ADVERTISEMENT

ಮಾಲ್ಡೀವ್ಸ್ ಬಿಕ್ಕಟ್ಟು ಭಾರತದ ಜತೆಗಿನ ಸಂಬಂಧಕ್ಕೆ ಧಕ್ಕೆಯಾಗಬಾರದು: ಚೀನಾ

ಭಾರತದ ಜತೆ ಸಮಾಲೋಚನೆ: ಚೀನಾ

ಪಿಟಿಐ
Published 9 ಫೆಬ್ರುವರಿ 2018, 19:27 IST
Last Updated 9 ಫೆಬ್ರುವರಿ 2018, 19:27 IST
ಜೆಂಗ್‌ ಶುಯಾಂಗ್‌
ಜೆಂಗ್‌ ಶುಯಾಂಗ್‌   

ಬೀಜಿಂಗ್‌: ಮಾಲ್ಡೀವ್ಸ್‌ನಲ್ಲಿನ ವಿದ್ಯಮಾನದಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೆ ಧಕ್ಕೆಯಾಗಬಾರದು ಎಂದು ಚೀನಾ ಹೇಳಿದೆ.

‘ಮಾಲ್ಡೀವ್ಸ್‌ನಲ್ಲಿನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಆದರೆ, ಅಲ್ಲಿನ ಬಿಕ್ಕಟ್ಟು ಪರಿಹರಿಸಲು ಬೇರೆ ದೇಶಗಳು ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್‌ ಶುಯಾಂಗ್‌ ತಿಳಿಸಿದರು.

‘ಮಾಲ್ಡೀವ್ಸ್‌ನಲ್ಲಿನ ಸದ್ಯದ ಸ್ಥಿತಿ ಅದರ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದ್ದು. ಅಲ್ಲಿನ ಪ್ರಮುಖ ಪಕ್ಷಗಳು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ರಾಜಕೀಯ ಬಿಕ್ಕಟ್ಟನ್ನು ಸ್ವತಂತ್ರವಾಗಿ ಪರಿಹರಿಸಿಕೊಳ್ಳಲು ಶಕ್ತರಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಮಾಲ್ಡೀವ್ಸ್‌ ಹಣಕಾಸು ಸಚಿವ ಮೊಹಮದ್‌ ಸೈಯದ್‌ ಅವರು ನನ್ನನ್ನು ಭೇಟಿಯಾದಾಗ ತಿಳಿಸಿದ್ದಾರೆ’ ಎಂದು ಜೆಂಗ್‌ ವಿವರಿಸಿದರು.

**

ಮೋದಿ–ಟ್ರಂಪ್ ಚರ್ಚೆ

ವಾಷಿಂಗ್ಟನ್‌: ಮಾಲ್ಡೀವ್ಸ್‌ನಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಚರ್ಚಿಸಿದರು. ಮಾಲ್ಡೀವ್ಸ್‌ನಲ್ಲಿನ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ನಾಯಕರು, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಕಾನೂನನ್ನು ಅಲ್ಲಿನ ಸರ್ಕಾರ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.

ಮತ್ತಷ್ಟು ಹದಗೆಡುವ ಸಾಧ್ಯತೆ: ಮಾಲ್ಡೀವ್ಸ್‌ನಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಭದ್ರತಾ ಮಂಡಳಿಗೆ ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿ ಮಿರೊಸ್ಲಾವ್‌ ಜೆಂಕಾ ತಿಳಿಸಿದ್ದಾರೆ.

**

ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ

ವಿಶ್ವಸಂಸ್ಥೆ (ಎಎಫ್‌ಪಿ): ಮಾಲ್ಡೀವ್ಸ್‌ನಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಭದ್ರತಾ ಮಂಡಳಿಗೆ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ರಾಜಕೀಯ ಬಿಕ್ಕಟ್ಟು ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿ ಮಿರೊಸ್ಲಾವ್‌ ಜೆಂಕಾ, ’ಮಾಲ್ಡೀವ್ಸ್‌ನಲ್ಲಿ ಉದ್ವಿಗ್ನ ಸ್ಥಿತಿ ಇದೆ. ಇದು ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.