ADVERTISEMENT

ಮರಳಿ ಯತ್ನವ ಮಾಡು

ಫಾ.ಚೇತನ್ ಕಾಪುಚಿನ್
Published 19 ಮಾರ್ಚ್ 2018, 19:30 IST
Last Updated 19 ಮಾರ್ಚ್ 2018, 19:30 IST
ಮರಳಿ ಯತ್ನವ ಮಾಡು
ಮರಳಿ ಯತ್ನವ ಮಾಡು   

ಜೀವನದಲ್ಲಿ ಸೋಲುಗಳ ಸರಪಣಿ ಎದುರಾದಾಗ ‘ಮರಳಿ ಯತ್ನಿಸು, ನಿರಾಶನಾಗಬೇಡ’ ಎಂಬ ಪ್ರೋತ್ಸಾಹದ ಮಾತುಗಳು ಮಿತ್ರರು ಹಾಗೂ ಹಿತೈಷಿ
ಗಳಿಂದ ಕೇಳಸಿಗುತ್ತವೆ. ಹಲವರು ಈ ಮಾತುಗಳನ್ನು ಆಲಿಸಿ, ಮರಳಿ ಯತ್ನವ ಮಾಡಿ ಗೆಲುವನ್ನು ಸಾಧಿಸುತ್ತಾರೆ. ಆದರೆ ಹಲವರು ಈ ಪ್ರೋತ್ಸಾಹದ ಮಾತುಗಳು ಪರಿಣಾಮಕಾರಿಯಾಗದೆ, ವಿನಾಶದ ಅಂಚಿಗೆ ಸಾಗುತ್ತಾರೆ. ತೊಂಬತ್ತೊಂಬತ್ತು ಸಲ ಪ್ರಯತ್ನಿಸಿ ನಿರಾಶನಾದವನು ಈ ಪ್ರೋತ್ಸಾಹದ ಮಾತುಗಳಿಗೆ ಬೆಲೆಕೊಟ್ಟು ನೂರನೇ ಬಾರಿ ಪ್ರಯತ್ನಿಸಿ ಜಯಶಾಲಿಯಾಗುವುದು ಅಸಾಧ್ಯವೇನಲ್ಲ.

ಅಮೆರಿಕಾದ ವಿಶ್ವವಿಖ್ಯಾತ ಇಂಗ್ಲೀಷ್ ಕಾದಂಬರಿಕಾರ ಸ್ಟೀಫನ್ ಕಿಂಗ್ ಬರೆಯಲು ಆರಂಭಿಸಿದಾಗ ಬಹಳ ಪರಿಶ್ರಮದ ಜೀವನವನ್ನು ನಡೆಸಿದ. ತನ್ನಮದುವೆಗೆ ತೊಡಲು ಬಟ್ಟೆಗೆ ಗತಿಯಿಲ್ಲದೆ, ಎರವಲು ಪಡೆದ ಬಟ್ಟೆಯನ್ನು ತೊಟ್ಟು ಮದುವೆಯಾದ. ವಾಸಿಸಲು ಮನೆಯಿಲ್ಲದೆ, ಮುರುಕಲು ಜೋಪಡಿ
ಯಲ್ಲಿ ಪತ್ನಿಯೊಡನೆ ಜೀವಿಸಿ, ಹೊಟ್ಟೆಪಾಡಿಗಾಗಿ ಇಬ್ಬರೂ ಅವರಿವರ ಮನೆಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಆದರೂ ಬರಹವನ್ನು ಮುಂದುವರಿಸಿದ. ಬಹು ಉಪಯುಕ್ತವಾದ ಟೆಲಿಫೋನಿನ ಬಿಲ್ಲನ್ನು ಕಟ್ಟಲ್ಲು ದುಡ್ಡಿಲ್ಲದೆ ಅದನ್ನೂ ತೆಗೆದುಹಾಕಿದ. ತಾನು ಬರೆದ ಕತೆ, ಕಾದಂಬರಿಗಳನ್ನು ಕಳುಹಿಸಿದ ಸಂಪಾದಕರು ಹಾಗೂ ಪ್ರಕಾಶನ ಸಂಸ್ಥೆಗಳಿಂದ ತಿರಸ್ಕೃತವಾಗಿದೆ ಎಂದು ತಿಳಿಸಿ ಬಂದ ಪತ್ರಗಳ ದೊಡ್ಡ ಸಂಗ್ರಹವೇ ಅವನ ಬಳಿ ಇತ್ತು. ಆತನ ಪ್ರಥಮ ಕತೆಯು ಸ್ವೀಕೃತವಾಗುವುದಕ್ಕಿಂದ ಮೊದಲು ಅರವತ್ತು ಬಾರಿ ತಿರಸ್ಕೃತಗೊಂಡಿತ್ತು. ಆ ಕತೆಯ ಸಂಭಾವನೆಯಾಗಿ ಅವನಿಗೆ ಮೂವತ್ತ ಐದು ಡಾಲರುಗಳು ಸಿಕ್ಕವು. ಛಲ ಬಿಡದ ತ್ರಿವಿಕ್ರಮನಂತೆ ಬರಹವನ್ನು ಬಿಡದೆ ಪ್ರಯತ್ನಿಸಿದ ಸ್ಟೀಫನ್ ಕಿಂಗ್ ಇಂದು ವಿಶ್ವದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬನು. ಸುಮಾರು ಅರುವತ್ತರಷ್ಟು ದೀರ್ಘ ಕಾದಂಬರಿಗಳು, ಇನ್ನೂರರಷ್ಟು ಸಣ್ಣಕತೆಗಳನ್ನು ಅವನು ಬರೆದಿದ್ದಾನೆ. ಹಾರರ್ ಕಾದಂಬರಿಗಳನ್ನು ಬರೆಯುವುದರಲ್ಲಿ ಕಿಂಗ್‌ಗೇ ಸಾಟಿಯೇ ಇಲ್ಲ.

ಸ್ಟೀಫನ್ ಕಿಂಗ್‌ನಂತಹ ಹಲವಾರು ವ್ಯಕ್ತಿಗಳು ನಮ್ಮ ಸಮಾಜದಲ್ಲಿದ್ದಾರೆ. ಅಫಘಾತದಲ್ಲಿ ದೇಹದ ಅಂಗಗಳನ್ನು ಕಳೆದುಕೊಂಡವರು ನಿರಾಶರಾಗದೆ, ಮತ್ತೆ ಪ್ರಯತ್ನಿಸಿ ಕ್ರೀಡಾಕ್ಷೇತ್ರದಲ್ಲೋ, ಸಿನೆಮಾರಂಗದಲ್ಲೋ ತಾವು ಕಂಡ ಕನಸಿನ ಬೆನ್ನತ್ತಿ ಜಯಶಾಲಿಯಾದವರು ಹಲವರು. ಕ್ಷುಲ್ಲಕ ಕಾರಣಗಳಿಗೆ ನಿರಾಶರಾಗಿ ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಜೀವನವನ್ನು ಒಡ್ಡುವವರಿಗೆ ಈ ಸಾಧಕರು ಒಳ್ಳೆಯ ಆದರ್ಶವಾಗಿದ್ದಾರೆ. ಕುಸ್ತಿಯ ಕಣದಲ್ಲಿ ಸೋಲಿನ ಘೋಷಣೆ ಆಗುವುದು ನೆಲಕ್ಕೆ ಬಿದ್ದಾಗ ಅಲ್ಲ, ಏಳಲು ಪ್ರಯತ್ನಿಸದೆ ಇದ್ದಾಗ ಎಂಬ ಮಾತುಗಳ ಅರ್ಥವನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.