ADVERTISEMENT

ಸಹಪೈಲಟ್‌ನಿಂದ ಬಂದ ಕಡೆಯ ಸಂದೇಶ: ತನಿಖೆ

11 ರಾಷ್ಟ್ರಗಳ ನೆಲ– ಜಲ ಗಡಿಯಲ್ಲಿ 10ನೇ ದಿನವೂ ತೀವ್ರ ಶೋಧ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಕ್ವಾಲಾಲಂಪುರ (ಪಿಟಿಐ):  ನಿಗೂಢ­ವಾಗಿ ನಾಪತ್ತೆಯಾಗಿರುವ ವಿಮಾನದ ಸಂವಹನ ಸಾಧನಗಳನ್ನು ಉದ್ದೇಶ ಪೂರ್ವಕವಾಗಿ ನಿಷ್ಕ್ರಿಯಮಾಡಲಾಗಿದೆ ಎಂಬ ಶಂಕೆ ಬಗ್ಗೆ ಪುರಾವೆ ಕಲೆ ಹಾಕುತ್ತಿ­ರುವ ತನಿಖಾ ತಂಡ, ವಿಮಾನದ ಕಾಕ್‌ಪಿಟ್‌ನಿಂದ (ಚಾಲಕರ ಕೋಣೆ) ಬಂದಿದೆ ಎನ್ನಲಾದ ಕಡೆಯ ಸಂದೇಶ  ಸಹಪೈಲಟ್‌ ನೀಡಿದ್ದು ಎಂದಿದೆ. ಈ ಬಗ್ಗೆ ತನಿಖೆ ಕೈಗೊಂಡಿದೆ.

ಈ ಮಧ್ಯೆ, ಭಾರತವೂ ಸೇರಿದಂತೆ 11 ರಾಷ್ಟ್ರಗಳ ನೆಲ ಮತ್ತು ಜಲ ಗಡಿಯಲ್ಲಿ ನಡೆಯುತ್ತಿರುವ ಶೋಧ ಕಾರ್ಯ 10ನೇ ದಿನವು ಬಿರುಸಿನಿಂದ ನಡೆದಿದೆ. ಜೊತೆಗೆ, ವಿಮಾನ ತನ್ನ ಮಾರ್ಗ ಬದಲಿಸಿದ ನಂತರ ನಿಗದಿತ ಎತ್ತರಕ್ಕಿಂತ ಐದು ಸಾವಿರ ಅಡಿಗಳಷ್ಟು ಕೆಳಗೆ ಇಳಿದಿದೆ ಅಥವಾ ರೇಡಾರ್‌ ಸಂಪರ್ಕ ತಪ್ಪಿಸಲೆಂದೇ ಕೆಳಮಟ್ಟದಲ್ಲಿ ಹಾರಾಟ ಮಾಡಿದೆ ಎಂಬ ಹೊಸ ಮಾಹಿತಿ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ವಿಮಾನದ ಕಾಕ್‌ಪಿಟ್‌ನಿಂದ ‘ಎಲ್ಲಾ ಸರಿ, ಶುಭ ರಾತ್ರಿ’ (ಆಲ್‌ ರೈಟ್‌, ಗುಡ್‌ ನೈಟ್) ಎಂಬ ಕಡೆಯ ಸಂದೇಶ ಬಂದಿದೆ ಎನ್ನುವುದನ್ನು ವಿಮಾನಗಳ ಸ್ವಯಂ­ಚಾಲಿತ ಪತ್ತೆ ವ್ಯವಸ್ಥೆಯಿಂದ ತಿಳಿದು­ಬಂದಿದೆ. ಇದನ್ನು ವಿಮಾನದ ಸಹ­ಪೈಲಟ್‌ ಫರಿಕ್‌ ಅಬ್ದುಲ್‌ ಹಮೀದ್‌ ಅವರು ಹೇಳಿರಬಹುದು ಎಂದು ಶಂಕಿಸಲಾಗಿದೆ.

ಸಹಪೈಲಟ್‌ನಿಂದ ಬಂದ ಅಂತಿಮ ಸಂದೇಶಕ್ಕೂ 12 ನಿಮಿಷಗಳ ಮೊದಲು ಆ ವಿಮಾನದಿಂದ ಬಂದಿರುವ ಕಡೆಯ ಸಂಕೇತಗಳು ವಿಮಾನ ಸಂದೇಶ ಮತ್ತು ವರದಿಯ ಸಂವಹನ ವ್ಯವಸ್ಥೆಯಲ್ಲಿ (ಎಸಿಎಆರ್‌ಎಸ್‌) ದಾಖಲಾಗಿದೆ. ಈ ಪುರಾವೆಗಳು ಕಣ್ಮರೆಯಾಗಿರುವ ವಿಮಾನ ಪತನಗೊಂಡಿದೆ ಇಲ್ಲವೇ ಅದನ್ನು ಅಪಹರಿಸಲಾಗಿದೆ ಎಂಬ ಸಂದೇಹವನ್ನು ಬಲಗೊಳಿಸುತ್ತಿವೆ ಎಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ.

‘ಸಾಮಾನ್ಯವಾಗಿ ವಿಮಾನದ ಕಾಕ್‌­ಪಿಟ್‌ನಿಂದ ಬರುವ ಸಂದೇಶ ಮತ್ತು ಮಾಹಿತಿಗಳನ್ನು ಸಹಪೈಲಟ್‌ ನೀಡು­ತ್ತಾರೆ’ ಎಂದು ಮಲೇಷ್ಯಾ ವಿಮಾನ­ಯಾನ ಸಂಸ್ಥೆಯ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ಅಹ್ಮದ್‌ ಜೌಹರಿ ಯಾಹ್ಯಾ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿಮಾನದ ಕ್ಯಾಪ್ಟನ್‌ ಜಹರಿ ಅಹ್ಮದ್‌ ಷಾ ಮತ್ತು ಸಹಪೈಲಟ್‌ ಹಮೀದ್‌ ಅವರ ಬಗ್ಗೆಯೂ ಮಲೇಷ್ಯಾ ತನಿಖೆ ನಡೆಸುತ್ತಿದೆ.

ಶೋಧ ಕಾರ್ಯ ಚುರುಕು: ಆಸ್ಟ್ರೇ­ಲಿಯಾ ನೇತೃತ್ವದಲ್ಲಿ ಹಿಂದೂ ಮಹಾ­ಸಾಗರದ ದಕ್ಷಿಣ ತುದಿಯಲ್ಲಿ  ತಪಾ­ಸಣಾ ಕಾರ್ಯ ನಡೆಯುತ್ತಿದೆ. ವಾಯವ್ಯ ಭಾಗದಲ್ಲಿನ ಶೋಧ ಕಾರ್ಯಕ್ಕೆ ಕಜಕಸ್ತಾನ ಕೈಜೋಡಿಸಿದೆ. ಶೋಧ ಕಾರ್ಯಾಚರಣೆಗೆ ನೆರವು ನೀಡಿರುವ ರಾಷ್ಟ್ರಗಳ ಸಂಖ್ಯೆ 26ಕ್ಕೆ ಏರಿದೆ.
‘ಉತ್ತರ ಮತ್ತು ದಕ್ಷಿಣ ವಾಯು ಸಂಚಾರ ವಲಯಗಳಲ್ಲಿ ಶೋಧ ಕಾರ್ಯ ಈಗಾಗಲೇ ಆರಂಭವಾಗಿದೆ.  ಆಸ್ಟ್ರೇಲಿಯಾ, ಚೀನಾ, ಇಂಡೊನೇಷ್ಯಾ ಮತ್ತು ಕಜಕಸ್ತಾನಗಳು ಶೋಧ ಕಾರ್ಯ­ವನ್ನು ಚುರುಕುಗೊಳಿಸಿವೆ’ ಎಂದು ಶೋಧ ಕಾರ್ಯಾಚರಣೆ ನಡೆಯುತ್ತಿ­ರುವ ಪ್ರದೇಶಗಳ ವಿವರವಾದ ನಕ್ಷೆ­ಯನ್ನು ಬಿಡುಗಡೆ ಮಾಡಿದ ಮಲೇಷ್ಯಾದ ರಕ್ಷಣಾ ಮತ್ತು ಸಾರಿಗೆ ಸಚಿವ ಹಿಶಾಮುದ್ದೀನ್‌ ಹುಸೇನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.