ADVERTISEMENT

ಮಾತು ಬೆಳ್ಳಿ, ಮೌನ ಬಂಗಾರ

ಫಾ.ಚೇತನ್ ಕಾಪುಚಿನ್
Published 16 ನವೆಂಬರ್ 2015, 19:30 IST
Last Updated 16 ನವೆಂಬರ್ 2015, 19:30 IST

‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನೂ ನೀಡಿದ್ದಾರೆ. ಪ್ರಾಯಶಃ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದವರಿಗಾಗಿ ಇದು ಚಾಲನೆಗೆ ಬಂದಿರಬಹುದು. ಇದರೊಂದಿಗೆ ‘ಮಾತು ಕಡಿಮೆ, ಹೆಚ್ಚು ದುಡಿಮೆ’ ಎಂಬ ಮಾತನ್ನೂ ತಳಕು ಹಾಕಿದ್ದಾರೆ.

ಈ ಲೋಕ ಸೃಷ್ಟಿಯಾದದ್ದು ಮಾತಿನಿಂದ ಎಂದು ಧರ್ಮಗ್ರಂಥ ಹೇಳುತ್ತದೆ. ಆದಿಯಲ್ಲಿ ದೇವರೆಂದರು ‘ಬೆಳಕಾಗಲಿ’ ಎಂದ. ಹಾಗೆಯೇ ಆಯಿತು. ಅಂತೆಯೇ ಸೃಷ್ಟಿಸಲ್ಪಟ್ಟ ಪ್ರತಿ ವಸ್ತುವೂ, ಜೀವಿಯು ದೇವವಾಕ್ಯದಿಂದ ಸೃಷ್ಟಿಸಲ್ಪಟ್ಟಿತು ಎಂದರೆ ಆ ಮಾತಿನ ಶಕ್ತಿ ಎಷ್ಟಿರಬೇಕು? ಧರ್ಮಗ್ರಂಥಗಳಲ್ಲಿ ಬರೆಯಲ್ಪಟ್ಟ ದೇವವಾಕ್ಯವು ತಲೆತಲಾಂತರದಿಂದ ಮಾನವನ ಹಾದಿಗೆ ದಾರಿದೀಪವಾಗಿದೆ. ಈ ವಾಕ್ಯವು ಇಂದಿಗೂ ಪವಾಡಗಳನ್ನೇ ಮಾಡಬಲ್ಲುದು. ವ್ಯಾಧಿಷ್ಟರಿಗೆ ಆರೋಗ್ಯವನ್ನು, ಮೃತಪಟ್ಟವರಿಗೆ ಜೀವವನ್ನು ನೀಡಬಲ್ಲುದು. ಇದೆಲ್ಲ ಘಟಿಸಲು ಬಹುಮುಖ್ಯ ವಾಗಿದೆ ವಿಶ್ವಾಸ. ತಾನು ಮಾಡಿದ ಪ್ರತಿಯೊಂದು ಒಳ್ಳೆಯ ಕೆಲಸದ ಕೊನೆಗೆ ಯೇಸುಸ್ವಾಮಿ ಹೇಳಿದ್ದು ಇದನ್ನೇ, ನಿನ್ನ ವಿಶ್ವಾಸದಿಂದ ನೀನು ಗುಣಮುಖನಾದೆ.

ದೇವವಾಕ್ಯದಂತೆ ಮಾನವ ನುಡಿಯೂ ಕೂಡಾ ಪವಾಡಗಳನ್ನು ಮಾಡಬಲ್ಲುದು. ದುಃಖಿತರಿಗೆ ಸಾಂತ್ವನವನ್ನು, ನಿರಾಶೆಯಲ್ಲಿರುವವರಿಗೆ ಭರವಸೆಯನ್ನು, ಒಂಟಿತನದಿಂದ ಕಷ್ಟಪಡುವವರಿಗೆ ಗೆಳೆತನ, ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವವನ್ನು ನೀಡಬಲ್ಲುದು.

ವಿಪರ್ಯಾಸವೆಂದರೆ, ಇಷ್ಟೊಂದು ಬಲಶಾಲಿ ಸಾಧನ ನಮ್ಮ ಬಳಿಯಿರುವಾಗ ಅಗತ್ಯ ಕಾಲಕ್ಕೆ ಅದನ್ನು ಬಳಸದೇ, ‘ಮೌನವೇ ಬಂಗಾರ’ ಎಂಬ ಸೋಗಿನಲ್ಲಿರುತ್ತೇವೆ. ಅನ್ಯಾಯವನ್ನು ಖಂಡಿಸಲು ಅವಕಾಶವಿರುವಾಗ ಮಾತು ಬರದ ಮೂಕರಾಗುತ್ತೇವೆ. ಅಸತ್ಯದ ಆಳ್ವಿಕೆಯಿರುವಾಗ, ಸತ್ಯವನ್ನು ಪಸರಿಸಲು ಹಿಂಜರಿಯುತ್ತೇವೆ. ಇಂತಹ ಸಂದರ್ಭಗಳಲ್ಲಿ ಖಂಡಿತವಾಗಿ ಮೌನ ಬಂಗಾರವಲ್ಲ. ಮೌನದ ಮರೆಯಲ್ಲಿ ಬಚ್ಚಿಟ್ಟು ಕುಳಿತುಕೊಳ್ಳುವುದು ಆಷಾಡಭೂತಿತನದ ಸಂಕೇತ. ಇಂತಹ ಸಂದರ್ಭಗಳಲ್ಲಿ ಅನ್ಯಾಯವನ್ನು ಖಂಡಿಸಿ ಮಾತನಾಡುವುದು ಸುಲಭವಲ್ಲ.

ಆದರೆ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ, ಮಹಾತ್ಮಾ ಗಾಂಧಿ ಇನ್ನಿತರ ಈ ಲೋಕದ ವ್ಯಕ್ತಿಗಳು ಇಂತಹ ಸಂದರ್ಭಗಳಲ್ಲಿ ಮೌನವಾಗಿರದೇ ಬಾಯಿ ತೆರೆದು ಮಾತನಾಡಿದ್ದರಿಂದಲೇ, ಅವರನ್ನು ಇಂದು ‘ಮಹಾಪುರುಷರೆಂದು’ ಕರೆಯಲಾಗುತ್ತದೆ. ಇಂತಹ ವ್ಯಕ್ತಿಗಳಲ್ಲಿದ್ದ ಕಿಂಚಿತ್ ಧೈರ್ಯ ನಮ್ಮದೂ ಆಗಲೆಂದು ಬಯಸೋಣವೇ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.