ADVERTISEMENT

ಆ 77 ದಿನಗಳು

ಡಾ.ಆಶಾ ಬೆನಕಪ್ಪ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST
ಆ 77 ದಿನಗಳು
ಆ 77 ದಿನಗಳು   

ಕಳೆದ ತಿಂಗಳು ಆರೋಗ್ಯ ವಿಪರೀತ ಹದಗೆಟ್ಟಿದ್ದರಿಂದ ಮೂರು ದಿನಗಳ ಕಾಲ ಹಾಸಿಗೆ ಹಿಡಿದಿದ್ದೆ. ಕಾಯಿಲೆ ಬಿದ್ದು ಹಾಸಿಗೆ ಮೇಲೆ ಮಲಗುವುದು ಎಷ್ಟು ಕಷ್ಟವೆಂದು ಅರಿವಾದದ್ದೇ ಆಗ. ತುಂಬಾ ಸಮಯ ಮಲಗಿದ್ದರಿಂದ ಹಿಂಬದಿಯಲ್ಲಿ ವಿಪರೀತ ನೋವು ಮತ್ತು ದೇಹ ನಿತ್ರಾಣಗೊಂಡಿತ್ತು. ಆಗ ನನಗೆ 77 ದಿನಗಳ ಕಾಲ ಹಾಸಿಗೆ ಮೇಲೆ ಮಲಗಿದ್ದ ಭಳೇಶ್ ನೆನಪು ಕಾಡತೊಡಗಿತು.

ಜಿ.ಬಿ. (ಗ್ಯುಲಿಯನ್ ಬೇರ್) ಸಿಂಡ್ರೋಮ್ ಕುತ್ತಿಗೆ, ಹಿಂಬದಿ, ಅಂಗಾಂಗಗಳು ಮತ್ತು ಉಸಿರಾಟಕ್ಕೆ ನೆರವಾಗುವ ಮಾಂಸಖಂಡಗಳ ಶಕ್ತಿಹೀನತೆಗೆ ಕಾರಣವಾಗುತ್ತದೆ. ರೋಗಿ ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದರೂ ಆತನಿಗೆ ಮಾತನಾಡಲು ಹಾಗೂ ತನ್ನ ಅವಯವಗಳನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ.

ಭೂದಿಗುಂಪಾ ಗ್ರಾಮದವನಾದ 13 ವರ್ಷದ ಭಳೇಶ್ 2011ರ ಜ.25ರಂದು ವಾಣಿ ವಿಲಾಸ ಮಕ್ಕಳ ಆಸ್ಪತ್ರೆಗೆ ದಾಖಲಾದ. ಅಂಗಾಂಗಗಳು ದುರ್ಬಲವಾಗಿದ್ದ, ಮಾತನಾಡಲಿಕ್ಕೆ ಸಾಧ್ಯವಾಗದಿದ್ದ, ನಿಯಂತ್ರಣ ಕಳೆದುಕೊಂಡಂತೆ ಕತ್ತು ತೂಗಾಡುತ್ತಿದ್ದ ತಮ್ಮ ಮಗನನ್ನು ಭಳೇಶ್‌ನ ಪೋಷಕರು ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ದು ತೋರಿಸಿದ್ದರು.

ನಿಮ್ಹಾನ್ಸ್‌ಗೆ ಕರೆದೊಯ್ದಾಗ ದುರದೃಷ್ಟವಶಾತ್ ಅಲ್ಲಿ ವೆಂಟಿಲೇಟರ್ (ಕೃತಕ ಉಸಿರಾಟಕ್ಕೆ ಅವಕಾಶ ಕಲ್ಪಿಸುವ ಯಂತ್ರ) ಲಭ್ಯವಿರಲಿಲ್ಲ. ಅದೇ ವೇಳೆ ನಿಮ್ಹಾನ್ಸ್‌ನಲ್ಲಿ ಸೇವೆ ಸಲ್ಲಿಸಲು ನೇಮಕಗೊಂಡಿದ್ದ ನನ್ನ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ದಿವ್ಯಾ ನಾಗಭೂಷಣ್ ಈ ಮಗುವನ್ನು ನೋಡಿ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಲ್ಲದೆ, ಕೂಡಲೇ ವೆಂಟಿಲೇಟರ್ ಸಿದ್ಧವಾಗಿಟ್ಟುಕೊಳ್ಳುವಂತೆ ನಮಗೆ ಮಾಹಿತಿ ನೀಡಿದರು.

ಭಳೇಶ್ ತೀವ್ರ ಅಸ್ವಸ್ಥಗೊಂಡಿದ್ದ. ಅವನ ಪೋಷಕರಿಗೆ ವೆಂಟಿಲೇಟರ್ ಶುಲ್ಕ ಒಳಗೊಂಡಂತೆ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಹೊಂದಿಸುವುದು ಕಷ್ಟವಾಗಿತ್ತು. ಆದರೆ, ಶ್ವಾಸಕೋಶದ ಸ್ನಾಯುಗಳು ಪಾರ್ಶ್ವವಾಯುವಿಗೆ ತುತ್ತಾಗಿ ಸ್ವತಃ ಉಸಿರಾಡಲು ಮಗುವಿಗೆ ಅಸಾಧ್ಯವಾಗಿತ್ತು.
 
ವೆಂಟಿಲೇಟರ್‌ಗೆ ಸಂಪರ್ಕಿಸದೇ ಇದ್ದಲ್ಲಿ ಭಳೇಶ್ ಸಾಯುವ ಎಲ್ಲಾ ಸಾಧ್ಯತೆಗಳು ಇದ್ದಿದ್ದರಿಂದ ನಾನು ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಶ್ವಾಸಕೋಶದ ಸ್ನಾಯುಗಳು  ಚೇತರಿಸಿ ಕೊಳ್ಳುವವರೆಗೂ ಭಳೇಶ್‌ಗೆ ಈ ಯಂತ್ರದ ಅವಶ್ಯಕತೆ ಇತ್ತು. ಈ ಚಿಕಿತ್ಸೆ ಹಲವು ತಿಂಗಳುಗಳಾದರೂ ತೆಗೆದುಕೊಳ್ಳಬಹುದಾಗಿತ್ತು.

ಆಸ್ಪತ್ರೆಯಲ್ಲಿ ಆತನ ಚಿಕಿತ್ಸೆಗಾಗಿ ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದೆವು. ಭಳೇಶ್ ತಂದೆ ಹಣ ಹೊಂದಿಸಲು ಊರಿಗೆ ಹೋದರು. ಹುಡುಗನನ್ನು ನೋಡಿಕೊಳ್ಳಲು ಆತನ ತಾಯಿ ಆಸ್ಪತ್ರೆಯಲ್ಲೇ ಉಳಿದರು.
 
ಆ 77 ದಿನಗಳಲ್ಲಿ ಪ್ರತಿದಿನವೂ ನಮಗೆ ಸವಾಲಾಗಿತ್ತು. ಆತನ ಆರೋಗ್ಯದಲ್ಲಿ ಅತ್ಯಲ್ಪ ಪ್ರಮಾಣದ ಸುಧಾರಣೆ ಕಂಡರೂ, ನಂತರದ ದಿನಗಳಲ್ಲಿ ಅದು ವಿಕೋಪಕ್ಕೆ ತಿರುಗುತ್ತಿತ್ತು. ಒಬ್ಬಂಟಿ ತಾಯಿ ನಮ್ಮಂದಿಗೆ ಪ್ರತಿನಿತ್ಯವೂ ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದರು.
ಆ ದಿನಗಳಲ್ಲಿ, `ಭಳೇಶ್ ಹೇಗಿದ್ದಾನೆ?~ ಎಂಬ ವಿಚಾರಣೆಯೊಂದಿಗೆ ನನ್ನ ದಿನ ಶುರುವಾಗುತ್ತಿತ್ತು.

ಅದೇ ಸಮಯದಲ್ಲಿ ನನ್ನ ಮೇಲೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಶಿಷ್ಯ ಡಾ. ಶಿವಣ್ಣನಿಂದ ಉಪದೇಶವನ್ನೂ ಕೇಳುತ್ತಿದ್ದೆ. ಜಿ.ಬಿ. ಸಿಂಡ್ರೋಮ್ ರೋಗಿಗಳಲ್ಲಿ ಸಾವು ಅತ್ಯಂತ ನಿರೀಕ್ಷಿತ ಘಟನೆ. ಅಧ್ಯಾತ್ಮದ ನೆಲೆಯಿಂದ ಬಂದ ಅವರು ಕರ್ಮ ಸಿದ್ಧಾಂತದ ಬಗ್ಗೆ ನನ್ನ ಬಳಿ ಮಾತನಾಡುತ್ತಿದ್ದರು.

ಒಮ್ಮೆಯಂತೂ `ಈ ಬಡ ರೋಗಿಗಳ, ಅದರಲ್ಲೂ ಇನ್ನೇನು ಸಾಯುವ ಸ್ಥಿತಿಯಲ್ಲಿರುವವರ ಮೇಲೆ ನಿಮಗೇಕೆ ಇಷ್ಟು ಮಮತೆ ಎಂಬುದು ನನಗೆ ಅರ್ಥವಾಗುತ್ತಿಲ್ಲ~ ಎನ್ನುವ ಮಟ್ಟಕ್ಕೂ ಹೋಗಿದ್ದರು.

ನಾನೇಕೆ ಈ ವೃತ್ತಿ ಆಯ್ದುಕೊಂಡೆ? ತಮ್ಮದಲ್ಲದ ತಪ್ಪಿಗೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದ ಅಮಾಯಕ ಮಕ್ಕಳ ಪ್ರಾಣಕ್ಕಾಗಿ ಯಾವಾಗಲೂ ಬೇಡಿಕೊಳ್ಳುವುದೇ ಆಯಿತಲ್ಲ ಎಂದು ಅನ್ನಿಸಿದ ದಿನಗಳೂ ಇವೆ.

ನನ್ನ ವೃತ್ತಿಬಾಂಧವರ ಸಹಾಯ ಪಡೆದು ಭಳೇಶನನ್ನು ಉಳಿಸಲು ಪ್ರತಿನಿತ್ಯವೂ ನನ್ನ ಶಕ್ತಿ, ಕೌಶಲ್ಯ, ಜ್ಞಾನವನ್ನೆಲ್ಲಾ ವ್ಯಯಿಸುತ್ತಿದ್ದೆ. ಈ ಸಂದರ್ಭದಲ್ಲಿ ನನಗೆ ನಿರಂತರವಾಗಿ ಸಹಾಯ ನೀಡಿದವರಲ್ಲಿ ಐಜಿಐಸಿಎಚ್‌ನ ಡಾ. ಬಸವರಾಜ್ ಒಬ್ಬರು. `ಮೇಡಂ, ಇದೊಂದು ಆಸೆ ಕಳೆದುಕೊಂಡಿರುವ ಜಿಬಿ ಸಿಂಡ್ರೋಮ್‌ನ ಪ್ರಕರಣ. ಆದರೆ ನಾವು ನಮ್ಮ ಪ್ರಯತ್ನ ಮಾಡೋಣ~ ಎಂದರು.

`ಇಮ್ಯುನೊಗ್ಲೊಬುಲಿನ್ಸ್~ ಎಂಬ ಅತಿ ವೆಚ್ಚದಾಯಕ ಔಷಧ ಮತ್ತು ಜೀವ ರಕ್ಷಕವನ್ನು 48 ಗಂಟೆಗಳ ಒಳಗೆ ನೀಡಿದ್ದಲ್ಲಿ ಮಾತ್ರ ಆ ಮಗು ಬದುಕಲು ಸಾಧ್ಯವಿತ್ತು. ಆದರೆ ಆತ ಇಲ್ಲಿಗೆ ದಾಖಲಾದಾಗ ಕಾಯಿಲೆ ಶುರುವಾಗಿ 13 ದಿನಗಳಾಗಿತ್ತು.
 

ಹೀಗಾಗಿ ನಾನು ನನ್ನ ಮುಂದಿರುವ ಆಯ್ಕೆಯಾದ ಘನೀಕರಿಸಿದ ತಾಜಾ ದುಗ್ಧರಸ (ಎಫ್‌ಎಫ್‌ಪಿ- ರಕ್ತದಿಂದ ಪಡೆದುಕೊಂಡಿದ್ದು) ಬಳಸಲು ತೀರ್ಮಾನಿಸಿದೆ. ಅದರ ಪ್ರತಿ ಘಟಕಕ್ಕೂ 300 ರೂ. ತಗಲುತ್ತಿತ್ತು. ರಾಷ್ಟ್ರೋತ್ಥಾನ ರಕ್ತ ನಿಧಿ ಅದನ್ನು ನಮಗೆ ರಿಯಾಯಿತಿ ದರದಲ್ಲಿ ನೀಡಿತು. ಆತನಿಗೆ 10 ಪೈಂಟ್‌ಗೂ ಅಧಿಕ ಎಫ್‌ಎಫ್‌ಪಿ ನೀಡಿದೆವು.

ಹಣದ ಕೊರತೆ ಎದುರಾದಾಗಲೆಲ್ಲಾ ನನ್ನ ವಿಭಾಗದವರೆಲ್ಲರೂ `ಚಂದಾ ತತ್ವ~ ಪಾಲಿಸುತ್ತಿದ್ದೆವು. ನನ್ನಿಂದ ಶುರುವಾಗಿ ನಮ್ಮ ವಿಭಾಗದಲ್ಲಿ ದಾಖಲಾದ ರೋಗಿಗಳ ಕಡೆಯವರೂ ಸೇರಿ ಎಲ್ಲರೂ ತಮ್ಮ  ಕಾಣಿಕೆ ಸಲ್ಲಿಸುತ್ತಿದ್ದರು. ಆದಾಯದ ಮೂಲ ಕಡಿಮೆ ಇದ್ದರೂ ಲಕ್ಷ್ಮೀದೇವಿ ಸಹ ಚಂದಾ ಹಣ ನೀಡಿದ್ದಳು.

ಭಳೇಶ್‌ಗೆ ಸುಮಾರು 45 ದಿನ ಕೃತಕ ಉಸಿರಾಟ ನೀಡಲಾಗಿತ್ತು. ಮಲಗಿದಲ್ಲಿಂದ ಚಲಿಸಲು ಆಗದಿದ್ದ ಆತನ ಬಳಿ ನಮ್ಮ ಅರಿವಳಿಕೆ ವಿಭಾಗದ ಸಹೋದ್ಯೋಗಿಗಳು ಸ್ವತಃ ಹೋಗುತ್ತಿದ್ದರು. 14 ದಿನ ನಿರಂತರವಾಗಿ ಹಾಸಿಗೆ ಮೇಲೆ ಕಳೆದಿದ್ದ ಭಳೇಶ್‌ನಲ್ಲಿ ಹಾಸಿಗೆ ಹುಣ್ಣು ಉಂಟಾಯಿತು. ಬಳಿಕ ಆತನನ್ನು ವಾಟರ್‌ಬೆಡ್‌ಗೆ ವರ್ಗಾಯಿಸಲಾಯಿತು.

ಅದು 2011ರ ಫೆಬ್ರುವರಿ 4. ಡಾ. ಶಿವಣ್ಣ ನನ್ನ ಕೊಠಡಿಗೆ ಬಂದರು. `ಸಾವಿನಿಂದ ತಪ್ಪಿಸಿಕೊಳ್ಳಲಾಗದು. ಅದು ಹೇಳದೆ ಕೇಳದೆ ಎರಗುತ್ತದೆ. ನಾವೆಲ್ಲಾ (ವೈದ್ಯರು) ಕೇವಲ ಮನುಷ್ಯರೇ ಹೊರತು ದೇವರುಗಳಲ್ಲ~ ಎಂದರು. ಏನೋ ತಪ್ಪಾಗಿದೆ ಎಂಬುದು ಕೂಡಲೇ ನನ್ನ ಗ್ರಹಿಕೆಗೆ ಬಂದಿತು.

ಭಳೇಶ್ ಆರೋಗ್ಯ ತೀರಾ ವಿಷಮಿಸಿದೆ ಎಂದವರು ನನಗೆ ನಿಧಾನವಾಗಿ ಹೇಳಿದರು. 10ನೇ ದಿನ ವೆಂಟಿಲೇಟರ್‌ನಲ್ಲಿ ಇದ್ದ ಭಳೇಶ್‌ನ ನೈಸರ್ಗಿಕ ಶ್ವಾಸಕೋಶಕ್ಕೆ ಜೋಡಿಸಲಾಗಿದ್ದ ಕೃತಕ ಯಂತ್ರದ ಕೊಳವೆ ಕಟ್ಟಿಕೊಂಡಿತ್ತು. ಶ್ವಾಸಕೋಶ ಮತ್ತು ಕೊಳವೆ ನಿರಂತರವಾಗಿ ತೇವಗೊಳ್ಳುತ್ತಿರಬೇಕು.
 
ಆದರೆ ಶ್ವಾಸಕೋಶದ ಕೃತಕ ಯಂತ್ರದ ಸ್ರವಿಕೆ ಒಣಗಿ ಸತತವಾಗಿ ಕಟ್ಟಿಕೊಳ್ಳುತ್ತಿತ್ತು. ಇದರಿಂದ ಮುಂದೆ ಯಾವಾಗ ಏನಾಗುವುದೆಂದು ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಈ ರೀತಿ ಸಂಭವಿಸಿದ ಕೂಡಲೇ ಆ ತಡೆಯನ್ನು ತೆಗೆದು ಹಾಕದಿದ್ದರೆ, ರೋಗಿ ಕೊನೆಯುಸಿರೆಳೆಯವುದು ನಿಶ್ವಿತ.

ಆ ದಿನ ಭಳೇಶ್ ಮತ್ತು ಆತನ ತಾಯಿ ಜೊತೆ ಕುಳಿತುಕೊಂಡಿದ್ದೆ. ಕಟ್ಟಿಕೊಳ್ಳುವ ಕೊಳವೆಯನ್ನು 24/7 ಅವಧಿಯೂ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುವುದು ಅಗತ್ಯವಾಗಿತ್ತು. ಆದರೆ ನಿರಂತರ ಕಾರ್ಯ ತತ್ಪರವಾಗಿರುವ ತುರ್ತು ಚಿಕಿತ್ಸಾ ಘಟಕದಲ್ಲಿ ಇದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿತ್ತು.

ಹೀಗಾಗಿ ಭಳೇಶ್‌ನ ತಾಯಿಗೆ ಅದರ ನಿರ್ವಹಣೆಗೆ ತರಬೇತಿ ಕೊಡಲು ನಿರ್ಧರಿಸಿದೆ. ನಾನು ಪ್ರತಿ ಬಾರಿಯೂ ಭಳೇಶ್‌ನ ಕಣ್ಣುಗಳನ್ನು ನೋಡಿದಾಗ ತನ್ನನ್ನು ಉಳಿಸುವಂತೆ ಬೇಡಿಕೊಳ್ಳುವ ದೈನ್ಯತೆ ಅವುಗಳಲ್ಲಿ ಕಾಣುತ್ತಿತ್ತು. ಭಳೇಶ್‌ನಿಂದಾಗಿ ನಾನು `ಕಣ್ಣುಗಳ ಭಾಷೆ~ಯನ್ನು ಕಲಿತುಕೊಂಡೆ.

ಮತ್ತೊಂದು ಸಮಸ್ಯೆ ಶುರುವಾಯಿತು. ವೆಂಟಿಲೇಟರ್ ಬಳಕೆಯಿಂದ ನ್ಯುಮೋನಿಯಾ ಆತನಿಗೆ ತಗುಲಿತ್ತು. ಚಿಕಿತ್ಸೆ ವೇಳೆಯಲ್ಲಿ ಎದುರಾಗುವ ಅತ್ಯಂತ ಅಪಾಯಕಾರಿ ಲಕ್ಷಣ ಮತ್ತು ಚಿಕಿತ್ಸೆ ನೀಡಲು ತೊಡಕಾಗುವ ಸಮಸ್ಯೆಯದು. ಅತ್ಯಧಿಕ ಜೀವರಕ್ಷಕಗಳನ್ನು (ಆಂಟಿಬಯಾಟಿಕ್) ನೀಡಬೇಕಾಗಿತ್ತು. ಇದರಿಂದ ವೆಚ್ಚ ಏರುತ್ತಿತ್ತು. ನಾವು ಇನ್ನೊಂದು ಸುತ್ತು ಚಂದಾ ಎತ್ತಿದೆವು.

ಮಾರಕ ಸೋಂಕಿನಿಂದ ನಾವು ಆತನನ್ನು ಹೊರಗೆ ತರುತ್ತಿರುವಾಗಲೇ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ದೀಪ್ತಿ, `ಭಳೇಶ್ ಹೃದ್ರೋಗ ಕಾಯಿಲೆಯಿಂದ ನರಳುತ್ತಿದ್ದನು~ ಎಂದು ತಿಳಿಸಿದರು. ಆದರೆ ದೀಪ್ತಿಯ ಪರಿಶ್ರಮದಿಂದ ಆತ ವೇಗವಾಗಿ ಚೇತರಿಸಿಕೊಂಡಿದ್ದ. ಪುಟ್ಟ ಚೆಲುವೆ ದೀಪ್ತಿಯ ನಗುಮುಖ ಭಳೇಶ್‌ಗೆ ಅಚ್ಚುಮೆಚ್ಚು.

ಒಮ್ಮೆ ದೀಪ್ತಿಯ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಆಕೆಗೆ ನೈತಿಕ ಸ್ಥೈರ್ಯ ತುಂಬಲು- `ನೀವು ನಿಮ್ಮ ಸೇವಾ ಬದ್ಧತೆಯಿಂದ ಹಲವಾರು ಮಕ್ಕಳನ್ನು ಸಾವಿನ ದವಡೆಯಿಂದ ರಕ್ಷಿಸಿದ್ದೀರಿ. ದೇವರು ನಿಮ್ಮ ತಂದೆಗೆ ಖಂಡಿತಾ ನೆರವಾಗುತ್ತಾನೆ~ ಎಂದಿದ್ದೆ. ಹಾಗೆಯೇ ನಡೆಯಿತು.

ಲಕ್ಷ್ಮೀದೇವಿ ತನ್ನ ಮಗ ಬದುಕುಳಿಯುವುದರ ಬಗ್ಗೆ ನಂಬಿಕೆ ಕಳೆದುಕೊಳ್ಳತೊಡಗಿದರು. ಬದುಕಿದ್ದಾಗಲೇ ಊರಿಗೆ ಕರೆದೊಯ್ಯಲು ಆತನನ್ನು ಯಂತ್ರದಿಂದ ಹೊರತೆಗೆಯುವಂತೆ ಮನವಿ ಮಾಡಿದರು.

ನಮಗೂ ಚಿಕಿತ್ಸೆ ನೀಡುವುದು ತುಂಬಾ ಕಷ್ಟವಾಗಿತ್ತು- ನಾವು ಕೇವಲ ವೈದ್ಯರು. ಇದೊಂದು ಮಾರಣಾಂತಿಕ ಕಾಯಿಲೆ ಎಂಬುದೂ ಗೊತ್ತಿತ್ತು. ಮತ್ತೆ ಭಳೇಶ್ ತನ್ನ ಕಣ್ಣುಗಳಲ್ಲಿ ಮಾತನಾಡಿದ. `ನನ್ನನ್ನು ಯಂತ್ರದಿಂದ ಬೇರ್ಪಡಿಸಬೇಡಿ. ನಾನು ಬದುಕಬೇಕು~ ಎಂಬಂತೆ ಅದು ನನಗೆ ಕಂಡಿತು.

ಇಎನ್‌ಟಿ ಪ್ರೊಫೆಸರ್ ಡಾ. ವಿಶ್ವನಾಥ್ ಮತ್ತವರ ತಂಡ ನಮ್ಮ ಸಹಾಯಕ್ಕೆ ಧಾವಿಸಿತು. ಶ್ವಾಸಕೋಶ ಆಮ್ಲಜನಕವನ್ನು ಪಡೆದುಕೊಳ್ಳುತ್ತಿದೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಲು ಅವರು ಶ್ವಾಸನಾಳಚ್ಛೇದನ(ಟ್ರಾಕಿಆಸ್ಟಮಿ)ಕ್ಕಾಗಿ ಕುತ್ತಿಗೆ ಬಳಿ ಕುಯ್ದು ಪರೀಕ್ಷೆ ಮಾಡಿದರು.

ಆತಂಕಗಳ ನಡುವೆ, ಕಚೇರಿ ಕೆಲಸದ ನಿಮಿತ್ತ ಸಹೋದ್ಯೋಗಿಗಳ ಆರೈಕೆಗೆ ಭಳೇಶ್‌ನನ್ನು ಒಪ್ಪಿಸಿ ಗುಲ್ಬರ್ಗಾ ಪ್ರವಾಸಕ್ಕೆ ಹೊರಟೆ. ಈಗ ಭಳೇಶ್ ಅಸ್ಪಷ್ಟವಾಗಿ ಮಾತನಾಡಲು ಪ್ರಾರಂಭಿಸಿದ್ದ. ಆತನ ತಾಯಿ ಕುತ್ತಿಗೆಯ ರಂಧ್ರವನ್ನು ಮುಚ್ಚಿ ಮಾತನಾಡಲು ಸಹಾಯ ಮಾಡುತ್ತಿದ್ದರು.

ಭಳೇಶ್ ಗುಲ್ಬರ್ಗಾದವನು. ಅಲ್ಲಿಂದ ಹೊರಡುವಾಗ ಒಂದು ಪೆಟ್ಟಿಗೆ ತುಂಬಾ ಜೋಳದ ರೊಟ್ಟಿ ಮತ್ತು ಚಟ್ನಿಯನ್ನು ತಂದೆ. ಆತ ಬದುಕುಳಿದಿರುತ್ತಾನೆ ಎಂಬ ನಂಬಿಕೆ ನನಗಿತ್ತು. ವಾಪಸು ಬಂದಾಗ ನಾನು ಪಿಐಸಿಯು (ಮಕ್ಕಳ ತುರ್ತು ಚಿಕಿತ್ಸಾ ಘಟಕ) ಒಳಗೆ ಪ್ರವೇಶಿಸಿದೆ. ಅಲ್ಲಿ ಯಾರೂ ಕಾಣಿಸಲಿಲ್ಲ.
 
ನನ್ನ ಹೃದಯ ಬಡಿತ ಒಂದುಕ್ಷಣ ತಪ್ಪಿದಂತಾಯಿತು. ರಿಕವರಿ ಕ್ಯಾಬಿನ್‌ನಲ್ಲಿ `ಎಬಿ~ ಮೇಡಂರನ್ನು ನಗುಮೊಗದಿಂದ ಎದುರಾದ ಭಳೇಶನನ್ನು ಕಾಣುವವರೆಗೂ ನಾನು ದಂಗುಬಡಿದಿದ್ದೆ. ದೇವರಿಗೆ ನೂರಾರು ಪ್ರಾರ್ಥನೆ ಸಲ್ಲಿಸಿದ್ದೆ!

ಭಳೇಶ್‌ಗೆ ತನ್ನ ಜಿಲ್ಲೆಯ ರೊಟ್ಟಿಯ ರುಚಿ ಹಿಡಿಸಿದ್ದು ಮಾತ್ರವಲ್ಲ, ಅದರೊಂದಿಗೆ ಸವಿಯಲು ಎಣ್ಣೆಗಾಯಿ ಪಲ್ಯ ಮಾಡುವಂತೆಯೂ ಮಾಡಿದನು. ತನ್ನೆಲ್ಲಾ ರೋಗದ ದಿನಗಳಲ್ಲಿಯೂ ಭಳೇಶ್ ಮನಸು ಜಾಗೃತವಾಗಿಯೇ ಇರುತ್ತಿತ್ತು. ಪಿಐಸಿಯುನಲ್ಲಿನ ವೈದ್ಯರು ಮತ್ತು ನರ್ಸ್‌ಗಳ ಬಗ್ಗೆ ಹೇಳಲು ಆತನಲ್ಲಿ ಹಲವಾರು ಕಥೆಗಳಿದ್ದವು. ಕೆಲವರು ಆತ ತಮ್ಮ ಬಗ್ಗೆ ಏನಾನ್ನಾದರೂ ಹೇಳುತ್ತಾನೆ ಎಂದು ಹೆದರಿದ್ದರು!

ನಾವೆಲ್ಲರೂ ಆತನನ್ನು ಪ್ರೀತಿಯಿಂದ ನೋಡಿಕೊಂಡಿದ್ದೆವು. ಆತ ಪಿಐಸಿಯುನಲ್ಲಿದ್ದಾಗ `ಶುಭ ಹಾರೈಕೆ ನಿಧಿ~ ಮೂಲಕ ಎಂಪಿ3 ಪ್ಲೇಯರ್ ತಂದು ಕೊಟ್ಟೆವು. ಆತ ತನ್ನ ನೆಚ್ಚಿನ ಪುನೀತ್ ರಾಜ್‌ಕುಮಾರ್‌ರ `ಜಾಕಿ~ ಚಿತ್ರದ ಹಾಡನ್ನು ಇಷ್ಟಪಟ್ಟು ಕೇಳುತ್ತಿದ್ದ.

ಆತನ ಚಿಕಿತ್ಸೆಗೆ ಹಲವು ಜನ ನೆರವು ನೀಡಿದ್ದರು. ಆದರೆ, ಆತನ ತಾಯಿಯ ಮಮತೆ ಎಲ್ಲಕ್ಕೂ ದೊಡ್ಡದು. ತಾಯ್ತನದ ಹೃದಯಕ್ಕೆ ಅವರೊಂದು ಪುರಾವೆ- ಆಕೆಗೆ ನನ್ನ ದೊಡ್ಡ ನಮನ! ಅವರು 24/77 ಎಚ್ಚರವಾಗಿಯೇ ಇದ್ದರು. ತಾಯಿ ಮಾತ್ರವಲ್ಲದೆ, ಬೇರೆ ಯಾವುದೇ ಮನುಷ್ಯ ಜೀವ ಅಥವಾ ಯಂತ್ರ ತಾನೇ ನಿದ್ರಾಹಾರ ತ್ಯಜಿಸಿ ಈ ರೀತಿಯ ಅದ್ಭುತ ಚಮತ್ಕಾರ ಮಾಡಲು ಸಾಧ್ಯ?

ಭಳೇಶನ ಸ್ನಾಯುಗಳ ಚೇತರಿಕೆಗಾಗಿ ಅತಿಸೂಕ್ಷ್ಮ ಕೆಲಸವನ್ನು ನಿರ್ವಹಿಸಿದ ಡಾ.ಸುಕನ್ಯಾ ಅವರಿಗೆ ಈ ಬರಹದಲ್ಲಿ ನಾನು ಜಾಗ ಕೊಡಲೇ ಬೇಕು.

77 ದಿನಗಳ ಬಳಿಕ ಭಳೇಶ್ ತಾಯಿಯೊಂದಿಗೆ ನಗೆ ಬೀರುತ್ತಾ ತನ್ನೂರಿನತ್ತ ಪ್ರಯಾಣ ಬೆಳೆಸಿದ. ಡಾ. ಬಸವರಾಜ್, ಡಾ. ವಿಶ್ವನಾಥ್ ಮತ್ತು ಅವರ ತಂಡ ಹಾಗೂ ಮೇಲ್ವಿಚಾರಕರಿಗೆ ಮೈಸೂರು ಪಾಕ್ ತಂದು ಹಂಚಿ ಧನ್ಯವಾದ ಸಲ್ಲಿಸುವ ಕೆಲಸವನ್ನು ಡಾ.ಶಿವಣ್ಣನಿಗೆ ಒಪ್ಪಿಸಲಾಗಿತ್ತು. ಅದರ ಬಿಲ್ಲನ್ನು ನೀಡುವ ಹೊಣೆಯೂ ಅವರದೇ!

ಇದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದ ನಮ್ಮ ಆಸ್ಪತ್ರೆಯ ನರ್ಸ್ ನಿರ್ಮಲಾಳ ಮಗಳು ನಿಹಾರಿಕಾಳನ್ನು ವಿಶೇಷ ತಜ್ಞರ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದರೂ ಉಳಿಸಿಕೊಳ್ಳಲಾಗಲಿಲ್ಲ. ಆಕೆಯ ಸಾವು ನನ್ನ ಹೃದಯವನ್ನು ಕಲಕಿತು.

ನನ್ನ ನೆರೆಯ ಮಿಸ್ ಉಮಾದೇವಿ ಇದೇ ರೀತಿಯ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹಲವು ತಿಂಗಳಕಾಲ ದಾಖಲಾಗಿದ್ದರು. 450 ದಿನಗಳಾದರೂ ಅವರು ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ, ಆಸ್ಪತ್ರೆ ಬಿಲ್ಲು ಲಕ್ಷ ರೂಪಾಯಿಗಳಂತೆ ಓಡುತ್ತಿದೆ. ಆಕೆಯ ಪತಿ ಆರಾಧ್ಯ ಪ್ರಾಮಾಣಿಕತೆ, ಬದ್ಧತೆ ಮತ್ತು ತಾಳ್ಮೆಯಿಂದ ಅವರನ್ನು ಶುಶ್ರೂಷೆ ಮಾಡುತ್ತಿದ್ದಾರೆ. ಬಹುಶಃ ಮಕ್ಕಳು ಶೀಘ್ರ ಗುಣಮುಖರಾಗುತ್ತಾರೆ. ಏಕೆಂದರೆ ಅವರು ದೇವರ ಮಕ್ಕಳು!

ಈ ಲೇಖನ ಬರೆದು ಮುಗಿಸುತ್ತಿದ್ದಂತೆ ಚಿಕ್ಕಬಳ್ಳಾಪುರದ ಎಂಟು ವರ್ಷದ ಪ್ರವೀಣ್ ಇದೇ ಜಿಬಿಎಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈಗ ಸವಾಲುಗಳು ಮತ್ತೆ ತೆರೆದುಕೊಳ್ಳುತ್ತಿವೆ. ಈ ಬಾರಿ ನಿಮ್ಮೆಲ್ಲರ ಪ್ರಾರ್ಥನೆಗಳು ಆ ಹುಡುಗನ ಜೊತೆಗಿರಲಿ. ಬದುಕು ಆತನಿಗೆ ದಕ್ಕಲಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT