ADVERTISEMENT

ವಿವೇಕ

ಫಾ.ಚೇತನ್ ಕಾಪುಚಿನ್
Published 23 ಏಪ್ರಿಲ್ 2018, 19:35 IST
Last Updated 23 ಏಪ್ರಿಲ್ 2018, 19:35 IST

ತನ್ನ ಸ್ವರೂಪ ಹಾಗೂ ಹೋಲಿಕೆಯಲ್ಲಿ ಸೃಷ್ಟಿಸಲ್ಪಟ್ಟ ಮಾನವನ ವ್ಯಕ್ತಿತ್ವವನ್ನು ಸೃಷ್ಟಿಕರ್ತನು ಸ್ವಾಭಾವಿಕ ನೈತಿಕ ಮೌಲ್ಯಗಳಿಂದ ಅಲಂಕರಿಸಿದ್ದಾನೆ. ಮಿಕ್ಕೆಲ್ಲ ಸದ್ಗುಣಗಳು ಈ ಸ್ವಾಭಾವಿಕ ಮೌಲ್ಯಗಳ ಅಸ್ತಿವಾರದ ಮೇಲೆ ಸ್ಥಾಪಿಸಲ್ಪಟ್ಟಿವೆ. ಗ್ರೀಕ್ ತತ್ವಜ್ಞಾನಿ ಪ್ಲೇಟೊ ತನ್ನ ‘ರಿಪಬ್ಲಿಕ್’ ಗ್ರಂಥದಲ್ಲಿ ಈ ಸ್ವಾಭಾವಿಕ ಮೌಲ್ಯಗಳನ್ನು ‘ಕಾರ್ಡಿನಲ್ ವರ್ಚುಸ್’ ಎಂದು ವಿವರಿಸುತ್ತಾನೆ. ಇವು ಧಾರ್ಮಿಕ ಮೌಲ್ಯಗಳಲ್ಲ, ಬದಲಾಗಿ ಎಲ್ಲಾ ಮಾನವರಲ್ಲೂ ಇವು ಸಹಜ ನೈತಿಕ ಸ್ವಭಾವವನ್ನು ತೋರ್ಪಡಿಸುತ್ತವೆ. ನಾಲ್ಕು ನೈತಿಕ ಮೌಲ್ಯಗಳು ಇವು: ವಿವೇಕ, ನ್ಯಾಯ, ಧೈರ್ಯ ಹಾಗೂ ಆತ್ಮಸಂಯಮ. ವಿವೇಕವನ್ನು ಸರಳವಾಗಿ ‘ಒಳಿತನ್ನು ಮಾಡು ಕೆಟ್ಟದನ್ನು ತ್ಯಜಿಸು’ ಎಂದು ವ್ಯಾಖ್ಯಾನಿಸಬಹುದು. ವಿವೇಕವು ಸರಿಯಾದ ಕಾರಣದಿಂದ ಸರಿಯಾದ ಕಾರ್ಯವನ್ನು ಎಸಗುವುದು. ವಿವೇಕವು ಸರಿ ಮತ್ತು ತಪ್ಪುಗಳ ವ್ಯತ್ಯಾಸವನ್ನು ನಮಗೆ ತಿಳಿಸಿ, ಸರಿಯಾದ ಕಾರಣಕ್ಕಾಗಿ ಸರಿಯಾದ ಕಾರ್ಯವನ್ನು ಮಾಡಲು ಪ್ರೇರೇಪಿಸುತ್ತದೆ. ಸರಿಯಾದುದನ್ನು ಆರಿಸುವುದರ ಬದಲಾಗಿ ತಪ್ಪನ್ನು ಆರಿಸಿದರೆ ನಾವು ವಿವೇಕರಹಿತವಾಗಿ ವರ್ತಿಸಿದಂತಾಗುತ್ತದೆ.

ದಿನನಿತ್ಯದ ಜೀವನದಲ್ಲಿ ನಮ್ಮ ಅಂತರಾತ್ಮದ ಸ್ವರವನ್ನು ಆಲಿಸುವುದು ಹಾಗೂ ಇತರರ ಒಳ್ಳೆಯ ಮಾತಿಗೆ ಕಿವಿಗೊಡುವುದು; ಸಾಕ್ಷ್ಯಾಧಾರಗಳ ಸಮಕ್ಷಮದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು; ವಿವೇಕಭರಿತ ನಿರ್ಧಾರದ ಆಧಾರದ ಮೇಲೆ ಮುಂದಿನ ಜೀವನವನ್ನು ರೂಪಿಸುವುದು, ಇತ್ಯಾದಿ ವಿವೇಕಭರಿತ ಜೀವನದ ಲಕ್ಷಣಗಳಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ ಪರರು ನೀಡಿದ ಒಳ್ಳೆಯ ಸಲಹೆಗಳು ನಮಗೆ ರುಚಿಸದಿದ್ದರೆ ಅವುಗಳನ್ನು ತಿರಸ್ಕರಿಸುವುದು; ನಾವು ತಪ್ಪಾಗಿದ್ದರೂ ಪರರ ಮಾತನ್ನು ತಳ್ಳಿಹಾಕುವುದು, ಇತ್ಯಾದಿ ಅವಿವೇಕದ ಲಕ್ಷಣಗಳಾಗಿವೆ. ಯೇಸುಸ್ವಾಮಿ ತನ್ನ ಸ್ವಂತ ಊರಾದ ನಜರೇತಿನ ಪ್ರಾರ್ಥನಾ ಮಂದಿರದಲ್ಲಿ ಬೋಧಿಸಿದಾಗ ಶ್ರೋತೃವೃಂದವು ದಂಗುಬಡಿದು ಕುಳಿತಿತ್ತು. ಬಡಗಿಯ ಮಗನಾದ ಇವನಿಗೆ ಈ ವಿವೇಕ ಬಂದಿದ್ದು ಎಲ್ಲಿಂದ? ಎಂದು ಪ್ರಶ್ನಿಸಲಾರಂಭಿಸಿತು. ಜನರ ಈ ಪ್ರಶ್ನೆಗೆ ಯೇಸುಸ್ವಾಮಿ ಯೋಹಾನ್ನನ ಶುಭಸಂದೇಶದಲ್ಲಿ ಈ ಪರಿಯಾಗಿ ಉತ್ತರಿಸುತ್ತಾರೆ: ನಾನು ನೀಡುವ ಬೋಧನೆಯು ನನ್ನದಲ್ಲ; ನನ್ನನ್ನು ಕಳುಹಿಸಿದಾತನದು. ದೈನಂದಿನ ಜೀವನದಲ್ಲಿ ಹಲವಾರು ಸನ್ನಿವೇಶಗಳು, ವಿಷಯಗಳು ನಮ್ಮ ಮೇಲೆ ಪ್ರಭಾವವನ್ನು ಬೀರುವಾಗ ನಾವು ವಿವೇಕವನ್ನು ಕಳೆದುಕೊಂಡು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಹಲವು. ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟವಾದ ವಿಷಯದಲ್ಲಿ ಸೂಕ್ತ ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಶಕ್ತರಾದರೆ ಭವಿಷ್ಯವು ಅಂಧಕಾರವಾಗಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT