ADVERTISEMENT

ಹಿಜ್ಬುಲ್ಲಾ ಸಂಘಟನೆಯಿಂದ ಸ್ಫೋಟಕ ವಸ್ತುಗಳ ಸಂಗ್ರಹ: ಅಮೆರಿಕ ಆರೋಪ

ಏಜೆನ್ಸೀಸ್
Published 18 ಸೆಪ್ಟೆಂಬರ್ 2020, 7:52 IST
Last Updated 18 ಸೆಪ್ಟೆಂಬರ್ 2020, 7:52 IST
ಬೆಂಬಲಿಗನೊಬ್ಬ ಹೆಜ್ಬೊಲ್ಲಾ ಸಂಘಟನೆಯ ಧ್ವಜ ಹಿಡಿದಿರುವುದು –ಸಂಗ್ರಹ ಚಿತ್ರ 
ಬೆಂಬಲಿಗನೊಬ್ಬ ಹೆಜ್ಬೊಲ್ಲಾ ಸಂಘಟನೆಯ ಧ್ವಜ ಹಿಡಿದಿರುವುದು –ಸಂಗ್ರಹ ಚಿತ್ರ    

ವಾಷಿಂಗ್ಟನ್‌: ‘ಹಿಜ್ಬುಲ್ಲಾ ಉಗ್ರ ಸಂಘಟನೆಯು ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಡುತ್ತಿದೆ. ಹೀಗಾಗಿ ಯುರೋಪ್‌ ಹಾಗೂ ಇತರ ರಾಷ್ಟ್ರಗಳು ಈ ಸಂಘಟನೆಯ ಮೇಲೆ ಸಂಪೂರ್ಣ ನಿಷೇಧ ಹೇರಬೇಕು’ ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ಘಟಕದ ಸಂಯೋಜಕ ನೇಥನ್‌ ಸೇಲ್ಸ್‌ ಒತ್ತಾಯಿಸಿದ್ದಾರೆ.

ಅಮೆರಿಕದ ಜೆವಿಶ್‌ ಸಮಿತಿ ಆಯೋಜಿಸಿದ್ದ ಆನ್‌ಲೈನ್‌ ಫೋರಂ ಉದ್ದೇಶಿಸಿ ಮಾತನಾಡಿದ ನೇಥನ್‌ ‘ಇತ್ತೀಚಿನ ದಿನಗಳಲ್ಲಿ ಹಿಜ್ಬುಲ್ಲಾ ಸಂಘಟನೆಯು ಬೆಲ್ಜಿಯಂನಿಂದ ಫ್ರಾನ್ಸ್‌, ಗ್ರೀಸ್‌, ಇಟಲಿ, ಸ್ಪೇನ್‌ ಹಾಗೂ ಸ್ವಿಟ್ಜರ್ಲೆಂಡ್‌ಗೆ ಅಮೋನಿಯಂ ನೈಟ್ರೇಟ್‌ ರಾಸಾಯನಿಕವನ್ನು ಸಾಗಣೆ ಮಾಡುತ್ತಿದೆ. ಯುರೋಪ್‌ನ ಎಲ್ಲಾ ಭಾಗಗಳಲ್ಲಿಯೂ ಅದನ್ನು ಸಂಗ್ರಹಿಸಿಡುತ್ತಿದೆ’ ಎಂದು ತಿಳಿಸಿದ್ದಾರೆ.

ಅಮೋನಿಯಂ ನೈಟ್ರೇಟ್‌ ಅನ್ನು ಸಾಮಾನ್ಯವಾಗಿ ರಸಗೊಬ್ಬರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸ್ಫೋಟಕಗಳನ್ನು ತಯಾರಿಸಲೂ ಇದನ್ನು ಉಪಯೋಗಿಸಲಾಗುತ್ತದೆ. ಇದನ್ನು ಸಂಗ್ರಹಿಸಿಡುವುದು ತುಂಬಾ ಅಪಾಯಕಾರಿ. ಏಕೆಂದರೆ ಕಳೆದ ತಿಂಗಳು ಲೆಬನಾನ್‌ನ ರಾಜಧಾನಿ ಬೈರೂತ್‌ನ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಇದಕ್ಕೊಂದು ನಿದರ್ಶನ.

ADVERTISEMENT

‘ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಪ್ರಥಮ ಚಿಕಿತ್ಸೆಯ ಕಿಟ್‌ಗಳಲ್ಲಿ ಯುರೋಪ್‌ನ ವಿವಿಧ ಭಾಗಗಳಿಗೆ ಅಮೋನಿಯಂ ನೈಟ್ರೇಟ್‌ ಸಾಗಾಣೆ ಮಾಡುತ್ತಿದೆ. 2012ರಿಂದಲೂ ಈ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂಬುದು ಅಮೆರಿಕಕ್ಕೂ ಗೊತ್ತಿದೆ. ಗ್ರೀಸ್‌, ಇಟಲಿ ಹಾಗೂ ಸ್ಪೇನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ರಾಸಾಯನಿಕವನ್ನು ಸಂಗ್ರಹಿಸಿರುವ ಸಾಧ್ಯತೆ ಇದೆ’ ಎಂದೂ ನೇಥನ್‌ ಹೇಳಿದ್ದಾರೆ.

‘ಹೆಜ್ಬೊಲ್ಲಾ ಸಂಘಟನೆಯು ಯುರೋಪ್‌ ನೆಲದಲ್ಲೇ ಅಮೋನಿಯಂ ನೈಟ್ರೇಟ್‌ ಸಂಗ್ರಹಿಸಿಡುತ್ತಿರುವುದು ಏಕೆ ಎಂಬುದಕ್ಕೆ ಉತ್ತರವೂ ಸಿಕ್ಕಿದೆ. ಅಗತ್ಯ ಬಿದ್ದಾಗ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಅನುವಾಗಲಿ ಎಂಬ ಕಾರಣಕ್ಕೆ ಸಂಘಟನೆ ಹಾಗೂ ಟೆಹರಾನ್‌ನಲ್ಲಿರುವ ಅದರ ಮಾಸ್ಟರ್‌ ಮೈಂಡ್‌ಗಳು ಸ್ಫೋಟಕವನ್ನು ದಾಸ್ತಾನಿಟ್ಟುಕೊಂಡಿದ್ದಾರೆ ’ ಎಂದು ಅವರು ತಿಳಿಸಿದ್ದಾರೆ.

‘ಅಮೆರಿಕವು 1997ರಲ್ಲೇ ಹಿಜ್ಬುಲ್ಲಾ ಸಂಘಟನೆಯನ್ನು ವಿದೇಶಿ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿದೆ. ಯುರೋಪ್‌ನಲ್ಲೂ ಹೆಜ್ಬೊಲ್ಲಾ ಸಂಘಟನೆಯ ಸೇನಾ ವಿಭಾಗವನ್ನು ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಆದರೆ ಸಂಘಟನೆಯ ರಾಜಕೀಯ ವಿಭಾಗದ ಮೇಲೆ ನಿಷೇಧ ಹೇರಿಲ್ಲ. ರಾಜಕೀಯ ವಿಭಾಗವು ಇತ್ತೀಚಿನ ವರ್ಷಗಳಲ್ಲಿ ಲೆಬನಾನ್‌‌ ಸರ್ಕಾರಗಳ ಜೊತೆ ಗುರುತಿಸಿಕೊಂಡಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.