ADVERTISEMENT

ಪ್ರೀತಿ ಮತ್ತು ಸಾಮೀಪ್ಯ (ಮಹಬ್ಬ ವ ಖರ್ಬ್)

ಫಕೀರ್ ಮಹಮ್ಮದ ಕಟ್ಪಾಡಿ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ಪ್ರೀತಿ ಮತ್ತು ಸಾಮೀಪ್ಯ (ಮಹಬ್ಬ ವ ಖರ್ಬ್)
ಪ್ರೀತಿ ಮತ್ತು ಸಾಮೀಪ್ಯ (ಮಹಬ್ಬ ವ ಖರ್ಬ್)   

ಸೂಫಿ ಅಧ್ಯಾತ್ಮಿಗಳು ದೇವರು ಮತ್ತು ಭಕ್ತನ ಸಾಮೀಪ್ಯ ಎಷ್ಟರ ಮಟ್ಟಿಗೆ ಇರಬೇಕೆಂಬುದನ್ನು ವಿವರಿಸಲು ಬಹಳ ಪ್ರಯತ್ನಪಡುತ್ತಾರೆ. ಇದೊಂದು ನೈತಿಕ ಸಾಮೀಪ್ಯವೆಂದೂ ಅದು ಎಷ್ಟು ಇರಬೇಕೆಂಬುದು ಎಷ್ಟರಮಟ್ಟಿಗೆ ಅವನ ಅಜ್ಞೆಗಳನ್ನು ಸೂಫಿ ಪಾಲಿಸುತ್ತಾನೆಂಬುದರ ಮೇಲೆ ನಿರ್ಭರವಾಗಿರುತ್ತದೆ ಎಂದು ಅಧ್ಯಾತ್ಮ  ಪಂಡಿತರು ಹೇಳುತ್ತಾರೆ. ಇದು ತನ್ನ ಅವಿಧೇಯತೆಯಿಂದಾಗಿ ದೇವರಿಂದ ಅಗಲಿ ದೂರವಿರುವುದಕ್ಕೆ ವಿರುದ್ಧವಾಗಿರುವ ಶಬ್ಧವೆಂದು ಪರಿಗಣಿಸಲ್ಪಟ್ಟಿದೆ. ಕಾಲಾನಂತರದಲ್ಲಿ ಅಧ್ಯಾತ್ಮಿಗಳು ಸಾಮೀಪ್ಯಕ್ಕೆ ಸಂಬಂಧಿಸಿದ ಕ್ಲಿಷ್ಟಕರವಾದ ‘ಸಾಮೀಪ್ಯದ ಚಿಹ್ನೆಗಳು’, ‘ಸಾಮೀಪ್ಯದ ನಾಮಗಳು’ ಮುಂತಾದ ಹಂತಗಳನ್ನು ಕಂಡುಕೊಂಡರು. ಇವುಗಳು ಸೂಫಿ ಅಧ್ಯಾತ್ಮಿಯೊಬ್ಬ ಎಷ್ಟರಮಟ್ಟಿಗೆ ದೈವೀ ಸಾಮೀಪ್ಯದ ಚಿಹ್ನೆಗಳನ್ನು ಪಡೆದುಕೊಂಡಿದ್ದಾನೆಂಬುದಕ್ಕೆ ಸಂಬಂಧಿಸಿರುತ್ತದೆ. ಅತ್ಯಂತ ಉಚ್ಛಮಟ್ಟದ ಶ್ರದ್ಧಾಭಕ್ತಿಯಿಂದಾಗಿ ಪಡೆಯುವ ಸಾಮೀಪ್ಯವನ್ನು ದೇವರು ತನ್ನ ‘ಹದೀಸುಲ್ ಖುದ್ಸಿ’ಯಲ್ಲಿ ವಿವರಿಸಿದ್ದಾನೆ:


‘ನನ್ನ ಭಕ್ತನು ನನ್ನ ಸಾಮೀಪ್ಯವನ್ನು ತನ್ನ ಶ್ರದ್ಧಾಭಕ್ತಿಯ ಮೂಲಕ ಬಯಸಿದರೆ ನಾನು ಅವನನ್ನು ಪ್ರೀತಿಸುವ ಮುಂಚೆ ನನ್ನನ್ನು ತಲಪಲಾರನೆನ್ನುವುದನ್ನು ಅವನು ತಿಳಿದಿರಬೇಕು. ನಾನು ಅವನನ್ನು ಪ್ರೀತಿಸಿದ ನಂತರ ನಾನೇ ಅವನ ಕಣ್ಣಿನ ದೃಷ್ಟಿಯಾಗಿ, ಕೇಳುವ ಶ್ರವಣಶಕ್ತಿಯಾಗಿರುತ್ತೇನೆ. ಅವನು ದೂರವನ್ನು ದಾಟಿ ಸಮೀಪಿಸಲು ಬಯಸಿದಾಗ ನಾನು ಅವನ ವಾಹನವಾಗುತ್ತೇನೆ, ಅವನು ನನ್ನೆಡೆಗೆ ನಡೆದು ಬರಲು ಬಯಸಿದಾಗ ನಾನು ಓಡೋಡಿ ಅವನ ಬಳಿ ಬರುತ್ತೇನೆ’.


ಭಾರತದ ನಕ್ಷ್‌ಬಂದಿಯಾ ಸೂಫಿ ಪರಂಪರೆಯವರು ‘ಖರ್ಬ್ ಅಲ್ ಫರಾಯಿದ್’ ಅಂದರೆ ಕರ್ತವ್ಯ ಪಾಲಿಸುವ ಸಾಮೀಪ್ಯವನ್ನು ಪಡೆಯುವುದು ಇಸ್ಲಾಮಿನ ಕರ್ತವ್ಯದ ಪಾಲನೆಯ ಮೂಲಕ ಮಾತ್ರ ಸಾಧ್ಯವಾಗುವುದೆಂದು ನಂಬಿದ್ದರು. ಇದರಿಂದಾಗಿ ಅಧ್ಯಾತ್ಮದ ಪರಮೋಚ್ಛ ಪದವಾದ ‘ಪ್ರವಾದಿತ್ವದ ಸ್ಥಿತಿಯ ಸಾಮೀಪ್ಯ’(ಖರ್ಬ್ ಅನ್ ನವಾಫಿಲ್)ವನ್ನು ಸಾಧಿಸುವುದು ಸಾಧ್ಯವೆಂದುಕೊಂಡಿದ್ದರು. ಆದರೆ ಹಲವು ಸೂಫಿ ಅಧ್ಯಾತ್ಮ ಪಂಡಿತರು ‘ಸಾಮೀಪ್ಯ’ ಯಾ ‘ಖರ್ಬ್’ ಎಂಬುದು ಹಂತವೆಂದು ಸೂಫಿ ಪಂಥದಲ್ಲಿ ಪರಿಗಣಿಸಲು ಸಾಧ್ಯವಿಲ್ಲವೆಂದು ನಿರಾಕರಿಸಿದ್ದರು. ಇವರ ಪ್ರಕಾರ ಸೂಫಿ ಪಂಥದಲ್ಲಿ ಅಧ್ಯಾತ್ಮದ ಪರಮೋಚ್ಛ ಹಂತವೆಂದರೆ ಸಾಮೀಪ್ಯವಲ್ಲ, ಅಂತಿಮವಾಗಿ ದೇವರೊಂದಿಗೆ ಲೀನವಾಗುವುದು(ಫನಾ) ಎಂದು ಅಭಿಪ್ರಾಯಪಟ್ಟಿದ್ದರು.
ಹೀಗಾಗಿ ಈ ರೀತಿ ಅಭಿಪ್ರಾಯಬೇಧವಿರುವವರು ‘ಶೌಖ್’ ಅಥವಾ ‘ಉತ್ಕಟವಾದ ಹಂಬಲ’ವೆಂಬ ಸೂಫಿ ಅಧ್ಯಾತ್ಮ ಸಾಧನೆಯ ಹಂತವನ್ನು ಕೂಡ ನಿರಾಕರಿಸುತ್ತಾರೆ. ಯಾಕೆಂದರೆ ಇವರ ಪ್ರಕಾರ ಹಂಬಲಿಸುವುದು ಯಾವಾಗ? ಇಲ್ಲದಿರುವಾಗಲಲ್ಲವೇ? ಎನ್ನುತ್ತಾರೆ. ಅಂದರೆ ಅಲ್ಲಾಹ ಎಲ್ಲೆಡೆಗಳಲ್ಲೂ, ಎಲ್ಲ ಸಂದರ್ಭದಲ್ಲೂ ಹಾಜರಾಗಿರುವವನು, ಗೈರುಹಾಜರಿ ಇರುವಲ್ಲಿ ಮಾತ್ರ ಹಂಬಲದ ಅಗತ್ಯವಿರುತ್ತದೆ ಎಂದು ಇವರು ವ್ಯಾಖ್ಯಾನಿಸುತ್ತಾರೆ. ಕುರಾನಿನ ಸಂದೇಶ(50:16)ದಲ್ಲಿ ‘ನಿಮ್ಮ ಕತ್ತಿನ ನರಕ್ಕಿಂತ ಅತ್ಯಂತ ಸಮೀಪದಲ್ಲಿ ನಾನಿರುತ್ತೇನೆ’ ಎನ್ನುವಂತೆ, ನಿಜವಾದ ಸೂಫಿ ಅಧ್ಯಾತ್ಮಿಯು ಸದಾಕಾಲ ಅವನ ಇರುವಿಕೆಯನ್ನು ಅರಿತಿರುತ್ತಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.