ADVERTISEMENT

ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅವಕಾಶ

ಪಿಟಿಐ
Published 2 ಜುಲೈ 2019, 16:13 IST
Last Updated 2 ಜುಲೈ 2019, 16:13 IST
ಬ್ರಿಟನ್ ಕೋರ್ಟ್‌ಗೆ ಮಂಗಳವಾರ ಹಾಜರಾಗಿದ್ದ ಉದ್ಯಮಿ ವಿಜಯ್‌ ಮಲ್ಯ ಎಪಿ/ಪಿಟಿಐ ಚಿತ್ರ
ಬ್ರಿಟನ್ ಕೋರ್ಟ್‌ಗೆ ಮಂಗಳವಾರ ಹಾಜರಾಗಿದ್ದ ಉದ್ಯಮಿ ವಿಜಯ್‌ ಮಲ್ಯ ಎಪಿ/ಪಿಟಿಐ ಚಿತ್ರ   

ಲಂಡನ್‌: ಉದ್ಯಮಿ ವಿಜಯ್ ಮಲ್ಯ ಅವರ ಹಸ್ತಾಂತರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬ್ರಿಟನ್ ಕೋರ್ಟ್ ಮಂಗಳವಾರ ಅವರಿಗೆ ಅವಕಾಶ ನೀಡಿದೆ.

ಬ್ಯಾಂಕ್‌ಗಳಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಆದೇಶಕ್ಕೆ ಈಗಾಗಲೇ ಬ್ರಿಟನ್ ಗೃಹ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ಇದರಲ್ಲಿ ಯಾವುದಾದರೂ ಒಂದು ಆಧಾರದ ಮೇಲೆ ಈಗ ಮೇಲ್ಮನವಿ ಸಲ್ಲಿಸಬಹುದು ಎಂದು ಕೋರ್ಟ್‌ ತಿಳಿಸಿದೆ.

ನ್ಯಾಯಮೂರ್ತಿ ಜಾರ್ಜ್ ಲೆಗ್ಗಟ್‌ ಮತ್ತು ಆ್ಯಂಡ್ರ್ಯೂ ಪೊಪ್ಪೆಲ್‌ವೆಲ್ ಅವರನ್ನು ಒಳಗೊಂಡ ರಾಯಲ್‌ ಕೋರ್ಟ್‌ ಆಫ್‌ ಜಸ್ಟೀಸ್‌ ನ್ಯಾಯಪೀಠವು ವಾದ ಆಲಿಸಿದ ನಂತರ ತೀರ್ಮಾನ ಪ್ರಕಟಿಸಿತು.

ADVERTISEMENT

ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಮ್ಮಾ ಅರ್ಬುತೊನಾಟ್ಸ್‌ ಅವರ ಅಂತಿಮ ತೀರ್ಮಾನವನ್ನು ಆಧರಿಸಿ ಸಮಂಜಸವಾಗಿ ವಾದ ಮಂಡಿಸಬಹುದು ಎಂದು ಪೀಠ ಹೇಳಿತು. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಕೋರ್ಟ್ ವಿಚಾರಣೆ ವೇಳೆ ಲಂಡನ್‌ನಲ್ಲಿನ ಭಾರತದ ಹೈಕಮಿಷನ್‌ನ ಪ್ರತಿನಿಧಿಗಳು ಹಾಜರಿದ್ದರು.

ಮಲ್ಯ ಅವರು ಪುತ್ರ ಸಿದ್ದಾರ್ಥ ಮತ್ತು ಪಾಲುದಾರ ಪಿಂಕಿ ಲಾಲ್‌ವಾನಿ ಅವರೊಂದಿಗೆ ಪೀಠದ ವಿಚಾರಣೆಯನ್ನು ವೀಕ್ಷಿಸಿದರು. ಮಲ್ಯ ಪರವಾಗಿ ವಕೀಲೆ ಕ್ಲಾರೆ ಮಾಂಟೆಗೋಮೇರಿ ವಾದ ಮಂಡಿಸಿದರು. ಗಡೀಪಾರು ಸಂಬಂಧ ಕೋರ್ಟ್‌ನ ವಾದಕ್ಕೆ ಅವರು ಉತ್ತರ ನೀಡಿದರು.

ಮಲ್ಯ ವಿರುದ್ಧ ಭಾರತದ ಅಧಿಕಾರಿಗಳು ಮಾಡಿದ ವಾದವನ್ನು ಅಲ್ಲಗಳೆದ ಕ್ಲಾರೆ ಅವರು, ಸಾಲದ ಸುಳಿಯಲ್ಲಿ ಸಿಲುಕಿದ್ದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಾಲ ಪಡೆಯುವ ವೇಳೆ ಲಾಭದ ಬಗ್ಗೆ ಮತ್ತು ಸ್ಪಷ್ಟ ನಿಸ್ಸಂದೇಹವಾದ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ವಾದಿಸಿದರು.ಬ್ರಿಟನ್‌ ಹೈಕೋರ್ಟ್‌ನಲ್ಲಿ ಪೂರ್ಣ ಪ್ರಮಾಣದ ವಿಚಾರಣೆಗೆ ಪ್ರಕರಣ ಈಗ ವರ್ಗಾವಣೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.