂಸ್ಥೆಯು (ಐಎಆರ್‌ಸಿ) ಫ್ರಾನ್ಸ್‌ನ ಲಿಯಾನ್‌ನಲ್ಲಿ ಹಮ್ಮಿಕೊಂಡಿದ್ದ 8 ದಿನಗಳ ಸಮ್ಮೇಳನದಲ್ಲಿ ಘೋಷಿಸಿದೆ. 14 ದೇಶಗಳ 31 ಪರಿಣತರು ಸೋಂಕು ಶಾಸ್ತ್ರದ ಆಧಾರದ ಮೇಲೆ ಕ್ಯಾನ್ಸರ್ ಪ್ರಕರಣಗಳ ಅಧ್ಯಯನ ನಡೆಸಿ ಈ ವರ್ಗೀಕರಣಕ್ಕೆ ಬಂದಿದ್ದಾರೆ.

ಗ್ಲೈಮಾ ಎಂಬ ತೀವ್ರತರನಾದ ಮೆದುಳು ಕ್ಯಾನ್ಸರ್‌ನ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಆದರೂ ಈ ವಿಷಯದಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಸಂಸ್ಥೆ ಹೇಳಿಕೆಯಲ್ಲಿ ವಿವರಿಸಿದೆ. ಸದ್ಯ ವಿಶ್ವದಾದ್ಯಂತ 5 ಶತಕೋಟಿ ಮೊಬೈಲ್ ಗ್ರಾಹಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.