ADVERTISEMENT

200ಕ್ಕೂ ಹೆಚ್ಚು ಅಫ್ಗನ್‌ ಮಾಜಿ ಅಧಿಕಾರಿಗಳ ಹತ್ಯೆ: ವಿಶ್ವಸಂಸ್ಥೆ ವರದಿ

ಎಪಿ
Published 22 ಆಗಸ್ಟ್ 2023, 15:57 IST
Last Updated 22 ಆಗಸ್ಟ್ 2023, 15:57 IST
   

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಅಸ್ತಿತ್ವಕ್ಕೆ ಬಂದ ನಂತರ ಹಿಂದಿನ ಸರ್ಕಾರದಲ್ಲಿ ಅಧಿಕಾರಿಗಳಾಗಿದ್ದ 200ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.

ಸೇನೆ, ಪೊಲೀಸ್‌ ಮತ್ತು ಗುಪ್ತಚರ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದವರನ್ನು ಹತ್ಯೆ ಮಾಡಲಾಗಿದೆ ಎಂದು ಅಫ್ಗಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ನೆರವು ಯೋಜನೆಯ (ಯುಎನ್‌ಎಎಂಎ) ಅಂಗಸಂಸ್ಥೆ ಹೇಳಿದೆ.

2021ರ ಆಗಸ್ಟ್‌ 15ರಿಂದ 2023ರ ಜೂನ್‌ ನಡುವೆ ಮಾನವ ಹಕ್ಕುಗಳ ಉಲ್ಲಂಘನೆಯ 800 ಪ್ರಕರಣಗಳು ದಾಖಲಾಗಿವೆ ಎಂದಿದೆ.

ADVERTISEMENT

ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಗಾನಿಸ್ತಾನ ತೊರೆದಾಗ, ದೇಶದ ಮಾಜಿ ಅಧ್ಯಕ್ಷ ಅಶ್ರಫ್‌ ಘನಿ ಕೂಡ ಬೇರೆ ದೇಶಕ್ಕೆ ಪಲಾಯನ ಮಾಡಿದ್ದರು. ಆದರೆ ಅಮೆರಿಕ ಪಡೆಗಳಿಂದ ತರಬೇತಿ ಪಡೆದಿದ್ದ ಅಫ್ಗಾನಿಸ್ತಾನದ ಪಡೆಗಳು ಅಲ್ಲಿಯೇ ಉಳಿದಿದ್ದವು.

ಹಿಂದಿನ ಸರ್ಕಾರದ ಭದ್ರತಾ ಪಡೆಯಲ್ಲಿದ್ದ ಅಧಿಕಾರಿಗಳನ್ನು ತಾಲಿಬಾನ್‌ ಪಡೆಗಳು ವಶಕ್ಕೆ ಪಡೆದು ಬಳಿಕ ಹತ್ಯೆ ಮಾಡಿವೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಲವರನ್ನು ವಶದಲ್ಲಿರುವಾಗಲೇ ಹತ್ಯೆ ಮಾಡಲಾಗಿದೆ. ಇನ್ನು ಕೆಲವರನ್ನು ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದು ಕೊಲೆ ಮಾಡಿ ಅವರ ಮೃತದೇಹಗಳನ್ನು ಅಲ್ಲೇ ಎಸೆಯಲಾಗಿದೆ. ಕೆಲವರ ಮೃತದೇಹಗಳನ್ನಷ್ಟೇ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಲಾಗಿದೆ.

‘ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಅಡಿ ಕಾರ್ಯ ನಿರ್ವಹಿಸಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕು’ ಎಂದು ವರದಿ ಪ್ರಕಟವಾದ ಬಳಿಕ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ವೋಲ್ಕರ್‌ ಟರ್ಕ್‌ ಅವರು ತಾಲಿಬಾನ್‌ ಆಡಳಿತಗಾರರನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.