ADVERTISEMENT

ಸಿಬ್ಬಂದಿ ಕುಟುಂಬ ವಿಚಾರಣೆ, ಪ್ರಯಾಣಿಕರ ಮಾಹಿತಿ ಸಂಗ್ರಹ

ವಿಮಾನಕ್ಕಾಗಿ 9ನೇ ದಿನವೂ ಶೋಧ– ಕಾರ್ಯಾಚರಣೆ ತಂಡದ ಸದಸ್ಯ ರಾಷ್ಟ್ರಗಳ ಸಂಖ್ಯೆ 25ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಕ್ವಾಲಾಲಂಪುರ (ಪಿಟಿಐ): ನಿಗೂಢವಾಗಿ ಕಣ್ಮರೆಯಾಗಿರುವ ವಿಮಾನ ಅಪಹರಣ, ಧ್ವಂಸ ಇಲ್ಲವೇ ಭಯೋತ್ಪಾದಕರ ಕೈವಾಡಕ್ಕೆ ಒಳಗಾಗಿರುವ ಸಾಧ್ಯತೆ ಕುರಿತು ಮಲೇಷ್ಯಾ ತನಿಖೆ ಕೇಂದ್ರೀಕರಿಸಿದೆ. ಈ ನಿಟ್ಟಿನಲ್ಲಿ ವಿಮಾನ ಸಿಬ್ಬಂದಿ, ಪ್ರಯಾಣಿ­ಕರ ಹಿನ್ನೆಲೆ ಮಾಹಿತಿ ಕಲೆಹಾಕಲಾಗುತ್ತಿದೆ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗದವರ ಬಗ್ಗೆಯೂ ವಿಚಾರಣೆ ಕೈಗೊಳ್ಳಲಾಗಿದೆ. ಜೊತೆಗೆ  ಭಾರತವೂ ಸೇರಿದಂತೆ 11 ರಾಷ್ಟ್ರಗಳ ಭೂ ಮತ್ತು ಸಮುದ್ರ ಗಡಿಯಲ್ಲಿ ತಪಾಸಣೆ ಚುರುಕುಗೊಂಡಿದೆ.

ಈ ಮಧ್ಯೆ, ಮಲೇಷ್ಯಾ ಪೊಲೀಸರು ನಾಪತ್ತೆಯಾದ ವಿಮಾನದ ಪೈಲಟ್‌ ಕ್ಯಾಪ್ಟನ್‌ ಜಹರಿ ಅಹ್ಮದ್‌ ಷಾ (53) ಅವರ ಮನೆಯಲ್ಲಿದ್ದ ‘ಸಿಮ್ಯುಲೇಟರ್‌’ನನ್ನು (ಸಂಕೀರ್ಣವಾದ ವ್ಯವಸ್ಥೆಯೊಂದರ ಕಾರ್ಯಾಚರಣೆಯನ್ನು ಅನುಕರಿಸುವ ಸಾಧನ) ನಿಷ್ಕ್ರಿಯಗೊಳಿಸಿ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಷಾ ಅವರ ಮನೆಯಲ್ಲಿ ಶನಿವಾರ ಕೂಡ ಶೋಧ ಕಾರ್ಯ ನಡೆದಿತ್ತು. ವಿಮಾನದ ಸಹಪೈಲಟ್‌ ಅಬ್ದುಲ್‌ ಹಮೀದ್‌ (27) ಅವರ ಮನೆಯಲ್ಲೂ ತಪಾಸಣೆ ನಡೆಸಲಾಗಿದೆ.

‘ನಾಪತ್ತೆಯಾದ ವಿಮಾನದ ಬಗ್ಗೆ ಶನಿವಾರ ತಿಳಿದುಬಂದಿರುವ ಉಪಗ್ರಹ ಆಧಾರಿತ ಮಾಹಿತಿಯು ಹೊಸ ಸುಳಿವು ನೀಡಿದೆ. ಈ ಹಿನ್ನೆಲೆಯಲ್ಲಿ ವಿಮಾನದ ಸಿಬ್ಬಂದಿ, ಪ್ರಯಾಣಿಕರು, ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗದವರ ಕುರಿತ ತನಿಖೆಯನ್ನು ಪುನರ್‌ ಅವಲೋಕಿಸಲಾಗುತ್ತಿದೆ. ಜೊತೆಗೆ ಪೈಲಟ್‌, ಸಹಪೈಲಟ್‌ ಅವರ ಕುಟುಂಬದವರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ’ ಎಂದು ರಕ್ಷಣಾ ಮತ್ತು ಸಾರಿಗೆ ಸಚಿವ ಹಿಶಾಮುದ್ದೀನ್‌ ಹುಸೇನ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘14 ದೇಶಗಳ ಸಹಕಾರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ  ಶೋಧ ಕಾರ್ಯಕ್ಕೆ ಈಗ ಇನ್ನೂ 11 ರಾಷ್ಟ್ರಗಳು ಜೊತೆಗೂಡಿವೆ. ಇದರಿಂದ ಸಮನ್ವಯ ಮತ್ತು ರಾಜತಾಂತ್ರಿಕ ನಿರ್ವಹಣೆಯ ಹೊಸ ಸವಾಲುಗಳು ಎದುರಾಗಿವೆ’ ಎಂದರು. ‘ಶೋಧ ಕಾರ್ಯಕ್ಕೆ ನೆರವು ನೀಡಿರುವ ರಾಷ್ಟ್ರಗಳ ಜೊತೆಗೆ ಹೆಚ್ಚಿನ ಸಾಧನ– ಸಲಕರಣೆಗಳನ್ನು ನಿಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಉತ್ತರ ವಾಯು ಸಂಚಾರ ವಲಯದ ಮಧ್ಯ ಏಷ್ಯಾ ರಾಷ್ಟ್ರಗಳು ಮತ್ತು ಹಿಂದೂ ಮಹಾಸಾಗರ ಭಾಗದ ದಕ್ಷಿಣ ವಲಯ ರಾಷ್ಟ್ರಗಳು ವಿಮಾನ ಪತ್ತೆಗೆ ನಾವು ನೀಡಿರುವಷ್ಟೆ ಆದ್ಯತೆ ನೀಡಿವೆ. ದಕ್ಷಿಣ ವಲಯದ ಶೋಧ ಕಾರ್ಯಕ್ಕೆ ಇನ್ನೂ ಹಲವು ಹಡಗುಗಳ ಅಗತ್ಯ ಇದೆ’ ಎಂದರು.

‘ಉಪಗ್ರಹ ಆಧಾರಿತ ಮಾಹಿತಿಗಳನ್ನು ಹೆಚ್ಚಿನ ಮಟ್ಟದಲ್ಲಿ ಹಂಚಿಕೊಳ್ಳುವಂತೆ ಚೀನಾ, ಅಮೆರಿಕ, ಫ್ರಾನ್ಸ್‌ ದೇಶಗಳನ್ನು ಕೋರಲಾಗಿದೆ. ಬ್ರಿಟನ್ನಿನ ಉಪಗ್ರಹ ಆಧಾರಿತ ದೂರ­ಸಂಪರ್ಕ ಸೇವಾ ಕಂಪೆನಿ ‘ಇನ್‌ಮಾರ್ಸಾಟ್‌’ನ ತಜ್ಞರು ಮಲೇ­­ಷ್ಯಾಕ್ಕೆ ಬಂದಿದ್ದಾರೆ’ ಎಂದು ಹಿಶಾಮುದ್ದೀನ್‌ ಹೇಳಿದರು.

ವಿದೇಶಿ ಪ್ರಯಾಣಿಕರ ಮಾಹಿತಿ ಸಂಗ್ರಹ: ‘ವಿದೇಶಿ ಪ್ರಯಾಣಿಕರ ಬಗ್ಗೆ ಆಯಾ ದೇಶಗಳಿಂದ ಮಾಹಿತಿ ಕೋರಲಾಗಿದ್ದು, ಕೆಲವು ದೇಶಗಳಿಂದ ಈ ಬಗ್ಗೆ ಪ್ರತಿಕ್ರಿಯೆ ಇನ್ನೂ ಬರಬೇಕಿದೆ‘ ಎಂದು ಮಲೇಷ್ಯಾ ಪೊಲೀಸ್‌ ಮಹಾನಿರ್ದೇಶಕ ಖಾಲಿದ್‌ ಅಬು ಬಕರ್‌ ತಿಳಿಸಿದರು.

ಪೈಲಟ್‌ ಮತ್ತು ಸಹಪೈಲಟ್‌ ಅವರ ವೈಯಕ್ತಿಕ, ರಾಜಕೀಯ ಮತ್ತು ಧಾರ್ಮಿಕ ಹಿನ್ನೆಲೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ವಿಮಾನ ಮಾರ್ಗ ಬದಲಿಸುವುದಕ್ಕೂ ಮುನ್ನ ಅದರ ಸಂವಹನ ಸಾಧನಗಳನ್ನು ಉದ್ದೇಶಪೂರ್ವಕವಾಗಿಯೇ ನಿಷ್ಕ್ರಿ­ಯ­ಗೊಳಿಸಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೈಲಟ್‌ ಮತ್ತು ಸಹಪೈಲಟ್‌ ಕುರಿತ ತನಿಖೆ ಚುರುಕುಗೊಂಡಿದೆ.
ಈ ಮಧ್ಯೆ, ‘ಎಂಎಚ್‌ 370’ ವಿಮಾನದ (ನಾಪತ್ತೆಯಾದ ವಿಮಾನ) ಪೈಲಟ್‌ ಮತ್ತು ಸಹಪೈಲಟ್‌ ಅವರಿಗೆ ಇಬ್ಬರೂ ಒಟ್ಟಿಗೆ ವಿಮಾನ ಹಾರಾಟ ಮಾಡುವುದು ಬೇಡ ಎಂದು ತಾನು ಯಾವುದೇ ಸೂಚನೆ ನೀಡಿರಲಿಲ್ಲ ಎಂದು ಮಲೇಷ್ಯಾ ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

11 ದೇಶಗಳ ಭೂ, ಜಲಗಡಿಯಲ್ಲಿ ಶೋಧ: ಶೋಧ ಕಾರ್ಯದ ತಂಡಗಳು ಭಾರತವೂ ಸೇರಿದಂತೆ 11 ರಾಷ್ಟ್ರಗಳ ಭೂ ಮತ್ತು ಸಮುದ್ರ ಗಡಿಯಲ್ಲಿ ತಪಾಸಣೆ ಚುರುಕು­ಗೊಳಿಸಿವೆ. ವಿಮಾನದ ಪತ್ತೆಗಾಗಿ ಈ ಪ್ರದೇಶದ ಉಪಗ್ರಹ ಆಧಾರಿತ ಮಾಹಿತಿ ಮತ್ತು ರೇಡಾರ್‌ ಸಂಹವನದ ಮಾಹಿತಿ­ ಒದ­ಗಿಸುವಂತೆ 11 ದೇಶಗಳಿಗೆ ಮನವಿ ಮಾಡಿಕೊಂಡಿವೆ.

ಉತ್ತರ ಮತ್ತು ದಕ್ಷಿಣ ಭಾಗಗಳ ವಾಯು ಸಂಚಾರ ವಲಯದ ರಾಷ್ಟ್ರಗಳಾದ ಕಜಕಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ, ತುರ್ಕ್‌ಮೆನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಭಾರತ, ಚೀನಾ, ಮ್ಯಾನ್ಮಾರ್‌, ಲಾವೊಸ್‌, ವಿಯೆಟ್ನಾಂ, ಥಾಯ್ಲೆಂಡ್‌, ಇಂಡೊನೇಷ್ಯಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ಗಳ ಜೊತೆಗೆ ಮಲೇಷ್ಯಾ ನಿರಂತರ ಸಂಪರ್ಕದಲ್ಲಿದೆ.

ಪ್ರಧಾನಿಗೆ ಮಲೇಷ್ಯಾ ಪ್ರಧಾನಿ ಕರೆ
ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌ ಅವರು ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಭಾನುವಾರ ದೂರವಾಣಿ ಕರೆ ಮಾಡಿ, ವಿಮಾನ ಪತ್ತೆಗೆ ನೆರವು ನೀಡುವಂತೆ ಕೋರಿದ್ದಾರೆ. ಇದಕ್ಕೆ ಸಿಂಗ್‌ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮಲೇಷ್ಯಾ ತಿಳಿಸಿದೆ.
ಇದೇ ರೀತಿ ಅವರು ಬಾಂಗ್ಲಾ­ದೇಶ, ಕಜಕಸ್ತಾನ, ತುರ್ಕ್‌­ಮೆನಿಸ್ತಾ­ನಗಳ ಪ್ರಧಾನಿ ಅವರೊಂದಿಗೂ ಮಾತ­ನಾ­ಡಿದ್ದಾರೆ. ನಾಪತ್ತೆಯಾದ ವಿಮಾನದಲ್ಲಿದ್ದ 5 ಭಾರತೀಯ ಪ್ರಯಾಣಿಕರ ಮಾಹಿತಿ­ಯನ್ನು ಭಾರತದ ಬೇಹು­ಗಾ­ರಿಕಾ ಸಂಸ್ಥೆ ಮಲೇಷ್ಯಾಕ್ಕೆ ಭಾನುವಾರ ಒದಗಿಸಿದೆ.
ಈ ಮಧ್ಯೆ, ಭಾರತವು ಶೋಧ ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿ­ಸಿದೆ.  ‘ಮುಂದಿನ ಶೋಧ ಕಾರ್ಯಕ್ಕೆ ಮಲೇಷ್ಯಾ­ದಿಂದ ಸೂಚನೆಗಳನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಅಂಡಮಾನ್‌ ಮತ್ತು ನಿಕೋಬಾರ್‌ ಸೇನಾ ನೆಲೆಯ ವಕ್ತಾರ ಕರ್ನಲ್‌ ಹರ್ಮಿತ್‌ ಸಿಂಗ್‌ ತಿಳಿಸಿದ್ದಾರೆ.

‘ವೈಮಾನಿಕ ದಾಳಿ: ನಿರಾಧಾರ’
ಅಮೆರಿಕದಲ್ಲಿ ಉಗ್ರರು ನಡೆಸಿದ 9/11 ದಾಳಿ ಮಾದರಿ­ಯಲ್ಲಿ ಭಾರತದ ಮೇಲೂ ದಾಳಿ ನಡೆಸುವ ಸಲುವಾಗಿ ಮಲೇ­ಷ್ಯಾದ ವಿಮಾನ  ಅಪಹರಿಸಲಾಗಿದೆ ಎಂಬ ವಾದವನ್ನು ಭಾರತದ ವಾಯಪಡೆ ಮತ್ತು ಸೇನಾ ಕಾರ್ಯತಂತ್ರ ತಜ್ಞರು ನಿರಾಧಾರ ಎಂದಿದ್ದಾರೆ.
ನಾಪತ್ತೆಯಾದ ವಿಮಾನ ಭಾರತದ ವಾಯುಗಡಿ ಪ್ರವೇಶಿಸಿದ ಬಗ್ಗೆ ಯಾವುದೇ ಪುರಾವೆ ಇಲ್ಲ. ಅದು ಸೇನೆಯ ರೇಡಾರ್‌ಗಳ ಕಣ್ತಪ್ಪಿಸಿ ವಾಯುಗಡಿಗೆ ಪ್ರವೇಶಿಸುವುದು ಅಸಾಧ್ಯ ಎಂದಿದ್ದಾರೆ. ನ್ಯೂಯಾರ್ಕ್‌ನಲ್ಲಿ 2001ರ ಸೆಪ್ಟೆಂಬರ್‌ 11ರಂದು ನಡೆದ ವೈಮಾನಿಕ ದಾಳಿಯ ರೀತಿಯಲ್ಲಿ ಭಾರತದ ಮೇಲೂ ದಾಳಿ ನಡೆಸಲು ನಾಪತ್ತೆಯಾದ ಮಲೇಷ್ಯಾದ ವಿಮಾನವನ್ನು ಬಳಸುವ ಇಲ್ಲವೇ ಈ ಉದ್ದೇಶದಿಂದ ಅಪಹರಿಸಿರುವ ಸಾಧ್ಯತೆ ಇದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪಕಾರ್ಯದರ್ಶಿ ಸ್ಟ್ರೊಬ್‌ ಟಾಲ್‌ಬೋಟ್‌ ಹೇಳಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.