ADVERTISEMENT

ಶತಕೋಟಿ ವರ್ಷಗಳಲ್ಲಿ ಜೀವಿಗಳ ಅಳಿವು?

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಲಂಡನ್ (ಪಿಟಿಐ): ನೂರು ಕೋಟಿ ವರ್ಷಗಳಲ್ಲಿ ಸಸ್ಯಗಳೂ ಸೇರಿದಂತೆ ಭೂಮಿಯಲ್ಲಿರುವ ಎಲ್ಲಾ ಜೀವ ಸಂಕುಲಗಳು ಅಳಿಯುವ ಸಾಧ್ಯತೆ ಇವೆ ಎಂದು ಹೊಸ ಅಧ್ಯಯನವೊಂದು ಭವಿಷ್ಯ ನುಡಿದಿದೆ.

ವಿಚಿತ್ರ ಎಂದರೆ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ಕಡಿಮೆಯಾಗುವುದರಿಂದಾಗಿ ಜೀವಿಗಳ ನಾಶವಾಗಲಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದ ಖಗೋಳ ಜೀವವಿಜ್ಞಾನಿ ಜ್ಯಾಕ್ ಒ ಮ್ಯಾಲ್ಲಿ ಜೇಮ್ಸ ಅವರು ನಡೆಸಿರುವ ನಡೆದ ಅಧ್ಯಯನವು ಈ ಭವಿಷ್ಯ ನುಡಿದಿದೆ.

ಮುಂದಿನ 100 ಕೋಟಿ ವರ್ಷಗಳಲ್ಲಿ ನೀರು ಆವಿಯಾಗುವ ಪ್ರಮಾಣದಲ್ಲಿ ಆಗುವ ಹೆಚ್ಚಳ ಮತ್ತು ಮಳೆ ನೀರಿನೊಂದಿಗಿನ ರಾಸಾಯನಿಕ ಕ್ರಿಯೆಗಳು ಭೂ ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್‌ನ್ನು ಹೆಚ್ಚು ಹೆಚ್ಚು ಹೀರಲಿವೆ ಎಂದು ಅಧ್ಯಯನ ಹೇಳಿದೆ.

ಇಂಗಾಲದ ಡೈಆಕ್ಸೈಡ್‌ನ ಪ್ರಮಾಣದಲ್ಲಾಗುವ ಇಳಿಕೆಯು ಸಸ್ಯಗಳು ಮತ್ತು ಜೀವಿಗಳ ಸಾವಿಗೆ ಕಾರಣವಾಗಲಿದೆ. ಇಂಗಾಲದ ಡೈಆಕ್ಸೈಡ್ ರಹಿತ ವಾತಾವರಣಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಪಡೆದಿರುವ ಸೂಕ್ಷ್ಮಾಣು ಜೀವಿಗಳು ಮಾತ್ರ ಭೂಮಿಯಲ್ಲಿ ಉಳಿಯಲಿವೆ ಎಂದು ಅಧ್ಯಯನ ವಿವರಿಸಿದೆ.

ಇದೇ ಸಂದರ್ಭದಲ್ಲಿ ಭೂವಾತಾವರಣದಲ್ಲಿ ಆಮ್ಲಜನಕದ ಪ್ರಮಾಣವೂ ಕುಂಠಿತಗೊಳ್ಳಲಿದೆ. ತಾಪಮಾನದ ಏರಿಕೆಯಿಂದಾಗಿ ಸಾಗರಗಳು ಆವಿಯಾಗುವುದರಿಂದ ಭೂಮಿ ಶುಷ್ಕಗೊಳ್ಳಲಿದೆ. 100 ಕೋಟಿ ವರ್ಷಗಳ ನಂತರ ಸಾಗರಗಳು ಸಂಪೂರ್ಣವಾಗಿ ನಾಶ ಹೊಂದಲಿವೆ ಎಂದು ಜೇಮ್ಸ ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಗೆ ಕಾರಣ ಸೌರ ಮಂಡಲದ ಕೇಂದ್ರ ಬಿಂದು ಸೂರ್ಯ. ಹಲವು ಶತಕೋಟಿ ವರ್ಷಗಳವರೆಗೂ ಸೂರ್ಯ ಸ್ಥಿರವಾಗಿದ್ದರೂ, ಹೆಚ್ಚು ಪ್ರಕಾಶಮಾನವಾಗಿರಲಿದೆ. ಅದರ ಬೆಳಕಿನ ತೀಕ್ಷ್ಣತೆ ಹೆಚ್ಚಲಿದೆ ಎಂದೂ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಜೇಮ್ಸ ಅವರು ಕಂಪ್ಯೂಟರ್ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ. ಅದರ ಆಧಾರದಲ್ಲಿ ಭೂಮಿಯಲ್ಲಿ ಜೀವ ಜಗತ್ತಿನ ಅಳಿವಿನ ಕುರಿತಾಗಿ ಅವರು ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.