ADVERTISEMENT

2ನೇ ಇನಿಂಗ್ಸ್‌ನಲ್ಲಿ ಮುನ್ನುಗ್ಗುವ ಛಲ...

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 19:30 IST
Last Updated 7 ನವೆಂಬರ್ 2012, 19:30 IST
2ನೇ ಇನಿಂಗ್ಸ್‌ನಲ್ಲಿ ಮುನ್ನುಗ್ಗುವ ಛಲ...
2ನೇ ಇನಿಂಗ್ಸ್‌ನಲ್ಲಿ ಮುನ್ನುಗ್ಗುವ ಛಲ...   

ವಾಷಿಂಗ್ಟನ್ (ಪಿಟಿಐ/ಐಎಎನ್‌ಎಸ್): `ಅಮೆರಿಕದಲ್ಲಿ ಎಲ್ಲವೂ ಸಾಧ್ಯ. ಇದು ಬದಲಾವಣೆ ಕಾಲ~ ಎಂದು ವೀರಾವೇಶದ ಮಾತುಗಳನ್ನು ಆಡುತ್ತ ನಾಲ್ಕು ವರ್ಷಗಳ ಹಿಂದೆ ಶ್ವೇತ ಭವನದ ಮೆಟ್ಟಿಲುಗಳನ್ನು ಹತ್ತಿದ್ದ ಬರಾಕ್ ಹುಸೇನ್ ಒಬಾಮ ಈಗ ಮತ್ತೆ ಇತಿಹಾಸ ಬರೆದಿದ್ದಾರೆ.

2008ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿ ಆಫ್ರಿಕಾ ಮೂಲದ ವ್ಯಕ್ತಿ ಶ್ವೇತ ಭವನದ ಉತ್ತರಾಧಿಕಾರಿಯಾದಾಗ ಇಡೀ ವಿಶ್ವವೇ ಸಂಭ್ರಮ ಪಟ್ಟಿತ್ತು. ತಮ್ಮವನೇ ಒಬ್ಬ ವಿಶ್ವದ `ದೊಡ್ಡಣ್ಣ~ನ ಅಧಿಕಾರ ದಂಡ ಹಿಡಿದಷ್ಟು ಖುಷಿ ಪಟ್ಟಿತ್ತು.

ಆರ್ಥಿಕ ಹಿಂಜರಿತದಂಥ ಸಂಕಷ್ಟದ ಸಮಯ ಎದುರಿಸಿದ್ದ ಒಬಾಮ ಅವರಿಗೆ ಈ ಬಾರಿಯ ವಿಜಯ ಹಿಂದಿನಷ್ಟು ಸುಲಭವಾಗಿರಲಿಲ್ಲ. ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಮಿಟ್ ರೋಮ್ನಿ ಅವರು ಈ ಸಲ ತೀವ್ರ ಪೈಪೋಟಿ ಒಡ್ಡಿದ್ದರು.

ಕಳೆದ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಜಾನ್ ಮೆಕೆನ್ ಅವರನ್ನು ಸೋಲಿಸಿದ್ದ ಒಬಾಮ, `ನಿರೀಕ್ಷೆ~ ಹಾಗೂ `ಬದಲಾವಣೆ~ಯ ಮಂತ್ರಗಳೊಂದಿಗೆ ಅಧಿಕಾರ ಗದ್ದುಗೆ  ಏರಿದ್ದರು. ಇದೀಗ ಸತತ ಎರಡನೇ ಬಾರಿಗೆ ಅಧ್ಯಕ್ಷ ಪಟ್ಟ ಅಲಂಕರಿಸುತ್ತಿರುವ ಅವರು  `ಮುನ್ನುಗ್ಗಿ~ ಎನ್ನುವ ಹೊಸ ಘೋಷಣೆ ಮೊಳಗಿಸಿದ್ದಾರೆ.

ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿರುವುದು, ಕುಖ್ಯಾತ ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಿಸಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ವಿನೂತನ ಕಾಯ್ದೆ ಜಾರಿಗೆ ತಂದಿರುವುದು- ಇವೆಲ್ಲವೂ ಒಬಾಮ ಪಾಲಿಗೆ ಅದೃಷ್ಟದ ಸಂಗತಿಗಳಾಗಿದ್ದವು. ನಿಧಾನಗತಿಯ ಆರ್ಥಿಕ ಪುನಶ್ಚೇತನ ಹಾಗೂ ಉದ್ಯೋಗ ಕಡಿತದಂಥ ಪ್ರಕ್ರಿಯೆಗಳು ಗೆಲುವಿನ ಹಾದಿಯಲ್ಲಿ ಮುಳ್ಳುಗಳಾಗಿದ್ದವು.

1961 ಆಗಸ್ಟ್ 4 ರಂದು ಹವಾಯ್‌ನಲ್ಲಿ ಜನಿಸಿದ ಒಬಾಮ, ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಅಜ್ಜನ ಮಾರ್ಗದರ್ಶನದಲ್ಲಿ ಬೆಳೆದವರು. 1967 ರಿಂದ 1971 ರ ವರೆಗೆ ತಾಯಿ ಹಾಗೂ ಆಕೆಯ ಎರಡನೇ ಪತಿಯ ಜತೆಯಲ್ಲಿ ಇಂಡೋನೇಷ್ಯಾದಲ್ಲಿ ವಾಸ.

ವಿದ್ಯಾರ್ಥಿ ವೇತನ ಹಾಗೂ ಸಾಲಸೋಲ ಮಾಡಿ ಶಾಲೆ ಕಲಿತ ನಂತರ ಸಮುದಾಯ ಸಂಘಟಕರಾಗಿ ಕಾರ್ಯ ನಿರ್ವಹಿಸಲು ಷಿಕಾಗೋಗೆ ಪಯಣ. ಆ ಬಳಿಕ  ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಉನ್ನತ ಶಿಕ್ಷಣ. ಷಿಕಾಗೋದಲ್ಲಿ ನಾಗರಿಕ ಹಕ್ಕು ಅಟಾರ್ನಿಯಾಗಿ ಕಾರ್ಯನಿರ್ವಹಣೆ. 1992 ರಿಂದ 2004ರ ವರೆಗೆ ಷಿಕಾಗೊ ವಿ.ವಿ ಲಾ ಸ್ಕೂಲ್‌ನಲ್ಲಿ ಬೋಧನೆ.

1997ರಿಂದ 2004ರ ವರೆಗೆ ಮೂರು ಬಾರಿ ಇಲಿನಾಯ್ ಸೆನೆಟ್ ಸದಸ್ಯರಾಗಿದ್ದ ಒಬಾಮ, ಮೊದಲ ಬಾರಿ ಮುನ್ನೆಲೆಗೆ ಬಂದಿದ್ದು 2004ರ ಜುಲೈನಲ್ಲಿ ನಡೆದ ಡೆಮಾಕ್ರಟಿಕ್ ರಾಷ್ಟ್ರೀಯ ಸಮ್ಮೇಳನದಲ್ಲಿ. ನಂತರ 2007ರಲ್ಲಿ ಅಧ್ಯಕ್ಷೀಯ ಚುನಾವಣೆಯ ಅಖಾಡದಲ್ಲಿ ಕಾಣಿಸಿಕೊಂಡ ಅವರು ತಮ್ಮ ಪ್ರಖರ ಭಾಷಣಗಳಿಂದ ದಿಢೀರ್ ಖ್ಯಾತಿಗೆ ಬಂದರು. ಹಿಲರಿ ಕ್ಲಿಂಟನ್ ಅವರನ್ನು ಹಣಿದು ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಇಡೀ ವಿಶ್ವದಲ್ಲಿ ಒಬಾಮ ಅಲೆ ಹರಡಿತ್ತು.

ಜನ್ಮಸ್ಥಳ, ಧರ್ಮ, ಜನಾಂಗ ಇವೇ ಮುಂತಾದ ಸವಾಲುಗಳನ್ನು ದಾಟಿ ಅಧ್ಯಕ್ಷರಾಗಿ ಇಡೀ ವಿಶ್ವದ ಗಮನ ಸೆಳೆದ ಹೆಗ್ಗಳಿಕೆ ಅವರದ್ದು. ಅಂತರರಾಷ್ಟ್ರೀಯ ರಾಜತಾಂತ್ರಿಕತೆ ಹಾಗೂ ಸಹಕಾರ ವೃದ್ಧಿಗೆ ಮಾಡಿದ ಅಭೂತಪೂರ್ವ ಪ್ರಯತ್ನಕ್ಕಾಗಿ ಒಬಾಮ ಅವರನ್ನು `ನೊಬೆಲ್ ಶಾಂತಿ ಪ್ರಶಸ್ತಿ~ಯೂ ಅರಸಿ ಬಂದಿದೆ.

ತಮ್ಮ ಗೆಲುವಿಗೆ ಪತ್ನಿ ಮಿಷೆಲ್ ಒಬಾಮ ಕಾರಣ ಎಂದು ಹೇಳಿಕೊಳ್ಳುವ ಅವರು, ಪುತ್ರಿಯರಾದ ಸಶಾ ಹಾಗೂ ಮಲಿಯಾ ಅವರಿಗೆ ಅಮ್ಮನಂತೆಯೇ ಆತ್ಮವಿಶ್ವಾಸದ ಮಹಿಳೆಯರಾಗಿ ಎಂದು ಹಿತ ನುಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.