ADVERTISEMENT

ವೀಸಾ ಪಡೆಯಲು ಸಂದರ್ಶನವೇ ಮುಖ್ಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ವೀಸಾ ಪಡೆಯಲು ಸಂದರ್ಶನವೇ ಮುಖ್ಯ
ವೀಸಾ ಪಡೆಯಲು ಸಂದರ್ಶನವೇ ಮುಖ್ಯ   

ಭಾರತ–ಅಮೆರಿಕ ನಡುವಣ ಸಹಭಾಗಿತ್ವ ಮತ್ತು ಜನರ ನಡುವಣ ಸಂಬಂಧ ದಿನೇದಿನೇ ಉತ್ತಮಗೊಳ್ಳುತ್ತಿದೆ. ಹಾಗೆಯೇ ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಚೆನ್ನೈನಲ್ಲಿರುವ ಅಮೆರಿಕ ದೂತವಾಸಕ್ಕೆ ಪ್ರತಿ ವರ್ಷ 3ಲಕ್ಷ ವೀಸಾ ಅರ್ಜಿಗಳು ಬರುತ್ತಿವೆ.

ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವ ವಿಧಾನ, ಸಂದರ್ಶನ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ‘ಪ್ರಜಾವಾಣಿ’ ಓದುಗರಿಗೆ ಚೆನ್ನೈನ ಅಮೆರಿಕ ದೂತವಾಸ ಮಾಹಿತಿ ನೀಡಲಿದೆ. ತಿಂಗಳಿಗೊಮ್ಮೆ ಈ ಅಂಕಣ ಪ್ರಕಟವಾಗಲಿದೆ.

ಪ್ರ: ದಯವಿಟ್ಟು ಡಿಪೆಂಡೆಂಟ್‌ ವೀಸಾ ಪಡೆಯುವ ಪ್ರಕ್ರಿಯೆ/ನೀತಿ­ನಿಯಮಗಳ ಬಗ್ಗೆ ಮಾಹಿತಿ ಕೊಡಿ.
–ಸುಜಾತಾ

ಉ: ಡಿಪೆಂಡೆಂಟ್‌ ವೀಸಾ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. www.ustraveldocs.com/in.

ಪ್ರ: ವೀಸಾ ಎಂದರೇನು? 
ಡಾ. ಮಲ್ಲಿಕಾರ್ಜುನ ಕಂಬಾರ, ರೋಣ

ಉ: ಡಾ. ಕಂಬಾರ ಅವರೇ ಅಮೆರಿಕ ದೇಶದೊಳಕ್ಕೆ ಪ್ರವೇಶಿಸ ಬಯಸುವ ವಿದೇಶಿ ಪ್ರಜೆಯೊಬ್ಬ ಮೊಟ್ಟಮೊದಲು  ವೀಸಾವನ್ನು ಹೊಂದಬೇಕು. ಪ್ರವಾಸಿಗನ ಪಾಸ್‌ಪೋರ್ಟ್‌ನಲ್ಲಿ ಈ ವೀಸಾ ಮುದ್ರೆ ಹಾಕಲಾಗುತ್ತದೆ. ಅಮೆರಿಕ ವೀಸಾ ಪಡೆದ ಬಳಿಕ  ದೇಶ ಪ್ರವೇಶಕ್ಕೆ ನಿಗದಿಯಾಗಿರುವ ಸ್ಥಳ, ವಿಮಾನ ನಿಲ್ದಾಣ ಅಥವಾ ಗಡಿಗೆ ಆಗಮಿಸಿ ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ (ಡಿಎಚ್‌ಎಸ್‌), ಕಸ್ಟಮ್ಸ್‌ ಅಂಡ್‌ ಬಾರ್ಡರ್‌ ಪ್ರೊಟೆಕ್ಷನ್‌ (ಸಿಬಿಪಿ) ಅಧಿಕಾರಿಯ ಬಳಿ ತೆರಳಿ ಮನವಿ ಮಾಡಬೇಕು. ಆದಾಗ್ಯೂ ವೀಸಾ ಇದ್ದ ಕೂಡಲೇ  ದೇಶದೊಳಕ್ಕೆ ಪ್ರವೇಶ ನೀಡಲಾಗುತ್ತದೆ ಎಂಬ ಖಾತ್ರಿ ಇಲ್ಲ.

ADVERTISEMENT

ಪ್ರ: ನಮ್ಮ ವೀಸಾ ಅವಧಿ ಆಗಸ್ಟ್‌ 2017ಕ್ಕೆ ಮುಗಿಯುತ್ತದೆ. ನಾವು ವೀಸಾ ನವೀಕರಿಸಬಹುದೇ ಅಥವಾ ಹೊಸ ವೀಸಾ ಪಡೆಯಬೇಕೆ? ಹೊಸ ವೀಸಾಕ್ಕೆ ಅರ್ಜಿ ಸಲ್ಲಿಸಬೇಕಾದರೆ ನಾವು ಸಂದರ್ಶನಕ್ಕಾಗಿ ಚೆನ್ನೈನ ಕಾನ್ಸುಲೇಟ್‌ ಜನರಲ್‌ ಕಚೇರಿಗೆ ಬರಬೇಕೆ? ಹೊಸ ವೀಸಾಕ್ಕೆ ಯಾವಾಗ ಅರ್ಜಿ ಸಲ್ಲಿಸಬೇಕು?
-ರಾಮಸ್ವಾಮಿ

ಉ: ರಾಮಸ್ವಾಮಿ ಅವರೇ, ನೀವೀಗಾಗಲೇ ಪ್ರವಾಸಿ ವೀಸಾ ಹೊಂದಿದ್ದೀರಿ ಎಂದು ಕೊಳ್ಳುತ್ತೇವೆ, ಅದನ್ನು ನವೀಕರಿಸುವ ಬಗ್ಗೆಯೇ ನೀವು ಮಾಹಿತಿ ಕೇಳುತ್ತಿರಬೇಕು. ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ http://www.ustraveldocs.com/in/in-niv-visarenew.asp  ವೀಸಾ ನವೀಕರಣ ಪ್ರಕ್ರಿಯೆಯಲ್ಲಿ ಸಂದರ್ಶನ ವಿನಾಯಿತಿ ಪಡೆಯಲು ಅರ್ಹರಾಗಿದ್ದೀರಾ ಎಂಬುದರ ಬಗ್ಗೆ ಮಾಹಿತಿ ಪಡೆಯಿರಿ.

ಪ್ರ 1: ವೀಸಾ ನಿರಾಕರಣೆಗೆ ಕಾರಣಗಳೇನು? OPT/OPT STEM EXTENSION (ತಾತ್ಕಾಲಿಕ ತರಬೇತಿ) ವೀಸಾ ನಿರಾಕರಣೆಗೆ ಕಾರಣವಾಗಬಹುದೇ? ನನ್ನ ಮಗ ಕಡೆಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ, ಶೀಘ್ರದಲ್ಲಿಯೇ ಕಂಪೆನಿಯಲ್ಲಿ ಕೆಲಸಕ್ಕೆ ನಿಯುಕ್ತನಾಗಲಿದ್ದಾನೆ, ಆ ದಿನಾಂಕ ನನ್ನ ವೀಸಾ ನಿರಾಕರಣೆಗೆ ಕಾರಣವಾಗಬಹುದೇ?
ಉ:
ಜಯವಂತ ಅವರೇ ಮುಂಬರುವ ಗ್ರಾಜ್ಯುಯೇಶನ್‌ಗೆ ನಿಮಗೆ, ನಿಮ್ಮ ಮಗನಿಗೆ ಅಭಿನಂದನೆ. ಅಮೆರಿಕದ ‘ಇಮಿಗ್ರೇಶನ್‌ ಅಂಡ್‌ ನ್ಯಾಷನಲ್‌ ಸೆಕ್ಯುರಿಟಿ ಆಕ್ಟ್‌’ ಪ್ರಕಾರ ಎಲ್ಲ ಅರ್ಜಿದಾರರನ್ನೂ ವಲಸಿಗರು ಎಂದೇ ಪರಿಗಣಿಸಲಾಗುತ್ತದೆ. ವೀಸಾ ಸಂದರ್ಶನದ ಸಂದರ್ಭದಲ್ಲಿ ಅಮೆರಿಕದಲ್ಲಿ ತಾತ್ಕಾಲಿಕವಾಗಿ ನೆಲೆಸಿದ ಬಳಿಕ ಸ್ವದೇಶಕ್ಕೆ ಮರಳುತ್ತೇನೆ ಎಂಬುದನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅಭ್ಯರ್ಥಿಯ ಮೇಲಿರುತ್ತದೆ. ಅಮೆರಿಕದ ಇಮಿಗ್ರೆಷನ್‌ ಅಂಡ್‌ ನ್ಯಾಷನಾಲಿಟಿ ಆಕ್ಟ್‌ ಸೆಕ್ಷನ್‌ 214(b) ಪ್ರಕಾರ ಸಂದರ್ಶನ ನಡೆಸುವ ಕೌನ್ಸಲರ್‌ ಅಧಿಕಾರಿಗೆ ಪ್ರವಾಸದ ಉದ್ದೇಶವು ತಾವು ಸಲ್ಲಿಸಿರುವ ವೀಸಾ ಕ್ಲಾಸ್‌ಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ‘ಒಪಿಟಿ ಮತ್ತು ಒಪಿಟಿ ಸ್ಟೆಮ್’ ವೀಸಾ ನೀಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಪ್ರ 2: ಒಂದುವೇಳೆ ನಾನು ಮತ್ತೊಮ್ಮೆ ವೀಸಾ ಸಂದರ್ಶನಕ್ಕೆ ಬರಬೇಕಾಗಿ ಬಂದರೆ, ಈ ದಾಖಲೆಗಳಲ್ಲದೇ ಮತ್ಯಾವುದಾದರೂ ದಾಖಲೆಗಳನ್ನು ತರಬೇಕೆ? ನನ್ನ ಮಗ ಮತ್ತು ಪತ್ನಿಯೊಂದಿಗೆ ಮತ್ತೊಮ್ಮೆ ಸಂದರ್ಶನಕ್ಕೆ ಹಾಜರಾಗಬಹುದೇ? ಅಥವಾ ನಾನು ನನ್ನ ಪತ್ನಿಯೊಂದಿಗೆ ಹೋದರೆ ನನಗೆ ವೀಸಾ ಸಿಕ್ಕುವ ಸಾಧ್ಯತೆ ಹೆಚ್ಚಿದೆಯೇ?
- ಜಿ. ಜಯವಂತ
ಉ:
  ಜಯವಂತ ಅವರೇ ಅಮೆರಿಕದ ಇಮಿಗ್ರೆಷನ್‌ ಅಂಡ್‌ ನ್ಯಾನಾಲಟಿ ಆಕ್ಟ್‌ ಸೆಕ್ಷನ್‌ 214(b) ಪ್ರಕಾರ ವೀಸಾ ಸಂದರ್ಶನ ನಡೆಸುವ ಅಧಿಕಾರಿಗೆ ಮನವರಿಕೆ ಮಾಡುವ ಹೊಣೆಗಾರಿಕೆ ಅರ್ಜಿದಾರನ ಮೇಲಿರುತ್ತದೆ. ನೀವು ನಿಮ್ಮ ಕುಟುಂಬದವರ ಜತೆಗೆ ಅರ್ಜಿ ಹಾಕಿದ್ದೀರಾ ಅಥವಾ ಪ್ರತ್ಯೇಕವಾಗಿ ಸಲ್ಲಿಸಿದ್ದೀರಾ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ.

ಓದುಗರು ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು. gendesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.