ADVERTISEMENT

ವರ್ಷಾಂತ್ಯದ 2+2 ಸಭೆಗೆ ಸಿದ್ಧತೆ: ಭಾರತ–ಅಮೆರಿಕ ನಡುವೆ ಪ್ರಾದೇಶಿಕ ವಿಷಯಗಳ ಚರ್ಚೆ

ಪಿಟಿಐ
Published 9 ಅಕ್ಟೋಬರ್ 2021, 8:19 IST
Last Updated 9 ಅಕ್ಟೋಬರ್ 2021, 8:19 IST
ಭಾರತದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್‌ ಕುಮಾರ್
ಭಾರತದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್‌ ಕುಮಾರ್   

ವಾಷಿಂಗ್ಟನ್‌: ರಕ್ಷಣಾ ಪಾಲುದಾರಿಕೆ ಮತ್ತು ಇಂಡೊ-ಪೆಸಿಫಿಕ್ ಪ್ರದೇಶವನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಸಮಾನ ಮನಸ್ಕ ಪಾಲುದಾರರೊಂದಿಗಿನ ಸಹಕಾರ ವೃದ್ಧಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತದ ಅಧಿಕಾರಿಗಳು ಚರ್ಚೆ ನಡೆಸಿದರು.

ಪ್ರಸಕ್ತ ವರ್ಷದ ಅಂತ್ಯದಲ್ಲಿ ಉಭಯ ರಾಷ್ಟ್ರಗಳ ಸಚಿವರ ನಡುವೆ ನಡೆಯಲಿರುವ ‘2+2‘ ಸಭೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಈ ಸಭೆಯಲ್ಲಿ ಭಾರತದ ರಕ್ಷಣಾ ಕಾರ್ಯದರ್ಶಿ ಅಜಯ್‌ ಕುಮಾರ್ ಮತ್ತು ಅಮೆರಿಕದ ರಕ್ಷಣಾ ನೀತಿ ಇಲಾಖೆಯ ಅಧೀನ ಕಾರ್ಯದರ್ಶಿ ಕಾಲಿನ್‌ಕಾಲ್‌ ಭಾಗವಹಿಸಿದ್ದರು. ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ನಡೆದ ಈ ಚರ್ಚೆಯಲ್ಲಿ, 2+2‘ ಸಭೆಗೆ ಅಗತ್ಯವಾದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು

ಶುಕ್ರವಾರ ನಡೆದ ಅಮೆರಿಕ–ಭಾರತ ರಕ್ಷಣಾ ನೀತಿ ಗುಂಪಿನ ಸಭೆಯು, ವರ್ಷದ ಕೊನೆಯಲ್ಲಿ ನಡೆಯಲಿರುವ 2+2 ಸಭೆಗೆ ಅಗತ್ಯವಾದ ಅಡಿಪಾಯವನ್ನು ಸಿದ್ಧಪಡಿಸಿದೆ. ವರ್ಷಾಂತ್ಯದಲ್ಲಿ ನಡೆಯುವ ಈ ಪ್ರಮುಖ ಸಭೆಯ ನಂತರ ಪ್ರಮುಖ ರಕ್ಷಣಾ ಪಾಲುದಾರರಾಗಿರುವ ಅಮೆರಿಕ ಮತ್ತು ಭಾರತ ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿವೆ ಎಂದು ಪೆಂಟಗನ್ ಹೇಳಿದೆ.

ADVERTISEMENT

‘ಉಭಯ ರಾಷ್ಟ್ರಗಳ ನಡುವೆ ನಡೆದ ಇಂದಿನ ಚರ್ಚೆಯಲ್ಲಿ ಮಹತ್ವಾಕಾಂಕ್ಷೆಯ ದಿಪಕ್ಷೀಯ ಆದ್ಯತೆಗಳ ಕುರಿತು ಚರ್ಚೆ ನಡೆಯಿತು. ಅದರಲ್ಲಿ ಮಾಹಿತಿ ಹಂಚಿಕೆ, ಉನ್ನತಮಟ್ಟದಲ್ಲಿ ಕಡಲ ಸಹಕಾರ, ಲಾಜಿಸ್ಟಿಕ್ಸ್‌ ಮತ್ತು ರಕ್ಷಣಾ ವ್ಯಾಪಾರ ಕುರಿತು ಪ್ರಮುಖವಾಗಿ ಚರ್ಚೆಯಾಯಿತು‘ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕೊಲೊನೆಲ್ ಆಂಟೊನ್‌ ಟಿ ಸೆಮೆಲ್‌ರೋತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.