ADVERTISEMENT

ವಿಶೇಷ ಮಗುವಿಗೆ ಸೀಟ್‌ಬೆಲ್ಟ್‌ ನೀಡಲು ಸಿಂಗಪುರ ಏರ್‌ಲೈನ್ಸ್ ನಕಾರ

ಸುರಕ್ಷತೆ ನೆಪದಲ್ಲಿ ಭಾರತೀಯ ದಂಪತಿಯ ಪ್ರಯಾಣಕ್ಕೆ ಅವಕಾಶ ನಿರಾಕರಣೆ

ಪಿಟಿಐ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ವಿಶೇಷ ಮಗುವಿಗೆ ಸೀಟ್‌ಬೆಲ್ಟ್‌ ನೀಡಲು ಸಿಂಗಪುರ ಏರ್‌ಲೈನ್ಸ್ ನಕಾರ
ವಿಶೇಷ ಮಗುವಿಗೆ ಸೀಟ್‌ಬೆಲ್ಟ್‌ ನೀಡಲು ಸಿಂಗಪುರ ಏರ್‌ಲೈನ್ಸ್ ನಕಾರ   

ಸಿಂಗಪುರ: ಕಡಿಮೆ ತೂಕದ ಮಗುವಿಗೆ ಸೂಕ್ತವಾದ ಸೀಟ್‌ಬೆಲ್ಟ್‌ ನೀಡದ ಸಿಂಗಪುರದ ‘ಸ್ಕೂಟ್‌ ಏರ್‌ಲೈನ್ಸ್‌’, ಸುರಕ್ಷತೆ ನೆಪದಲ್ಲಿ ಆ ಮಗುವಿನ ತಂದೆ–ತಾಯಿಯ ಪ್ರಯಾಣಕ್ಕೂ ಅವಕಾಶ ನಿರಾಕರಿಸಿದೆ.

ಸಿಂಗಪುರ ಏರ್‌ಲೈನ್ಸ್‌ ಸಿಬ್ಬಂದಿಯಿಂದ ತಮಗಾದ ತೊಂದರೆಯನ್ನು ಭಾರತದ ದಿವ್ಯಾ ಜಾರ್ಜ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಏರ್‌ಲೈನ್ಸ್‌ ಕ್ರಮಕ್ಕೆ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಐದು ವರ್ಷದ ಮಗಳೊಂದಿಗೆ ನಾವು ಪ್ರಯಾಣಕ್ಕೆ ಸಿದ್ಧವಾಗಿದ್ದೆವು. ಫುಕೆಟ್‌ನಿಂದ ಸಿಂಗಪುರಕ್ಕೆ ತೆರಳುವ ವಿಮಾನವನ್ನು ಏರಿದ ಮೇಲೆ ನನ್ನ ಮಗಳಿಗೆ ಶಿಶು ಸೀಟ್‌ಬೆಲ್ಟ್‌ ಕೊಡುವಂತೆ ಮನವಿ ಮಾಡಿದೆ. ಅವಳು ಐದು ವರ್ಷದವಳಾದರೂ, ಕೇವಲ 8.5 ಕೆಜಿ ತೂಕವಿದ್ದಾಳೆ. ಇದು ಒಂದು ವರ್ಷದ ಮಗು ಹೊಂದಿರಬಹುದಾದ ತೂಕ. ಅವಳಿಗಾಗಿ ಪ್ರತ್ಯೇಕ ಟಿಕೆಟ್‌ ಪಡೆಯಲಾಗಿತ್ತು. ಆದರೆ, ಸುರಕ್ಷತೆ ನೆಪವೊಡ್ಡಿದ ಕ್ಯಾಪ್ಟನ್‌, ಮಗಳಿಗೆ ಶಿಶು ಸೀಟ್‌ಬೆಲ್ಟ್‌ ನೀಡಲಿಲ್ಲ. ಅಷ್ಟೇ ಅಲ್ಲದೆ, ನಮ್ಮನ್ನೂ ಕೆಳಗೆ ಇಳಿಸಿದರು’ ಎಂದು ದಿವ್ಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ಪ್ರಯಾಣಿಕರು ಐದು ವರ್ಷದ ಮಗು ಹೊಂದಿರುವುದರಿಂದ, ಸುರಕ್ಷತಾ ನಿಯಮದ ಪ್ರಕಾರ, ಅದಕ್ಕೆ ಶಿಶು ಸೀಟ್‌ಬೆಲ್ಟ್‌ ನೀಡಲಾಗುವುದಿಲ್ಲ. ಅವರ ಮಗಳು ಪ್ರತ್ಯೇಕ ಸೀಟಿನಲ್ಲಿಯೇ ಕುಳಿತುಕೊಳ್ಳಬೇಕು. ಪ್ರಯಾಣಿಕರ ದೈಹಿಕ ಸ್ಥಿತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಸ್ಕೂಟ್‌ ಏರ್‌ಲೈನ್ಸ್‌ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.