ADVERTISEMENT

ಕ್ರಿಮಿನಲ್‌ಗಳಿಗೆ ಮುಯಿಝು ಆಡಳಿತ ರಕ್ಷಣೆ: ವಿಪಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 14:14 IST
Last Updated 31 ಜನವರಿ 2024, 14:14 IST
ಮೊಹಮ್ಮದ್‌ ಮುಯಿಝು
ಮೊಹಮ್ಮದ್‌ ಮುಯಿಝು   

ಮಾಲೆ (ಪಿಟಿಐ): ಪ್ರಾಸಿಕ್ಯೂಟರ್ ಜನರಲ್ ಮೇಲೆ ದಾಳಿ ನಡೆದ ಬೆನ್ನಲ್ಲೇ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಡಳಿತವು ಕ್ರಿಮಿನಲ್‌ಗಳ ರಕ್ಷಣೆಗೆ ನಿಂತಿದೆ ಎಂದು ದೇಶದ ಅತಿ ದೊಡ್ಡ ವಿರೋಧ ಪಕ್ಷ ಮಾಲ್ದಿವಿಯನ್‌ ಡೆಮಾಕ್ರಟಿಕ್‌ ಪಾರ್ಟಿ (ಎಂಡಿಪಿ) ಬುಧವಾರ ಆರೋಪಿಸಿರುವುದಾಗಿ ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

‘ಮಾಲೆ ನಗರದ ಬೀದಿಯಲ್ಲಿ ನಸುಕಿನ ವೇಳೆ ಪ್ರಾಸಿಕ್ಯೂಟರ್ ಜನರಲ್ ಹುಸೇನ್ ಶಮೀಮ್ ಮೇಲೆ ದಾಳಿಯಾಗಿದೆ. ಗಾಯಗೊಂಡಿರುವ ಶಮೀಮ್‌ ಅವರು ಎಡಿಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸನ್‌.ಎಂವಿ ಸುದ್ದಿ ತಾಣವು ವರದಿ ಮಾಡಿದೆ.

ದಾಳಿಯನ್ನು ಖಂಡಿಸಿದ ಎಂಡಿಪಿ, ‘ಸಾಂವಿಧಾನಿಕ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವ ಅಧಿಕಾರಿಗಳಿಗೆ ಸರಿಯಾದ ರಕ್ಷಣೆ ನೀಡಲು ಅಧ್ಯಕ್ಷ ಮುಯಿಝು ಆಡಳಿತ ವಿಫಲವಾಗಿದೆ. ಮಾಲ್ದೀವ್ಸ್‌ನಲ್ಲಿ ಸಕ್ರಿಯವಾಗಿರುವ ಕ್ರಿಮಿನಲ್ ಗುಂಪುಗಳೊಂದಿಗೆ ಉನ್ನತ ಸರ್ಕಾರಿ ಅಧಿಕಾರಿಗಳು ಹೊಂದಿರುವ ನಿಕಟ ಸಂಬಂಧಗಳ ಪರಿಣಾಮವಾಗಿ ಉನ್ನತ ಅಧಿಕಾರಿಗಳ ಮೇಲೆ ನಡೆದಿರುವ ಇಂತಹ ನಿರ್ಭೀತ ದಾಳಿಗಳು ನಡೆಯುತ್ತಿವೆ ಎಂಬುದಾಗಿ ಪಕ್ಷವು ಭಾವಿಸಿದೆ. ಅಲ್ಲದೆ, ಸರ್ಕಾರವು ಇಂತಹ ಕ್ರಿಮಿನಲ್‌ಗಳ ಗುಂಪುಗಳಿಗೆ ರಕ್ಷಣೆ ನೀಡುತ್ತಿದೆ’ ಎಂದು ಆರೋಪಿಸಿದೆ.

ADVERTISEMENT

‘ಹಿಂದಿನ ಅಧ್ಯಕ್ಷರ ಆಡಳಿತದ ಅವಧಿಯಲ್ಲಿ ಮಾಲ್ದೀವ್ಸ್‌ನಲ್ಲಿ ಹಿಂಸಾತ್ಮಕ ದಾಳಿಗಳನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿತ್ತು. ಮುಯಿಝು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಂತಹ ಅಪರಾಧಗಳು ಹೆಚ್ಚುತ್ತಿರುವುದನ್ನು ಪಕ್ಷವು ಗಮನಿಸಿದೆ’ ಎಂದು ಎಂಡಿಪಿ ನೀಡಿರುವ ಹೇಳಿಕೆ ಉಲ್ಲೇಖಿಸಿ ಸುದ್ದಿ ತಾಣವು ವರದಿ ಮಾಡಿದೆ.

ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಶಮೀಮ್‌ ಅವರ ಮೇಲೆ ಹರಿತ ಆಯುಧದಿಂದ ದಾಳಿ ನಡೆಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ ಜನರಲ್‌ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.