ADVERTISEMENT

ಅಮೆರಿಕ ಕೇವಲ 75 ಲಕ್ಷ ಡೋಸ್‌ ಲಸಿಕೆಯನ್ನು ಭಾರತಕ್ಕೆ ನೀಡಿದೆ: ರಾಜಾ ಕೃಷ್ಣಮೂರ್ತಿ

ಪಿಟಿಐ
Published 7 ಆಗಸ್ಟ್ 2021, 7:06 IST
Last Updated 7 ಆಗಸ್ಟ್ 2021, 7:06 IST
ರಾಜಾ ಕೃಷ್ಣಮೂರ್ತಿ
ರಾಜಾ ಕೃಷ್ಣಮೂರ್ತಿ   

ವಾಷಿಂಗ್ಟನ್‌: ಅಮೆರಿಕವು ಲಸಿಕೆಯ 75 ಲಕ್ಷ ಡೋಸ್‌ಗಳನ್ನಷ್ಟೇ ಭಾರತಕ್ಕೆ ನೀಡಿದೆ. ಇಂತಹ ಸಮಯದಲ್ಲಿ ಬೈಡನ್‌ ಸರ್ಕಾರ ಜಾಗತಿಕ ಲಸಿಕಾ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಬೇಕು’ ಎಂದು ಭಾರತ–ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

‘ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ತನ್ನ ಪಾಲುದಾರಿಕೆಯನ್ನು ಮುಂದುವರಿಸಲು ಬೈಡನ್‌ ಸರ್ಕಾರ ಉತ್ಸುಕವಾಗಿದೆ. ಭಾರತಕ್ಕೆ ಲಸಿಕೆ ಸೇರಿದಂತೆ ಇತರೆ ನೆರವು ಒದಗಿಸಲು ಬಯಸಿದೆ’ ಎಂದು ಶ್ವೇತ ಭವನ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿತ್ತು.

ಇದರ ಬೆನ್ನಲ್ಲೇ ಕೃಷ್ಣಮೂರ್ತಿ ಅವರು ಜಾಗತಿಕ ಲಸಿಕಾ ಕಾರ್ಯಕ್ರಮವನ್ನುಭಾರತ ಸೇರಿದಂತೆ ಇತರೆ ರಾಷ್ಟ್ರಗಳಿಗೆ ಇನ್ನಷ್ಟು ವಿಸ್ತರಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಅಮೆರಿಕ ಸಂಸತ್ತಿನ 116 ಸದಸ್ಯರ ಬೆಂಬಲವನ್ನು ಪಡೆದುಕೊಂಡಿದ್ದಾರೆ.

ADVERTISEMENT

’ನಾವೆಲ್ಲ ಒಟ್ಟಾಗಿ ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು ಶ್ರಮಿಸೋಣ. ಯಾವುದೇ ದೇಶದಲ್ಲಿ ಸೋಂಕು ಹೆಚ್ಚು ಸಮಯವಿದ್ದರೇ, ಇಡೀ ಜಗತ್ತಿಗೆ ಅಪಾಯ. ಹೊಸ ತಳಿಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಹೆಚ್ಚು’ ಎಂದ ಅವರು, ‘ನೋವಿಡ್‌ ಕಾಯ್ದೆ’ (ಕೋವಿಡ್‌ನ ಹೊಸ ತಳಿ ಪ್ರಸರಣಕ್ಕೆ ಅವಕಾಶ ನೀಡದಿರುವುದು) ಜಾರಿಗೊಳಿಸಬೇಕಿದೆ ಎಂದರು.

‘ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ನಾವು ಕೋವಿಡ್‌ನಿಂದ ಸ್ವತಂತ್ರತೆಯನ್ನು ಘೋಷಿಸಬೇಕು. ಇದಕ್ಕಾಗಿ ಜಾಗತಿಕ ಪಾಲುದಾರಿಕೆಯೊಂದಿಗೆ ಕೋಟ್ಯಂತರ ಲಸಿಕೆ ಉತ್ಪಾದಿಸುವುದು ಅತ್ಯಗತ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ರಾಜಾ ಕೃಷ್ಣಮೂರ್ತಿ, ಸಂಸದರುಗಳಾದ ಜೆಫ್ ಮರ್ಕ್ಲೆ, ಎಲಿಜಬೆತ್‌ ವಾರೆನ್‌ ಮತ್ತು ಪ್ರಮೀಳಾ ಜಯಪಾಲ್ ಅವರು ನೋವಿಡ್‌ ಕಾಯ್ದೆಯ ಮಸೂದೆ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.