ADVERTISEMENT

ಲಾಗೋಸ್ ವಿಮಾನ ದುರಂತ: ಪ್ರಯಾಣಿಕರು, ನಿವಾಸಿಗಳು ಸೇರಿ ಭಾರಿ ಸಾವಿನ ಭೀತಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 10:20 IST
Last Updated 4 ಜೂನ್ 2012, 10:20 IST
ಲಾಗೋಸ್ ವಿಮಾನ ದುರಂತ: ಪ್ರಯಾಣಿಕರು, ನಿವಾಸಿಗಳು ಸೇರಿ ಭಾರಿ ಸಾವಿನ ಭೀತಿ
ಲಾಗೋಸ್ ವಿಮಾನ ದುರಂತ: ಪ್ರಯಾಣಿಕರು, ನಿವಾಸಿಗಳು ಸೇರಿ ಭಾರಿ ಸಾವಿನ ಭೀತಿ   

ಲಾಗೋಸ್ (ಪಿಟಿಐ): ಲಾಗೋಸ್ ವಿಮಾನ ನಿಲ್ದಾಣದ ಸಮೀಪ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಅಗ್ನಿಗೆ ಆಹುತಿಯಾದ ವಿಮಾನದಲ್ಲಿದ್ದ ಎಲ್ಲಾ 153 ಪ್ರಯಾಣಿಕರಲ್ಲದೆ ಇನ್ನೂ ಭಾರಿ ಸಂಖ್ಯೆಯ ಜನ ಈ ದುರಂತದಲ್ಲಿ ಅಸುನೀಗಿದ್ದಾರೆ ಎಂಬ ಭಯ ನೈಜೀರಿಯಾದಲ್ಲಿ ಸೋಮವಾರ ಆವರಿಸಿದೆ.
 
ಭಾರತೀಯ ಕಂಪೆನಿಯೊಂದರ ನಿರ್ವಹಣೆಯಲ್ಲಿದ್ದ ನತದೃಷ್ಟ ದಾನಾ ಏರ್ ವಿಮಾನ ಜನ ನಿಬಿಡ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸಿರುವ ಪರಿಣಾಮವಾಗಿ ವಿಮಾನದಲ್ಲಿ ಇದ್ದವರಲ್ಲದೆ ಭಾರಿ ಸಂಖ್ಯೆಯ ಜನ ಮೃತರಾಗಿರುವ ಭೀತಿಯಿದೆ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ನೈಜೀರಿಯಾ ವಿಮಾನಯಾನ ಅಧಿಕಾರಿಗಳು ಸೋಮವಾರ ಇಲ್ಲಿ ಹೇಳಿದರು.

62 ಶವಗಳನ್ನು ಈವರೆಗೆ ಪತ್ತೆ ಹಚ್ಚಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ತಿಳಿಸಿದರು.ಅಪಘಾತ ಸ್ಥಳದಲ್ಲಿ ಇನ್ನೂ ಹೊಗೆಯಾಡುತ್ತಿರುವ ವಿಮಾನದ ಅವಶೇಷಗಳ ಮೇಲೆ ಬೆಂಕಿ ಆರಿಸುವ ಸಲುವಾಗಿ ಅಗ್ನಿಶಾಮಕ ವಾಹನಗಳು ಮತ್ತು ನೀರು ಟ್ಯಾಂಕರುಗಳು ಕಾರ್ಯ ನಿರತವಾಗಿವೆ.

ರಾಜಧಾನಿ ಅಬುಜಾದಿಂದ ಲಾಗೋಸ್ ನತ್ತ ಹೊರಟಿದ್ದ ದಾನಾ ಏರ್ ಬೋಯಿಂಗ್ ಎಂಡಿ-83 ವಿಮಾನದ ಲಾಗೋಸ್ ನಲ್ಲಿ ನಿಲ್ದಾಣದ ಸಮೀಪ ಹಲವಾರು ಕಟ್ಟಡಗಳಿಗೆ ಡಿಕ್ಕಿ ಹೊಡೆದು ನಂತರ ಬೆಂಕಿಯ ಉಂಡೆಯಾಗಿ ನೆಲಕ್ಕೆ ಅಪ್ಪಳಿಸಿತ್ತು. ವಿಮಾನ ಅಪ್ಪಳಿಸಿದ್ದರಿಂದ ಆಸು ಪಾಸಿನ ಕಟ್ಟಡಗಳೂ ಹೊತ್ತಿಕೊಂಡು ಉರಿದವು.

ವಿಮಾನ ಪ್ರಯಾಣಿಕರಲ್ಲಿ ಯಾರೂ ಬದುಕಿ ಉಳಿದಿಲ್ಲ ಎಂದು ಅಧಿಕಾರಿಗಳು ದೃಢ ಪಡಿಸಿದ್ದಾರೆ. ಆದರೂ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ತಿಳಿಸಿದರು.

ಒಂದು ಇಗರ್ಜಿ, ಮುದ್ರಣಾಲಯ ಮತ್ತು ಎರಡು ಮಹಡಿಯ ವಸತಿ ಕಟ್ಟಡವಿದ್ದ ಜಾಗದಲ್ಲಿ ವಿಮಾನ ಪತನಗೊಂಡಿದೆ ಎಂದು ಈ ಪ್ರದೇಶದ ನಿವಾಸಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.