ADVERTISEMENT

ನಿವೃತ್ತ ಸೇನಾ ಮುಖ್ಯಸ್ಥರ ‘ನಡೆ ನುಡಿ’

ಕುಲದೀಪ ನಯ್ಯರ್
Published 1 ಅಕ್ಟೋಬರ್ 2013, 19:30 IST
Last Updated 1 ಅಕ್ಟೋಬರ್ 2013, 19:30 IST
ನಿವೃತ್ತ ಸೇನಾ ಮುಖ್ಯಸ್ಥರ ‘ನಡೆ ನುಡಿ’
ನಿವೃತ್ತ ಸೇನಾ ಮುಖ್ಯಸ್ಥರ ‘ನಡೆ ನುಡಿ’   

ಭಾರತ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರದ ಹಿಂದೆ ಸೇನೆಯ ಹಸ್ತಕ್ಷೇಪ ಇರುವ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪಾಕಿಸ್ತಾನದಿಂದ ಕೆಲವು ದೂರವಾಣಿ ಕರೆಗಳು ನನಗೆ ಬಂದಿವೆ. ಆ ಕರೆಗಳೆಲ್ಲಾ ಅಲ್ಲಿನ ಮಾಧ್ಯಮ ಪ್ರತಿನಿಧಿಗಳದ್ದೇ ಆಗಿವೆ. ಅವರ ಆತಂಕ ನನಗೆ ಅರ್ಥವಾಗುತ್ತದೆ. ಪಾಕ್‌­ನಲ್ಲಿ ಚುನಾಯಿತ ಸರ್ಕಾರವಿದ್ದು, ಪ್ರಧಾನಿ ನವಾಜ್ ಷರೀಫ್ ಅವರೇ ಸರ್ಕಾರದ ಮುಖ್ಯಸ್ಥ-­ರಾಗಿದ್ದರೂ ತೆರೆಯ ಮರೆಯಲ್ಲಿ ಸೇನೆಯ ಮಾತಿಗೇ ಹೆಚ್ಚು ಮನ್ನಣೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ  ಸುಧಾರಣೆಗೆ ಸಂಬಂಧಿಸಿದ ಮಾತುಕತೆಯ ಕಾರ್ಯಸೂಚಿ ಹೇಗಿರಬೇಕೆಂಬ ಬಗ್ಗೆ ಸರ್ಕಾರ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಕಯಾನಿ ಅವರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದು ಅಲ್ಲಿನ ವಾಸ್ತವ.
ಪಾಕ್‌ನಿಂದ ಕರೆ ಮಾಡಿದ ಮಾಧ್ಯಮದ ಪರಿಚಿತ ಮಂದಿಗೆ ‘ನಮ್ಮಲ್ಲಿ ಮತದಾರರ ಮಾತಿಗೇ ಮೊದಲ ಮನ್ನಣೆ’ ಎಂದು ಹೆಮ್ಮೆ­ಯಿಂದಲೇ ಹೇಳಿದ್ದೇನೆ.  ಪಶ್ಚಿಮದ ಬಹಳಷ್ಟು ದೇಶಗಳಲ್ಲಿಯೂ ಭಾರತದಂತೆಯೇ ಪ್ರಜಾಸತ್ತೆಯೇ ಪ್ರಮುಖ ಶಕ್ತಿ ಎಂದಿದ್ದೇನೆ.

ಆದರೂ ನಮ್ಮಲ್ಲಿ ಸೇನೆಗೆ ವಿಶೇಷಾಧಿಕಾರ ಕಾಯ್ದೆ­ಯೊಂದಿರುವುದನ್ನೂ ನಾನು ಅಲ್ಲಗಳೆ­ಯುತ್ತಿಲ್ಲ. ತನಗೆ ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಯ ಮೇಲೆ ಸೇನೆ ಗುಂಡು ಹಾರಿಸುವ ಅಥವಾ ಕೊಂದು ಹಾಕುವ ಅಧಿಕಾರ ಈ ಕಾಯ್ದೆಯಲ್ಲಿದೆ. ಅಂತಹ ಸಂದರ್ಭದಲ್ಲಿ ಅಂತಹ ವ್ಯಕ್ತಿಯನ್ನು ಯಾವುದೇ ವಿಚಾರಣೆ ನಡೆ­ಸದೆಯೇ, ಇಂತಹ ತಪ್ಪು ಎಂಬುದನ್ನು ಸಾಬೀತು ಪಡಿಸದೆಯೇ ಸೇನೆ ಇಂತಹ ಕ್ರಮ ಕೈಗೊಳ್ಳ­ಬಹುದಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಆಯೋಗವೊಂದರ ವರದಿಯ ಶಿಫಾರಸುಗಳನ್ನು ಪರಿಗಣಿಸಿ ತಿದ್ದುಪಡಿ ತರುವ ಆಲೋಚನೆಯೂ ಸರ್ಕಾರಕ್ಕಿದೆ ಎನ್ನುವುದೂ ನಿಜ.

ಇದೊಂದು ಸಂಗತಿಯನ್ನು ಹೊರತುಪಡಿ-­­ಸಿ­ದರೆ, ಭಾರತದ ಸೇನೆ ಇಲ್ಲಿನ ಚುನಾಯಿತ ಸರ್ಕಾರಕ್ಕೆ ಅತ್ಯಂತ ವಿಧೇಯವಾಗಿಯೇ ಇದೆ ಎನ್ನುವುದನ್ನು ನಾನು ಕಂಡು ಕೊಂಡಿದ್ದೇನೆ. ಇನ್ನು ಸೇನೆಯ ಕ್ಯಾಂಟಿನ್‌ಗಳಲ್ಲಿ ಅಥವಾ ಊಟದ ಕೊಠಡಿಗಳಲ್ಲಿ ದೇಶದ ಪ್ರಸಕ್ತ ಆಗುಹೋಗುಗಳ ಬಗ್ಗೆ ಮಾತುಗಳು ಇದ್ದೇ ಇರುತ್ತವೆ ಎನ್ನುವುದು ನನಗೆ ಗೊತ್ತು. ಅವು ಆರೋಗ್ಯಪೂರ್ಣ ಚರ್ಚೆ ಎನ್ನುವುದೂ ನಿಜ.
ಕೆಲವು ಸೇನಾಧಿಕಾರಿಗಳು ತಮ್ಮ ನಿಲುವನ್ನು ಧ್ವನಿ ಎತ್ತಿ ಹೇಳಿದ ಬಗ್ಗೆ ನನಗೆ ಗೊತ್ತಿದೆ. ತಾವು ನಂಬಿದ್ದ ವಿಚಾರಗಳಿಗೆ ಅವರು ಬದ್ಧತೆ ಹೊಂದಿ­ದ್ದರು. ಆದರೆ ಎಂದೂ ಸಂವಿಧಾನ ಅಥವಾ ಸೇನೆಯ ನಿಯಮಗಳ ಮಿತಿಯನ್ನು ಮೀರಿ ಅವರು ಹೆಜ್ಜೆ ಇಟ್ಟಿರಲಿಲ್ಲ.

ADVERTISEMENT

ಯಾವುದೇ ತೆರನಾದ ಕಾನೂನು ಉಲ್ಲಂಘನೆ ಆಗಿರಲಿಲ್ಲ. ಹಿಂದೆ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರು ಜನಪ್ರಿಯ ಜನರಲ್‌ ಆಗಿದ್ದರು. ಒಂದು ಹಂತದಲ್ಲಿ ಅವರು ಆಗಿನ ರಕ್ಷಣಾ ಸಚಿವ ಕೃಷ್ಣ ಮೆನನ್‌ ಅವರ ಕಾರ್ಯವೈಖರಿ ಮತ್ತು ನಿರ್ಧಾರಗಳ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದರು. ಕೊನೆಗೆ ತಿಮ್ಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದರು.

ಅಂತಹ ಸಂದಿಗ್ಧ ಸಂದರ್ಭದಲ್ಲಿ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಮಧ್ಯಪ್ರವೇಶ ಮಾಡಿದ್ದರು. ತಿಮ್ಮಯ್ಯ ಅವರು ರಾಜೀನಾಮೆಯನ್ನು ವಾಪಸು ಪಡೆಯುವಂತೆ ಮನವೊಲಿಸುವಲ್ಲಿ ನೆಹರೂ ಯಶಸ್ವಿ­ಯಾಗಿ­ದ್ದರು. ಕೊನೆಗೆ ತಿಮ್ಮಯ್ಯ ತಮ್ಮ ಅಧಿಕಾರಾವಧಿ ಪೂರೈಸಿ ನಿವೃತ್ತರಾದರೆ, ಕೃಷ್ಣ ಮೆನನ್‌ ಅವರೂ ರಕ್ಷಣಾ ಮಂತ್ರಿಯಾಗಿ ಮುಂದುವರಿದಿದ್ದರು. ಇನ್ನೊಮ್ಮೆ ಜನರಲ್‌ ಕೆ.ಸುಂದರ್‌ಜಿ ಅವರು ತಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಘಟನೆ ನಡೆದಿತ್ತು. ಭಾರತದ ಗಡಿಯಾಚೆಗಿರುವ ಪಾಕಿಸ್ತಾನ ಮತ್ತು ಚೀನಾದ ವಿವಾದಾತ್ಮಕ ಪ್ರದೇಶಕ್ಕೆ ಸುಂದರ್‌ಜಿ  ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆಗ ಪಾಕಿಸ್ತಾನ ಸರ್ಕಾರ ವಿಚಲಿತ­ಗೊಂಡಿತ್ತು. 

ಪಾಕ್‌ ಸರ್ಕಾರ ತನ್ನ ವಿದೇಶಾಂಗ ಕಾರ್ಯದರ್ಶಿ ಅಬ್ದುಲ್‌ ಸತ್ತಾರ್‌ ಅವರನ್ನು ದೆಹಲಿಗೆ ಮಾತುಕತೆಗೆ ಕಳುಹಿಸಿತ್ತು. ಆಗ ಸುಂದರ್‌ಜಿ ಅವರು ವಿವಾದದ ಕೇಂದ್ರಬಿಂದು­ವಾಗಿದ್ದರು, ನಿಜ. ಅದೇನೇ ಇದ್ದರೂ, ಅವರು ತಮ್ಮ ಸೇವಾವಧಿಯನ್ನು ಪೂರ್ಣಗೊಳಿಸಿದರು.
ಬಾಂಗ್ಲಾದೇಶ ಯುದ್ಧದ ನಂತರ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಅವರು ಜನರ ಅಪಾರ ಮೆಚ್ಚುಗೆ ಗಳಿಸಿದ್ದರು. ಆ ದಿನಗಳಲ್ಲಿ ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಸ್ವತಃ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರೇ ಮಾಣೆಕ್‌ ಷಾ ಅವರನ್ನು ಅನುಮಾನದಿಂದ ನೋಡಿದ್ದರು.

ಆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರನ್ನು ಭೇಟಿಯಾಗಿದ್ದ ಮಾಣೆಕ್‌ ಷಾ ಅವರು ‘ಇಂತಹದ್ದೊಂದು ದೊಡ್ಡ ಮತ್ತು ಅತ್ಯುತ್ತಮ ಸೇನೆಯ ಉನ್ನತ ಹುದ್ದೆಯಲ್ಲಿರುವುದು ನನಗೆ ಅತ್ಯಂತ ಹೆಮ್ಮೆ ಎನಿಸಿದೆ. ಯಾವುದೇ ತೆರನಾದ ರಾಜಕಾರಣದ ಜೊತೆಗೆ ಗುರುತಿಸಿಕೊಳ್ಳ­ದಿ­ರುವುದೇ ಈ ಸೇನೆಯ ಬಲುದೊಡ್ಡ ಹೆಗ್ಗಳಿಕೆ­ಯಾಗಿದೆ’ ಎಂದು ಹೇಳಿದ್ದರಂತೆ. ‘ನೋಡಿ, ನಿಮ್ಮ ಕೆಲಸವನ್ನು ನೀವು ಮಾಡಿ. ನನ್ನ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ’ ಎಂದೂ ಅವರು ಇಂದಿರಾ ಗಾಂಧಿಯವರಿಗೆ ಅಂದು ಬಲು ಸ್ಪಷ್ಟವಾಗಿ ಹೇಳಿದ್ದರಂತೆ.

ಆದರೆ ಈಚೆಗಿನ ದಿನಗಳ ಕೆಲವು ಘಟನೆಗಳು ನಿಜಕ್ಕೂ ಮುಜುಗರ ಉಂಟು ಮಾಡುವಂತಿವೆ. ಭಾರತ ಭೂಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿ.ಕೆ.ಸಿಂಗ್‌ ಅವರ ಸುತ್ತಲೂ ಹೆಣೆದುಕೊಂಡಿರುವ ವಿವಾದಗಳು ಮನಸ್ಸಿಗೆ ಖುಷಿ ಕೊಡುವಂತಹದ್ದೇನಲ್ಲ. ಅವರು ಈಚೆಗೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ­ಅವರ ಜತೆಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ರಾಜಕೀಯಕ್ಕೆ ಪ್ರವೇಶಿಸುವ ತುಡಿತವಿದ್ದರೂ ಅವರು ಇನ್ನೂ ಕೆಲವು ಸಮಯ ಕಾಯಬೇಕಿತ್ತು. ನಿವೃತ್ತ ಸೇನಾಧಿಕಾರಿಗಳು ರಾಜಕೀಯಕ್ಕೆ ಸೇರು­ವು­ದರಿಂದ ಯಾರಿಗೂ ತೊಂದರೆ ಏನಿಲ್ಲ.

ಬಲು ದೊಡ್ಡ ಪ್ರಜಾಪ್ರಭುತ್ವ ದೇಶವಾದ ಅಮೆರಿಕ­ದಲ್ಲಿಯೇ ಹಿಂದೆ ಡಗ್ಲಾಸ್‌ ಮೆಕಾರ್ಥರ್‌ ಮತ್ತು ಐಸೆನ್‌ ಹೋವರ್‌ ಅವರಂತಹ ಸೇನಾನಿಗಳೇ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಅವರೆಲ್ಲಾ ಯುದ್ಧಭೂಮಿಯಿಂದ ನೇರವಾಗಿ ಚುನಾವಣಾ ಕಣಕ್ಕೆ ಧುಮುಕಿರಲಿಲ್ಲ. ನಿವೃತ್ತರಾಗಿ ಕೆಲವು ಸಮಯ ಕಳೆದ ಮೇಲೆ ರಾಜಕೀಯ ಪ್ರವೇಶಿಸಿದ್ದರು.

ಇದೀಗ ವಿ.ಕೆ.ಸಿಂಗ್‌ ಅವರ ಮೇಲೆ ಆರೋಪ­ವೊಂದು ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರವನ್ನು ಉರುಳಿಸುವ ದಿಸೆಯಲ್ಲಿ ಹಿಂದೆ ಅವರು ಸಂಚು ನಡೆಸಿದ್ದರೆನ್ನುವ ಆರೋಪ ಕೇಳಿ ಬರುತ್ತಿದೆ. ಇದಕ್ಕಾಗಿ ಅವರು ತಂಡವೊಂದನ್ನು ರಚಿಸಿದ್ದು, ಇಲಾಖೆಯ ‘ಗುಪ್ತನಿಧಿ’ಯಿಂದ ಆ ತಂಡಕ್ಕೆ ಹಣ ನೀಡಿದ್ದರೆಂಬ ಆರೋಪ ಇದೀಗ ಕೇಳಿ ಬರುತ್ತಿದೆ. ಇದಲ್ಲದೇ ಈಚೆಗೆ ಅವರು ಸುದ್ದಿ ವಾಹಿನಿಗಳಿಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಸ್ವಾತಂತ್ರ್ಯಾ ನಂತರ ಕಾಶ್ಮೀರ­ದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿ­ಕೊಳ್ಳುವ ನಿಟ್ಟಿನಲ್ಲಿ ಆ ರಾಜ್ಯದ ಕೆಲವು ಮಂತ್ರಿಗಳಿಗೆ ಸೇನೆ ಹಣ ನೀಡುತ್ತಾ ಬಂದಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಾಶ್ಮೀರ ಸರ್ಕಾರಕ್ಕೆ ಸಂಬಂಧಿಸಿದಂತೆ ವಿ.ಕೆ.­ಸಿಂಗ್‌ ನೀಡಿರುವ ಹೇಳಿಕೆ ಇದೀಗ ದೇಶದಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ. ಅದೊಂದು ಗಂಭೀರ ಆರೋಪವಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಸಬೇಕೆಂದು ಆ ರಾಜ್ಯದ ಆಡಳಿತ ಪಕ್ಷವಾದ ನ್ಯಾಷನಲ್‌ ಕಾನ್ಫೆರೆನ್ಸ್‌ ಆಗ್ರಹಿಸಿದೆ. ಕಾಶ್ಮೀರ ಸರ್ಕಾರದ ಸಚಿವರಿಗೆ ಸೇನೆ ಹಣ ನೀಡುತ್ತಿತ್ತು ಎಂಬುದಾಗಿ ವಿ.ಕೆ.ಸಿಂಗ್‌ ನೀಡಿರುವ ಹೇಳಿಕೆಯಿಂದಾಗಿ ಕೇಂದ್ರ ಸರ್ಕಾರ ಇನ್ನಿಲ್ಲದ ಮುಜುಗರ ಅನುಭವಿಸುವಂತಾಗಿದೆ.

ಇದೀಗ ಹೇಳಿಕೆ­ಯ ನಿಜಾಂಶವೇನು ಎಂಬುದರ ಬಗ್ಗೆ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ    ಹೇಳಿಕೆ ನೀಡ­ಲೇ­ಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರೂ ಇಂತಹದ್ದೊಂದು ಹೇಳಿಕೆಯಿಂದ ತೀವ್ರ ಅಸಮಾಧಾನ­ಗೊಂಡಿ­ದ್ದಾರೆ. ಈ ಬಗ್ಗೆ ತಕ್ಷಣ ಸಿಬಿಐ ತನಿಖೆಗೆ ಆದೇಶ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎನ್ನುವುದು ನಿಜ ತಾನೆ? ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇನೆಯ ತೆರೆಮರೆಯ ಕಪಟ ನಾಟಕಗಳ ಬಗ್ಗೆ ಇನ್ನಷ್ಟು ಸತ್ಯಗಳು ಹೊರ ಬರಲೇಬೇಕಿದೆ.

ಭಾರತದಲ್ಲಿ ಭೂಪಡೆ, ನೌಕಾಪಡೆ ಮತ್ತು ವಾಯು ಪಡೆಗಳ ಮುಖ್ಯಸ್ಥರು ತಮ್ಮ ನಿವೃತ್ತಿಯ ನಂತರ ರಾಜಕೀಯ ಪ್ರವೇಶ ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ನಿವೃತ್ತಿಯ ನಿಯಮ­ಗಳನ್ನು ಬದಲಿಸುವ ಬಗ್ಗೆ ಸೇನೆ ಇನ್ನಷ್ಟೇ ಚಿಂತನೆ ನಡೆಸಬೇಕಿದೆ. ಸೇನಾ ಮುಖ್ಯಸ್ಥರು ಅಂತಹದ್ದೊಂದು ಉನ್ನತ ಹುದ್ದೆಯಲ್ಲಿದ್ದು ಜನರ ಮೇಲೆ ಸಾಕಷ್ಟು ಪ್ರಭಾವ ಬೀರಲು ಸಾಧ್ಯ­ವಿರುತ್ತದೆ. ಅದನ್ನು ಅವರು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಯತ್ನಿಸಿದರೆ, ಅದು ಸೇನೆಯ ಘನತೆಯನ್ನು ಕುಂದಿಸುವಂತಹದ್ದಾಗಿರುತ್ತದೆ.
ವಿ.ಕೆ.ಸಿಂಗ್‌ ಪ್ರಕರಣವನ್ನು ಗಮನಿಸುವು­ದಾದರೆ, ಅವರು ಈಗ ಸೇನೆಯನ್ನು ಪ್ರತಿನಿಧಿ­ಸುವವರು ಅಲ್ಲ ತಾನೆ.

ಅವರೊಬ್ಬ ಸ್ವೇಚಾ್ಛ­ಭಿ­ಪ್ರಾಯ ಹೊಂದಿರುವ ವ್ಯಕ್ತಿ ಅಷ್ಟೇ. ಅವರು ಹಿಂದೆ ಸುಪ್ರೀಂ ಕೋರ್ಟ್‌ನ ತೀರ್ಪನ್ನೇ ಪ್ರಶ್ನಿಸಿ­ದ್ದವರು. ತಮ್ಮ ಜನ್ಮದಿನಾಂಕಕ್ಕೆ ಸಂಬಂಧಿ­ಸಿದಂತೆ ಸರ್ಕಾರದ ಬಳಿ ಇರುವ ಮಾಹಿತಿ ಸರಿಯಲ್ಲ, ಹೀಗಾಗಿ ತಮ್ಮ ಸೇವಾವಧಿಯನ್ನು  ಒಂದು ವರ್ಷ ವಿಸ್ತರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಅದನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು. ಆಗ ವಿ.ಕೆ.­ಸಿಂಗ್‌ ಆ ತೀರ್ಪಿನ ವಿರುದ್ಧವೇ ಕಿಡಿ ಕಾರಿದ್ದರು. 

ವಿ.ಕೆ.ಸಿಂಗ್‌ ಅಪ್ಪಟ ರಾಜಕಾರಣಿಯಂತೆ ವರ್ತಿಸತೊಡಗಿದ್ದಾರೆ. ಅವರ ನಡೆ, ನುಡಿಯಲ್ಲಿ ಅದು ಎದ್ದು ಕಾಣುತ್ತಿದೆ. ಅವರು, ಸೇನೆ ಮತ್ತು ಸರ್ಕಾರದ ನಡುವೆ ಈ ಹಿಂದೆ ನಡೆದಿದ್ದ ವ್ಯವಹಾರಗಳ ಬಗ್ಗೆಯೂ ಈಗ ಮಾತನಾಡು­ತ್ತಿದ್ದಾರೆ. ಇದೆಲ್ಲಾ ನೋಡಿದಾಗ ವಿ.ಕೆ.ಸಿಂಗ್‌ ವ್ಯಕ್ತಿತ್ವವೇ ಅರ್ಥವಾಗುವಂತಹದ್ದಲ್ಲ ಎನಿಸ­ತೊಡಗಿದೆ. ಈಗ ಇಷ್ಟೆಲ್ಲಾ ಮಾತನಾಡುವ ಜನರಲ್‌ ಸಿಂಗ್‌  ತಾವು ಸೇನಾ ಮುಖ್ಯಸ್ಥ­ರಾಗಿದ್ದಾಗ ಸೇನೆಯಿಂದ ಕಾಶ್ಮೀರದ ಸಚಿವರಿಗೆ ಹೋಗುತ್ತಿದ್ದ ಹಣವನ್ನು ತಡೆ ಹಿಡಿಯ­ಬಹುದಿತ್ತಲ್ಲ. ಆದರೆ ಅವರು ಆ ಪ್ರಕ್ರಿಯೆ­ಗಳಿಗೆಲ್ಲಾ ಉತ್ತೇಜನ ನೀಡಿದ್ದರಲ್ಲವೇ?

ಒಮರ್‌ ಅಬ್ದುಲ್ಲಾ ಕಾಶ್ಮೀರದಲ್ಲಿ ತನ್ನದೇ ಆದ ‘ಕಾರ್ಯಸೂಚಿ’ ಹೊಂದಿದ್ದಾರೆ ಎಂದು ವಿ.ಕೆ.ಸಿಂಗ್‌ ಈಚೆಗೆ ಹೇಳಿದ್ದಾರಲ್ಲ, ಅದೇನೆಂದು ಅವರೇ ಬಹಿರಂಗ ಪಡಿಸಬಹುದಲ್ಲ. ಅಂತಹ­ದ್ದೇನಾದರೂ ‘ವಿದ್ರೋಹಿ’ ಚಟುವಟಿಕೆ ಇದ್ದರೆ ಅದನ್ನು ಅವರೇ ತಡೆಯಲು ಸಾಧ್ಯವಿತ್ತಲ್ಲ.
ಹೀಗೆ  ಒಂದರ ಮೇಲೊಂದು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವ ಜನರಲ್‌ ಸಿಂಗ್‌ ಅವರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಬೇಕಾಗಿದೆ. ಇದೀಗ ಅವರು ಒಂದು ದಿನ ಅಣ್ಣಾ ಹಜಾರೆ ಅವರ ಜತೆಗೆ ಹೆಜ್ಜೆ ಹಾಕಿದರೆ, ಇನ್ನೊಂದು ದಿನ ನರೇಂದ್ರ ಮೋದಿಯವರೊಡನೆ ಕಾಣಿಸಿ­ಕೊಂಡಿ­ದ್ದಾರೆ. ಜನರಲ್‌ ಸಿಂಗ್‌ ಬಗ್ಗೆ ಏನನ್ನುವುದು?
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.