ADVERTISEMENT

ಕಾಬುಲ್‌ನಲ್ಲಿ ಬಾಂಬ್ ದಾಳಿ: ಮಹಿಳೆ, ಮಕ್ಕಳು ಸೇರಿ 23 ಜನರ ಸಾವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 12:32 IST
Last Updated 6 ಮಾರ್ಚ್ 2020, 12:32 IST
ದಾಳಿ ಬಳಿಕ ಸ್ಥಳದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆ
ದಾಳಿ ಬಳಿಕ ಸ್ಥಳದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆ   

ಕಾಬುಲ್: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 23 ಜನರು ಮೃತಪಟ್ಟಿರುವ ಘಟನೆ ಶುಕ್ರವಾರ ಕಾಬೂಲ್‌ನಲ್ಲಿ ನಡೆದಿದೆ.

ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ 23 ಜನರು ಸಾವಿಗೀಡಾಗಿದ್ದರೆ, 33 ಮಂದಿ ಗಾಯಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅಫ್ಘಾನಿಸ್ತಾನದ ಮುಖ್ಯ ಕಾರ್ಯನಿರ್ವಾಹಕ ಅಬ್ದುಲ್ಲಾ ಅಬ್ದುಲ್ಲಾ ಹಾಜರಿದ್ದರು ಎಂದು ಉನ್ನತ ಶಾಂತಿ ಮಂಡಳಿಯ ಮುಖ್ಯಸ್ಥ ಮೊಹಮ್ಮದ್ ಕರೀಮ್ ಖಲೀಲಿ ತಿಳಿಸಿದ್ದಾರೆ.

ಹಿಜ್-ಇ ವಹ್ದತ್ ಪಕ್ಷದ ಮುಖಂಡ ಅಬ್ದುಲ್ ಅಲಿ ಮಜಾರಿ ಅವರ 25ನೇ ಸಾವಿನ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಮಾರಂಭವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ಎರಡನೇ ಉಪ ಮುಖ್ಯ ಕಾರ್ಯನಿರ್ವಾಹಕ ಮೊಹಮ್ಮದ್ ಮೊಹಾಕಿಕ್ ಮತ್ತು ಹಲವಾರು ರಾಜಕಾರಣಿಗಳು ಹಾಜರಿದ್ದರು ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.

ADVERTISEMENT

ಖಲೀಲ್ ಅವರು ಭಾಷಣ ಮಾಡುತ್ತಿದ್ದ ವೇಳೆ ಸ್ಥಳೀಯ ಕಾಲಮಾನ 11.20ರ ಸುಮಾರಿಗೆ ದಾಳಿ ನಡೆದಿದೆ. ಘಟನೆಯಲ್ಲಿ ಅಬ್ದುಲ್ಲಾ, ಕರ್ಜೈ ಮತ್ತು ಖಲೀಲ್‌ ಸುರಕ್ಷಿತವಾಗಿದ್ದು, ಮನೆಗೆ ಹಿಂತಿರುಗಿದ್ದಾರೆ.

ದಾಳಿಯ ಹೊಣೆ ಹೊತ್ತುಕೊಳ್ಳಲುತಾಲಿಬಾನ್ ನಿರಾಕರಿಸಿದೆ. ಕಳೆದ ವರ್ಷವು ಇದೇ ಸಮಾರಂಭದ ಮೇಲೆ ದಾಳಿ ನಡೆದು 11 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.