ADVERTISEMENT

26/11ರ ಉಗ್ರರನ್ನು ಶಿಕ್ಷಿಸಿ: ಪಾಕ್ ಪತ್ರಿಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಇಸ್ಲಾಮಾಬಾದ್(ಐಎಎನ್‌ಎಸ್):`ಮುಂಬೈನಲ್ಲಿ 26/11ರಂದು ನಡೆದ ಭಯೋತ್ಪಾದಕ ದಾಳಿಗೆ ಕಾರಣರಾದವರನ್ನು ಗುರುತಿಸಿ, ಶಿಕ್ಷೆಗೊಳಪಡಿಸಬೇಕು' ಎಂದು ಶುಕ್ರವಾರ `ದಿ ಡೈಲಿ ಟೈಮ್ಸ' ಸಂಪಾದಕೀಯದಲ್ಲಿ ಆಗ್ರಹಿಸಲಾಗಿದೆ.

`ದಾಳಿಯಲ್ಲಿ ಬದುಕುಳಿದವರು ಹಾಗೂ ಮೃತರ ಸಂಬಂಧಿಕರು ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಅಮೆರಿಕ ವಿದೇಶಾಂಗ ಇಲಾಖೆಯು ಐಎಸ್‌ಐ ಹಾಗೂ ಅದರ ಮಾಜಿ ಮುಖ್ಯಸ್ಥರಿಗೆ ವಿಚಾರಣೆಯಿಂದ ವಿನಾಯ್ತಿ ನೀಡಿದೆ' ಎಂದೂ ಪತ್ರಿಕೆ ಉಲ್ಲೇಖಿಸಿದೆ.
`ಭಾರತವು ಅಮೆರಿಕದ ಈ ತೀರ್ಪನ್ನು ತಿರಸ್ಕರಿಸಿದ್ದು, ದಾಳಿಕೋರರಿಗೆ ಶಿಕ್ಷೆ ನೀಡಬೇಕೆನ್ನುವ ಅಮೆರಿಕದ ದೃಢ ಸಂಕಲ್ಪಕ್ಕೆ ಇದು ವ್ಯತಿರಿಕ್ತವಾದ ನಿರ್ಧಾರ ಎಂದಿದೆ. ಈ ವಿಷಯದಲ್ಲಿ ಕಾನೂನು ಸ್ಪಷ್ಟವಾಗಿದ್ದು, ಭಾರತ ಯಾಕೆ ಈ ರೀತಿ ಪ್ರತಿಕ್ರಿಯಿಸಿದೆ ಎನ್ನುವುದು ಅರ್ಥವಾಗುತ್ತಿಲ್ಲ' ಎಂದು ಪತ್ರಿಕೆ ಹೇಳಿದೆ.

`ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನವು ಪಾರದರ್ಶಕ ರೀತಿಯಲ್ಲಿ ಸಹಕರಿಸಬೇಕಿದೆ. ಮುಂಬೈ ದಾಳಿಯು ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಗೆ ಅಡ್ಡಿ ತಂದಿದೆ ಎನ್ನುವುದನ್ನು ಭಾರತ ಹಾಗೂ ಪಾಕ್ ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿವೆ' ಎಂದೂ ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದೆ.

ಸಂತ್ರಸ್ತ ಕುಟುಂಬಕ್ಕೆ ಅಸಮಾಧಾನ
ವಾಷಿಂಗ್ಟನ್ (ಪಿಟಿಐ): 26/11ರ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐ ಹಾಗೂ ಅದರ ಮುಖ್ಯಸ್ಥರಾಗಿದ್ದ ಅಹಮದ್ ಶುಜಾ ಪಾಶಾ ಮತ್ತು ನದೀಮ್ ತಾಜ್ ಅವರಿಗೆ ಅಮೆರಿಕ ಸರ್ಕಾರ ವಿಚಾರಣೆಯಿಂದ ವಿನಾಯ್ತಿ ನೀಡಿದ್ದಕ್ಕೆ ದಾಳಿಯಲ್ಲಿ ಮೃತಪಟ್ಟ ಅಮೆರಿಕ ಪ್ರಜೆಗಳ ಕುಟುಂಬ ವರ್ಗದವರು ಅಸಮಾಧಾನಗೊಂಡಿದ್ದಾರೆ.

ಐಎಸ್‌ಐ, ಪಾಶಾ ಮತ್ತು ನದೀಮ್ ವಿರುದ್ಧ ಸಂತ್ರಸ್ತ ಕುಟುಂಬಗಳು ಕೋರ್ಟ್‌ನಲ್ಲಿ ದಾವೆ ಹೂಡಿದ್ದವು.
`ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗುವುದೆಂಬ ನಂಬಿಕೆ ಇದೆ' ಎಂದು ಈ ಕುಟುಂಬಗಳ ಪರ ವಕೀಲ ಜೇಮ್ಸ ಪಿ. ಕ್ರಿಂಡ್ಲರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT