ಕೈರೊ/ಪ್ಯಾರಿಸ್ (ಪಿಟಿಐ): ಗಲಭೆ ಪೀಡಿತ ಲಿಬಿಯಾದಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಅಧ್ಯಕ್ಷ ಮುಅಮ್ಮರ್ ಗಡಾಫಿ ಯುದ್ಧ ವಿಮಾನಗಳನ್ನು ಬಳಸುತ್ತಿದ್ದು, ಈ ಕ್ರಮದ ವಿರುದ್ಧ 22 ದೇಶಗಳ ಮುಖಂಡರು ಪ್ಯಾರಿಸ್‌ನಲ್ಲಿ ಶನಿವಾರ ತುರ್ತು ಸಭೆ ನಡೆಸಿ, ತಕ್ಷಣ ಮಿಲಿಟರಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದಾರೆ.
ಈ ನಡುವೆ ಲಿಬಿಯಾದ ಎರಡನೇ ಅತಿದೊಡ್ಡ ನಗರ ಬೆಂಘಝಿ ಮೇಲೆ ವಿಮಾನ ಹಾರಾಟ ನಿಷೇಧ ಪ್ರವೇಶವೆಂದು ನ್ಯಾಟೊ ಪಡೆಗಳು ಘೋಷಣೆ ಮಾಡಿದ್ದು, ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಫ್ರಾನ್ಸ್‌ನ ಯುದ್ಧ ವಿಮಾನಗಳು ಈ ನಗರದ ಮೇಲೆ ಹಾರಾಟ ನಡೆಸುತ್ತಿವೆ. ಹಾಗಾಗಿ ಈಗ ಲಿಬಿಯಾದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿದೆ.
ಪ್ರತಿಭಟನಾಕಾರರ ಮೇಲೆ ಗಡಾಫಿ ವಾಯು ದಾಳಿ ನಡೆಸುವುದನ್ನು ತಪ್ಪಿಸಲು ನ್ಯಾಟೊ ಪಡೆಗಳು ಈ ಕ್ರಮಕ್ಕೆ ಮುಂದಾಗಿವೆ.ತನ್ನ ಪ್ರಜೆಗಳ ವಿರುದ್ಧ ಯಾವುದೇ ದಾಳಿ ನಡೆಸುವುದಿಲ್ಲ ಎಂದು ಶುಕ್ರವಾರವಷ್ಟೇ ಗಡಾಫಿ ಆಡಳಿತ ಕದನ ವಿರಾಮ ಘೋಷಣೆ ಮಾಡಿದ್ದರೂ ಸಹ, ಶನಿವಾರ ವಾಯು ಮತ್ತು ಭೂದಾಳಿಯ ಮೂಲಕ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಯತ್ನ ನಡೆದಿದೆ.
ಲಿಬಿಯಾದಲ್ಲಿ ಪ್ರತಿಭಟನಾಕಾರರ ವಿರುದ್ಧ ಕದನ ವಿರಾಮ ಜಾರಿಗೆ ತರುವಂತೆ ವಿಶ್ವಸಂಸ್ಥೆ ಸೂಚನೆಯನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಗಡಾಫಿ ಆಡಳಿತ ವಿಫಲವಾಗಿದ್ದು, ಅಲ್ಲಿ ತುರ್ತು ಮಿಲಿಟರಿ ಕಾರ್ಯಾಚರಣೆ ಅನಿವಾರ್ಯವಾಗಿದೆ. ಹಾಗಾಗಿ ಬೆಂಘಝಿ ನಗರದ ಮೇಲೆ ತಮ್ಮ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ಫ್ರಾನ್ಸ್‌ನ ಅಧ್ಯಕ್ಷ ನಿಕೋಲಸ್ ಸರ್ಕೋಜಿ ತಿಳಿಸಿದ್ದಾರೆ.
ಸರ್ಕೋಜಿ ಅವರಲ್ಲದೇ, ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.ಗಡಾಫಿ ಪರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಯುದ್ಧ ಟ್ಯಾಂಕರ್‌ಗಳತ್ತ ದಾಳಿ ನಡೆಸಲು ಫ್ರಾನ್ಸ್‌ನ ಯುದ್ಧ ವಿಮಾನಗಳು ಸನ್ನದ್ಧವಾಗಿವೆ ಎಂದೂ ಸರ್ಕೋಜಿ ತಿಳಿಸಿದ್ದಾರೆ. ‘ನಮ್ಮ ಯುದ್ಧ ವಿಮಾನಗಳು ಗಡಾಫಿ ಸೈನಿಕರು ನಡೆಸುತ್ತಿರುವ ವಾಯು ದಾಳಿಯನ್ನು ತಡೆಗಟ್ಟಲು ಮುಂದಾಗಿವೆ’ ಎಂದರು.
ವಿಶ್ವಸಂಸ್ಥೆ ಸೂಚಿಸಿರುವಂತೆ ಕದನ ವಿರಾಮ ಜಾರಿಗೊಳಿಸದೇ ಹೋದರೆ ಲಿಬಿಯಾ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯವಾಗುತ್ತದೆ ಎಂದು ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕಗಳು ಶುಕ್ರವಾರ ಗಡಾಫಿ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದವು.
ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯವನ್ನು ಪಾಲಿಸುವಂತೆ ಮಾಡುವುದು ಮತ್ತು ಅಂತರರಾಷ್ಟ್ರೀಯ ಸಮುದಾಯದ ನಿಲುವಿಗೆ ವಿರುದ್ಧವಾಗಿ ಗಡಾಫಿ ಆಡಳಿತ ನಡೆದುಕೊಳ್ಳುವುದನ್ನು ತಡೆಯುವುದು ತಮ್ಮ ಬದ್ಧತೆಯಾಗಿದೆ ಎಂದು ಸಭೆಯ ಬಳಿಕ ಬ್ರಿಟನ್ ಪ್ರಧಾನಿ ಕೆಮರಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.