ADVERTISEMENT

ಲಾಬಿಕೋರತನ ತಪ್ಪಲ್ಲ: ವಾಲ್ ಮಾರ್ಟ್ 'ಲಾಬಿ'ಗೆ ಅಮೆರಿಕ ಅಸ್ತು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:13 IST
Last Updated 11 ಡಿಸೆಂಬರ್ 2012, 10:13 IST

ವಾಷಿಂಗ್ಟನ್ (ಪಿಟಿಐ): ಭಾರತೀಯ ಮಾರುಕಟ್ಟೆಗೆ ಪ್ರವೇಶ ಗಿಟ್ಟಿಸಲು ಅಲ್ಲಿನ ಶಾಸನಕರ್ತರ ಬಳಿ ವಾಲ್‌ಮಾರ್ಟ್ ಮಾಡಿರುವ ಲಾಬಿಯಿಂದ  ಅಮೆರಿಕದ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಹೇಳುವ ಮೂಲಕ ವಾಲ್‌ಮಾರ್ಟ್‌ನ ನೂರಾರು ಕೋಟಿ ರೂ ಲಾಬಿಗೆ ಅಮೆರಿಕ ಮಂಗಳವಾರ  ಅಧಿಕೃತ ಮುದ್ರೆಯನ್ನೊತ್ತಿದೆ.

2008ರಿಂದೀಚೆಗೆ ವಾಲ್‌ಮಾರ್ಟ್  ಲಾಬಿಗಾಗಿ125 ಕೋಟಿ ರೂಗಳನ್ನು ವ್ಯಯಿಸಿದೆ ಎಂದು ಹೇಳಿಕೊಂಡ ನಂತರ ಭಾರತದಲ್ಲಿ ಪ್ರತಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಒಳಾಡಳಿತ ಸಚಿವಾಲಯದ ವಕ್ತಾರರು ಈ ಸಂಬಂಧ ಅಮೆರಿಕದ ಯಾವ ಕಾನೂನುಗಳೂ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

1995ರ ಲಾಬಿ ಪ್ರಕಟಣಾ ಕಾನೂನಿನಂತೆ ಲಾಬಿ ಎಂಬುದು ಅಮೆರಿಕದಲ್ಲಿ ಕಾನೂನಬದ್ಧವಾದ ಚಟುವಟಿಕೆಯಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ 2007ರ ಮುಕ್ತ ಸರ್ಕಾರಿ ಕಾಯಿದೆ ಪ್ರಕಾರವೂ ಕಂಪೆನಿಗಳು ತಮ್ಮ ಉದ್ದೇಶ ಸಾಧನೆಗಾಗಿ ಲಾಬಿಕೋರರನ್ನು ನೇಮಿಸಿಕೊಳ್ಳಬಹುದಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.

ಭಾರತದ ಮಟ್ಟಿಗೆ ಕಾನೂನು ಉಲ್ಲಂಘನೆಯಾಗಿರುವುದೇ ಇಲ್ಲವೇ ಎಂಬುದನ್ನು ತಾವು ಭಾರತಕ್ಕೆ ಬಿಡುವುದಾಗಿ ತಿಳಿಸಿದರು.

ಏತನ್ಮಧ್ಯೆ ಜಗತ್ತಿನ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದ ದೈತ್ಯ ವಾಲ್‌ಮಾರ್ಟ್ ತಾನು ಯಾವುದೇ ತಪ್ಪೆಸಗಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.