ADVERTISEMENT

ಸೂಕ್ಷ್ಮ ವಿಷಯ ಬಹಿರಂಗ ಪಡಿಸಬೇಡಿ : ನವಾಜ್‌ ಷರೀಫ್‌ಗೆ ಪಿಎಂಎಲ್‌–ಎನ್‌ ಮುಖ್ಯಸ್ಥ ಸೂಚನೆ

ಪಿಟಿಐ
Published 17 ಮೇ 2018, 19:02 IST
Last Updated 17 ಮೇ 2018, 19:02 IST
ಶಹಬಾಜ್‌ ಷರೀಫ್‌
ಶಹಬಾಜ್‌ ಷರೀಫ್‌   

ಇಸ್ಲಾಮಾಬಾದ್‌ : ‘ಸೂಕ್ಷ್ಮ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೂ ಮೊದಲು ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸುವಂತೆ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ ಸೂಚಿಸಲಾಗುವುದು’ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್‌ ನವಾಜ್‌ (ಪಿಎಂಎಲ್‌–ಎನ್‌) ಮುಖ್ಯಸ್ಥ ಶಹಬಾಜ್‌ ಷರೀಫ್‌ ತಿಳಿಸಿದ್ದಾರೆ.

‘ಮುಂಬೈ ಮೇಲೆ ದಾಳಿ ಮಾಡಿದ್ದು ಪಾಕಿಸ್ತಾನದ ಭಯೋತ್ಪಾದಕರು’ ಎಂದು ನವಾಜ್‌ ಷರೀಫ್‌ ನೀಡಿದ್ದ ಹೇಳಿಕೆ ಪಾಕಿಸ್ತಾನದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ನವಾಜ್‌ ಷರೀಫ್‌ ಅವರ ಸಹೋದರರೂ ಆಗಿರುವ ಶಹಬಾಜ್‌ ಷರೀಫ್‌, ‘ನವಾಜ್‌ ಷರೀಫ್‌ ಅವರಿಗಿಂತ ದೇಶಭಕ್ತ ಮತ್ತೊಬ್ಬರಿಲ್ಲ. ಅವರಿಗೆ ಇಂಥ ಸೂಕ್ಷ್ಮ ಸಂಗತಿಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೂ ಮೊದಲು ಪಕ್ಷದ ಪ್ರಮುಖರೊಂದಿಗೆ ಚರ್ಚಿಸುವಂತೆ ಮತ್ತು ಪಕ್ಷದ ನಿಲುವು ತಿಳಿದುಕೊಳ್ಳುವಂತೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಹೇಳಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

ಸಂಸದೀಯ ಸಮಿತಿ ಸಭೆಯಲ್ಲಿ ಪಿಎಂಎಲ್‌–ಎನ್‌ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ನಂತರ, ಶಹಬಾಜ್‌ ಈ ಹೇಳಿಕೆ ನೀಡಿದ್ದಾರೆ. ಪಕ್ಷದ 120ಕ್ಕೂ ಹೆಚ್ಚು ಜನಪ್ರತಿನಿಧಿ ಗಳು ಸಭೆಯಲ್ಲಿ ಭಾಗವಹಿಸಿದ್ದರು.

ಚುನಾವಣೆ ಸಂದರ್ಭದಲ್ಲಿ ನವಾಜ್‌ ಷರೀಫ್‌ ಅವರ ಈ ಹೇಳಿಕೆ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಪಕ್ಷದ ಮುಖಂಡರಾದ ಸರ್ದಾರ್‌ ಆಶಿಕ್‌ ಹುಸೇನ್‌ ಗೊಪಾಂಗ್, ಅಬ್ದುಲ್‌ ರಹಮಾನ್‌ ಕಾಂಜು, ಷಪ್ಖಾತ್‌ ಬಲೋಚ್ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

'ನವಾಜ್‌ ಷರೀಫ್‌ ಹೇಳಿಕೆಗೂ, ಪಕ್ಷಕ್ಕೂ ಸಂಬಂಧವಿಲ್ಲ' ಎಂದು ಹೇಳುವ ಮೂಲಕ ಪಕ್ಷಕ್ಕೆ ಆಗುತ್ತಿರುವ ಹಾನಿ ತಗ್ಗಿಸುವ ಪ್ರಯತ್ನವನ್ನು ಶಹಬಾಜ್‌ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. 

ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಿದ್‌ ಅಬ್ಬಾಸಿ ಕೂಡ ಈ ನಿಟ್ಟಿನಲ್ಲಿ ಮುಂದುವರಿದಿದ್ದು, ಮಾಧ್ಯಮಗಳು ನವಾಜ್‌ ಷರೀಫ್‌ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.