ADVERTISEMENT

ತಹವ್ವುರ್ ರಾಣಾ ಅಮೆರಿಕದ ಕಾರಾಗೃಹ ಬ್ಯೂರೊದ ವಶದಲ್ಲಿಲ್ಲ: ವರದಿ

ಪಿಟಿಐ
Published 10 ಏಪ್ರಿಲ್ 2025, 2:41 IST
Last Updated 10 ಏಪ್ರಿಲ್ 2025, 2:41 IST
<div class="paragraphs"><p>ತಹವ್ವುರ್ ಹುಸೇನ್ ರಾಣಾ</p></div>

ತಹವ್ವುರ್ ಹುಸೇನ್ ರಾಣಾ

   

ನ್ಯೂಯಾರ್ಕ್: ಅಮೆರಿಕದಿಂದ ಗಡೀಪಾರು ಮಾಡಲಾಗುತ್ತಿರುವ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹವ್ವುರ್ ಹುಸೇನ್ ರಾಣಾ, ಅಮೆರಿಕದ ಕಾರಾಗೃಹ ಬ್ಯೂರೊ ವಶದಲ್ಲಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಫೆಡರಲ್ ಬ್ಯೂರೊ ಆಫ್ ಪ್ರಿಸನ್ಸ್‌ನ(ಬಿಒಪಿ) ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, 2025ರ ಏಪ್ರಿಲ್ 8ರ ಹೊತ್ತಿಗೆ ರಾಣಾ ಬಿಒಪಿ ಕಸ್ಟಡಿಯಲ್ಲಿರಲಿಲ್ಲ.

ADVERTISEMENT

ರಾಣಾ ಕಾರಾಗೃಹ ಬ್ಯೂರೊ ವಶದಲ್ಲಿಲ್ಲ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಬುಧವಾರ ಪಿಟಿಐಗೆ ತಿಳಿಸಿದ್ದಾರೆ.

ಒಬ್ಬ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ ಅಥವಾ ಬಿಒಪಿ ಕಸ್ಟಡಿಯಲ್ಲಿಲ್ಲ ಎಂದು ಪಟ್ಟಿ ಮಾಡಿದ್ದರೆ ಅಥವಾ ಆತನಿಗೆ ಜೈಲಿನ ನಿರ್ದಿಷ್ಟ ಸ್ಥಳ ಸೂಚಿಸದಿದ್ದರೆ, ಕೈದಿ ಇನ್ನು ಮುಂದೆ ಬಿಒಪಿ ಕಸ್ಟಡಿಯಲ್ಲಿಲ್ಲ ಎಂದೇ ಅರ್ಥ. ಅಂದರೆ, ಕೈದಿ ಬೇರೆ ಯಾವುದಾದರೂ ಕ್ರಿಮಿನಲ್ ನ್ಯಾಯ ವ್ಯವಸ್ಥೆ, ಕಾನೂನು ಜಾರಿ ಘಟಕದ ವಶದಲ್ಲಿರಬಹುದು, ಗಡೀಪಾರಾಗಿರಬಹುದು ಅಥವಾ ಪೆರೋಲ್‌ನಲ್ಲಿರಬಹುದು ಎಂದು ಅಧಿಕಾರಿ ಹೇಳಿದ್ದಾರೆ.

ವೆಬ್‌ಸೈಟ್‌ನಲ್ಲಿರುವ ಕೈದಿ ಪತ್ತೆಕಾರಕ ಮಾಹಿತಿಯಲ್ಲಿ ರಾಣಾ ನೋಂದಣಿ ಸಂಖ್ಯೆ 22829-424, ವಯಸ್ಸು, ಜನಾಂಗ ಮತ್ತು ಲಿಂಗ ಕುರಿತ ಮಾಹಿತಿ ನೀಡಲಾಗಿದೆ. ಆದರೆ, ಏಪ್ರಿಲ್ 8ರ ನಂತರ ರಾಣಾ ಬಿಒಪಿ ಕಸ್ಟಡಿಯಲ್ಲಿಲ್ಲ ಎಂದು ನಮೂದಿಸಲಾಗಿದೆ.

64 ವರ್ಷದ ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಮತ್ತು 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹಚರ.

ಬುಧವಾರ ಮುಂಜಾನೆ ಸರ್ಕಾರಿ ಮೂಲಗಳ ಪ್ರಕಾರ, ರಾಣಾನನ್ನು ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ.

ಭಾರತದಿಂದ ಬಹು ಏಜೆನ್ಸಿ ತಂಡವು ಅಮೆರಿಕಕ್ಕೆ ಹೋಗಿದ್ದು, ಎಲ್ಲಾ ದಾಖಲೆಗಳು ಮತ್ತು ಕಾನೂನುಬದ್ಧತೆಗಳನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಪೂರ್ಣಗೊಳಿಸಲಾಗುತ್ತಿದೆ. ರಾಣಾ ಅವರನ್ನು ಶೀಘ್ರದಲ್ಲೇ ಗಡೀಪಾರು ಮಾಡುವ ಸಾಧ್ಯತೆ ತುಂಬಾ ಹೆಚ್ಚಾಗಿದೆ ಎಂದು ಮೂಲಗಳು ಹೇಳಿದ್ದವು.

ಹಸ್ತಾಂತರ ತಡೆ ಕೋರಿ ರಾಣಾ ಸಲ್ಲಿಸಿದ್ದ ಮನವಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವಜಾ ಮಾಡಿದ ನಂತರ ಹಸ್ತಾಂತರ ಪ್ರಕ್ರಿಯೆ ಚುರುಕುಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.