ADVERTISEMENT

26/11 ಮುಂಬೈ ದಾಳಿ: ಪಾಟೀ ಸವಾಲಿಗೆ ಪಾಕಿಸ್ತಾನ ಮನವಿ?

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST
26/11 ಮುಂಬೈ ದಾಳಿ: ಪಾಟೀ ಸವಾಲಿಗೆ ಪಾಕಿಸ್ತಾನ  ಮನವಿ?
26/11 ಮುಂಬೈ ದಾಳಿ: ಪಾಟೀ ಸವಾಲಿಗೆ ಪಾಕಿಸ್ತಾನ ಮನವಿ?   

ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿಯ ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಸಂಬಂಧಿಸಿದಂತೆ ಪಾಟೀ ಸವಾಲಿಗೆ ಅವಕಾಶ ನೀಡುವಂತೆ ಪಾಕಿಸ್ತಾನ ಸರ್ಕಾರ ಭಾರತಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.

ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ನ್ಯಾಯಾಂಗ ಆಯೋಗ ಮುಂಬೈಗೆ ತೆರಳಿ ಸಂಗ್ರಹಿಸಿರುವ ವರದಿ ಅಕ್ರಮ ಎಂದು ರಾವಲ್ಪಿಂಡಿಯ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪಾಕ್ ಇದೀಗ ಈ ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ಭಾರತಕ್ಕೆ ಪತ್ರ ಬರೆಯಲಾಗುವುದು ಎಂದು ಆಯೋಗದ ವಿಶೇಷ ಪ್ರಾಸಿಕ್ಯೂಟರ್ ಮಹಮ್ಮದ್ ಅಜರ್ ಚೌಧರಿ ತಿಳಿಸಿದ್ದಾರೆ.

ಪಾಕ್‌ನ ಈ ಕ್ರಮಕ್ಕೆ ಪೂರಕ ಎನ್ನುವಂತೆ ಮುಂಬೈಗೆ ಮತ್ತೊಂದು ಆಯೋಗ ಕಳುಹಿಸುವ ಕುರಿತು ಉಭಯ ದೇಶಗಳು ಒಪ್ಪಂದವೊಂದಕ್ಕೆ ಬರುವ ಅಗತ್ಯವನ್ನು ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಚೌಧರಿ ಹಬೀಬ್ ಉರ್ ರೆಹಮಾನ್ ಮಂಗಳವಾರವೇ ಪ್ರತಿಪಾದಿಸಿದ್ದರು.

ಈ ನಡುವೆ `ಡಾನ್~ ಪತ್ರಿಕೆಗೆ ಹೇಳಿಕೆ ನೀಡಿರುವ ಚೌಧರಿ, ಆಯೋಗದ 800 ಪುಟಗಳ ವರದಿಯನ್ನು ಕೋರ್ಟ್ ತಳ್ಳಿಹಾಕಿರುವ ಕ್ರಮ ಆರೋಪಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಪಾಟೀ ಸವಾಲಿಗೆ ನಿರಾಕರಿಸಿರುವ ಭಾರತದ ನ್ಯಾಯಾಧೀಶ ಎಸ್.ಎಸ್. ಶಿಂಧೆ ವಿರುದ್ಧ ಕಿಡಿಕಾರಿರುವ ಚೌಧರಿ, `ಘಟನೆಯ ಏಳು ಜನ ಆರೋಪಿಗಳು ಖುಲಾಸೆಗೊಂಡಲ್ಲಿ ಅದಕ್ಕೆ ಶಿಂಧೆ ಅವರೇ ಹೊಣೆಗಾರರರಾಗುತ್ತಾರೆ~ ಎಂದಿದ್ದಾರೆ.

ದಾಳಿಕೋರರಲ್ಲಿ ಬದುಕುಳಿದ ಏಕೈಕ ಉಗ್ರ ಅಜ್ಮಲ್ ಕಸಾಬ್ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಪಡೆದ ಮ್ಯಾಜಿಸ್ಟ್ರೇಟ್ ಆರ್.ವಿ. ಸಾವಂತ್ ವಾಗ್ಳೆ, ಮುಖ್ಯ ತನಿಖಾಧಿಕಾರಿ ರಮೇಶ್ ಮಹಾಲೆ ಹಾಗೂ ಘಟನೆಯಲ್ಲಿ ಮೃತ ಉಗ್ರರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಾದ ಗಣೇಶ್ ಧನರಾಜ್, ಚಿಂತಾಮಣ ಮೋಹಿತೆ ಅವರ ಹೇಳಿಕೆಗಳನ್ನು ಪಾಕ್‌ನ ನ್ಯಾಯಾಂಗ ಆಯೋಗ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಧ್ವನಿಮುದ್ರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.