ADVERTISEMENT

30ರಂದು ಪಾಕಿಸ್ತಾನ ಅಧ್ಯಕ್ಷರ ಚುನಾವಣೆ

ಪಾಕ್ `ಸುಪ್ರೀಂ' ತೀರ್ಪು: ಪಿಎಂಎಲ್‌ಎನ್ ಅಭ್ಯರ್ಥಿಗೆ ಭಾರತ ನಂಟು

​ಪ್ರಜಾವಾಣಿ ವಾರ್ತೆ
Published 24 ಜುಲೈ 2013, 19:59 IST
Last Updated 24 ಜುಲೈ 2013, 19:59 IST
30ರಂದು ಪಾಕಿಸ್ತಾನ ಅಧ್ಯಕ್ಷರ ಚುನಾವಣೆ
30ರಂದು ಪಾಕಿಸ್ತಾನ ಅಧ್ಯಕ್ಷರ ಚುನಾವಣೆ   

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಅಧ್ಯಕ್ಷರಚುನಾವಣೆಯನ್ನು ಜುಲೈ 30ಕ್ಕೆ ನಡೆಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

ಚುನಾವಣೆಯನ್ನು ಒಂದು ವಾರ ಮುಂಚಿತವಾಗಿ ಮಾಡಬೇಕು ಎಂಬ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷದ ನಾಯಕ ರಜಾ ಜಫರುಲ್ ಹಕ್ ಸಲ್ಲಿಸಿದ ಅರ್ಜಿ ಆಧರಿಸಿ ಕೋರ್ಟ್ ಈ ತೀರ್ಪು ನೀಡಿದೆ.

ಈ ಮೊದಲು ಆಗಸ್ಟ್ 6ರಂದು ಚುನಾವಣೆ ನಡೆಸಲು ಆಯೋಗ ದಿನಾಂಕ ನಿಗದಿಪಡಿಸಿತ್ತು. ರಂಜಾನ್ ಉಪವಾಸ ಮಾಸ (27ನೇ ದಿನ) ಆಗಸ್ಟ್ 6ರಂದು ಕೊನೆಗೊಳ್ಳುವ ಕಾರಣ ಚುನಾವಣಾ ದಿನಾಂಕವನ್ನು ಕೋರ್ಟ್ ಬದಲಿಸಿದೆ.

ನಾಮಪತ್ರ ಸಲ್ಲಿಕೆ: ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದು, ಪ್ರಮುಖ ಅಭ್ಯರ್ಥಿಗಳಾಗಿ ಪಿಎಂಎಲ್-ಎನ್‌ನಿಂದ ಮ್ಯಾಮ್‌ನೂನ್ ಹುಸೇನ್, ಪಿಪಿಪಿಯಿಂದ ರಜಾ ರಬ್ಬಾನಿ ಹಾಗೂ ಪಾಕಿಸ್ತಾನ ತೆಹ್ರಿಕ್-ಈ-ಇನ್ಸಾಫ್ ಪಕ್ಷದಿಂದ ನಿವೃತ್ತ ನ್ಯಾಯಧೀಶ ವಜೀಹುದ್ದೀನ್ ಅಹಮದ್ ನಾಮಪತ್ರ ಸಲ್ಲಿಸಿದ್ದಾರೆ.

ಜುಲೈ 27ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಆಯ್ಕೆಯಾದ ನೂತನ ಅಧ್ಯಕ್ಷರು ಸೆಪ್ಟೆಂಬರ್ 8ರಂದು  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಮಧ್ಯೆ, ಆಡಳಿತಾರೂಢ ಪಿಎಂಎಲ್-ಎನ್ ಅಭ್ಯರ್ಥಿ ಮ್ಯಾಮ್‌ನೂನ್ ಹುಸೇನ್ ಅವರಿಗೆ ಗೆಲುವು ಸುಲಭವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹುಸೇನ್ ಆಗ್ರಾದವರು...
ಪ್ರಧಾನಿ ನವಾಜ್ ಅವರಿಗೆ ಆಪ್ತರಾದ ಹುಸೇನ್ 1940ರಲ್ಲಿ ಭಾರತದ ಆಗ್ರಾದಲ್ಲಿ ಜನಿಸಿದವರು. ಕರಾಚಿಯ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಇವರು, ಆಯ್ಕೆಯಾದರೆ ಪಾಕ್‌ನ 11ನೇ ಅಧ್ಯಕ್ಷರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.