ADVERTISEMENT

ಸೌರ ಬಿರುಗಾಳಿ ಪ್ರಬಲ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನೊವೊಸ್ತಿ): ಸೂರ್ಯನ ಮೇಲ್ಮೈಯಿಂದ ಚಿಮ್ಮಿದ ಸೌರ ಜ್ವಾಲೆಗಳ ಪರಿಣಾಮ ಸೃಷ್ಟಿಯಾಗಿರುವ ಕಾಂತೀಯ ಬಿರುಗಾಳಿಯು ಈಗ ಪ್ರಬಲಗೊಂಡಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (ಎನ್‌ಒಎಎ) ಹೇಳಿದೆ.

ಬುಧವಾರ ಮುಂಜಾನೆ 4.24ರ ಸುಮಾರಿಗೆ ಬಿರುಗಾಳಿ ಸೃಷ್ಟಿಯಾಗಿತ್ತು.

`ಬಿರುಗಾಳಿಯು ಭೂಕಾಂತೀಯ ಕ್ಷೇತ್ರದ ಮೇಲೆ ಶುಕ್ರವಾರ ಪ್ರಬಲ ಪರಿಣಾಮ ಬೀರಿದೆ. ಆರಂಭದಲ್ಲಿ ಬಿರುಗಾಳಿಯ ಕಾಂತ ಕ್ಷೇತ್ರ ಹಾಗೂ ಭೂಕಾಂತೀಯ ಕ್ಷೇತ್ರದ ನಡುವಿನ ಘರ್ಷಣೆ ನಿಧಾನವಾಗಿ ನಡೆದರೂ ಬಳಿಕ ಈ ಮೊದಲು ಊಹಿಸಿದ್ದಂತೆ ಅದು ಪ್ರಬಲಗೊಂಡಿತು ಎಂದು `ಎನ್‌ಒಎಎ~ದ ಅಂತರಿಕ್ಷಹವಾಮಾನ ಕೇಂದ್ರ ಹೇಳಿದೆ.

ಪ್ರಬಲ ಭೂಕಾಂತೀಯ ಬಿರುಗಾಳಿಯು ಕೃತಕ ಉಪಗ್ರಹಗಳ ಮೇಲೆ ಪರಿಣಾಮ ಬೀರುವ ಹಾಗೂ ಭೂಮಿಯಲ್ಲಿರುವ ವಿದ್ಯುತ್ ಸಂಪರ್ಕ ಮತ್ತು ಸಂವಹನ ಜಾಲ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಭೂಮಿಗೆ ಅಪ್ಪಳಿಸುತ್ತಿರುವ ಬಿರುಗಾಳಿಯು ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಶುಕ್ರ ಗ್ರಹ ಅಧ್ಯಯನ ನೌಕೆಯ ಮೇಲೆ ಪರಿಣಾಮ ಬೀರಿದೆ. ಸೂರ್ಯನಿಂದ ಮೇಲ್ಮೈನಿಂದ ಸೌರ ಜ್ವಾಲೆ ಚಿಮ್ಮಿದ ಸಂದರ್ಭದಲ್ಲಿ ಈ ನೌಕೆಯಲ್ಲಿ ತಾತ್ಕಾಲಿಕ ದೋಷ ಕಂಡುಬಂದಿತ್ತು. ಈಗ ನೌಕೆಯನ್ನು ಮತ್ತೆ ಸಹಜ ಸ್ಥಿತಿಗೆ ತರಲಾಗಿದೆ ಎಂದು ಅದರ ನಿಯಂತ್ರಕರು ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.