ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಭಾರತೀಯರ ಎದುರು ತಮ್ಮ ವಾದವನ್ನು ಅದೇಕೆ ಮಂಡಿಸುತ್ತಿಲ್ಲವೋ, ನನಗಂತೂ ಅರ್ಥವಾಗುತ್ತಿಲ್ಲ. ಶ್ರೀಲಂಕಾ ತಮಿಳರ ಬಗ್ಗೆ ಅದೇನು ಹೇಳಬೇಕೆಂದಿದ್ದಾರೊ ಅದನ್ನು ನೇರವಾಗಿಯೇ ಹೇಳಿ ಬಿಡಲಿ. ರಾಜಪಕ್ಸೆ ಬಗ್ಗೆ ಈ ಭಾಗದಲ್ಲಿ ಸದಭಿಪ್ರಾಯವಂತೂ ಇದ್ದಂತಿಲ್ಲ.
ಈ ನಡುವೆ ಶ್ರೀಲಂಕಾವನ್ನು ಇಬ್ಭಾಗ ಮಾಡಬೇಕೆಂಬ ತಮಿಳು ರಾಷ್ಟ್ರೀಯವಾದಿಗಳ ವಾದಕ್ಕೆ ಭಾರತೀಯರು ಬೆಂಬಲಿಸುವುದು ಅಷ್ಟರಲ್ಲೇ ಇದೆ. ಪರಿಸ್ಥಿತಿ ಹೀಗಿರುವಾಗ ರಾಜಪಕ್ಸೆ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂವಹನ ನಡೆಸಬೇಕಾದ ಅಗತ್ಯ ಇದ್ದೇ ಇದೆ.
ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮುಂತಾದವರೊಂದಿಗೆ ಹಲವು ಸುತ್ತುಗಳ ಚರ್ಚೆಗಿಂತಲೂ ರಾಜಪಕ್ಸೆ ಅವರಿಗೆ ರಾಜಕೀಯ ತಜ್ಞರು, ವಿಶ್ಲೇಷಕರು, ಚಿಂತಕರ ಜತೆಗಿನ ಸಂವಾದದ ಅಗತ್ಯವಿದೆ.
ಭಾರತದ ಗುಪ್ತಚರ ಇಲಾಖೆಯೇ ಆಗಲಿ, ನಾಗರಿಕ ಸಮಾಜವೇ ಆಗಲಿ ಹಿಂದೆ ಯಾವತ್ತೂ ಎಲ್‌ಟಿಟಿಇ ಮುಖಂಡ ಪ್ರಭಾಕರನ್ ಅವರ ಯಾವುದೇ ಫ್ಯಾಸಿಸ್ಟ್ ತಂತ್ರ, ಕಾರ್ಯಾಚರಣೆಗಳನ್ನು ಬೆಂಬಲಿಸಿರಲಿಲ್ಲ.
ಅದೇನೇ ಇದ್ದರೂ, ಶ್ರೀಲಂಕಾದಲ್ಲಿರುವ ಅಲ್ಪಸಂಖ್ಯಾತ ತಮಿಳರನ್ನು ಪ್ರಜಾಸತ್ತೆಯ ಚೌಕಟ್ಟಿನೊಳಗೆ ಅತ್ಯಂತ ಗೌರವಾದರಗಳಿಂದ ನಡೆಸಿಕೊಳ್ಳಬೇಕೆಂದು ಭಾರತೀಯರೆಲ್ಲರೂ ಬಯಸುತ್ತಾರೆ.
ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ ಭಾರತ ಶಾಂತಿ ಪಾಲನಾ ಪಡೆಯು (ಐಪಿಕೆಎಫ್) ಅಲ್ಲಿಗೆ ತೆರಳಿದ್ದು ಈಗ ಹಳೆಯ ವಿಚಾರ. ಉಭಯ ದೇಶಗಳಿಗೂ ಅದರಿಂದ ಕಹಿ ಅನುಭವವೇ ಹೆಚ್ಚು. ಈಗಂತೂ ಉಭಯ ದೇಶಗಳ ನಡುವೆ ಅದೊಂದು ಮರೆತು ಹೋಗುತ್ತಿರುವ ಅಧ್ಯಾಯ.
ಆದರೂ ಎಲ್‌ಟಿಟಿಇ ವಿರುದ್ಧದ ಕದನದಲ್ಲಿ ತಮಿಳರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಘಟನೆಗಳು ತಮಿಳರೂ ಸೇರಿದಂತೆ ಭಾರತೀಯರೆಲ್ಲರ ನೆನಪಿನಲ್ಲಿವೆ. ಅದರಲ್ಲೂ, ಅಂದು ನಡೆದ ದೌರ್ಜನ್ಯಗಳ ಕೆಲವು ಮಾಹಿತಿಗಳು ಈಚೆಗೆ ಬಯಲಾಗುತ್ತಿದ್ದು, ಭಾರತೀಯ ಸಮುದಾಯವೇ ತಲ್ಲಣಗೊಂಡಿದೆ.
ಪ್ರಭಾಕರನ್ ಅವರ ಮಗನ ವಿಕೃತ ರೀತಿಯ ಹತ್ಯೆಯ ವಿವರಗಳಂತೂ ಅಮಾನವೀಯವಾಗಿವೆ. ಇಂತಹ ಸುದ್ದಿಗಳು ಬಯಲಾಗುತ್ತಿದ್ದರೂ, ಅಂತರರಾಷ್ಟ್ರೀಯ ವಲಯಗಳಲ್ಲಿ ಈ ಕುರಿತು ಚರ್ಚೆಗೆ ಗ್ರಾಸ ಒದಗುತ್ತಿದ್ದರೂ ಶ್ರೀಲಂಕಾ ಸರ್ಕಾರ ಮಾತ್ರ ಕಿವುಡಾಗಿ ವರ್ತಿಸುತ್ತಿದೆ. ಭಾರತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.
ಇಂತಹ ದೌರ್ಜನ್ಯಗಳು ನಡೆದಿವೆ ಎನ್ನಲಾದ ಸ್ಥಳಗಳಿಗೂ ಭಾರತೀಯ ಅಧಿಕಾರಿಗಳನ್ನು ಕರೆದೊಯ್ದು ತೋರಿಸುವ ಸೌಜನ್ಯವನ್ನು ತೋರಿಲ್ಲ. ಹೀಗಾಗಿ ಇದು ಹಲವು ಅನುಮಾನಗಳಿಗೆ ಎಡೆ ಕೊಡುತ್ತದೆ.
ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ಹಿಂದೊಮ್ಮೆ ಶ್ರೀಲಂಕಾದ ಪ್ರಮುಖ ಪತ್ರಿಕೆಯೊಂದರಲ್ಲಿ ನಾನು ನಿಖರ ಮಾಹಿತಿಗಳೊಂದಿಗೆ ಲೇಖನ ಬರೆದಿದ್ದೆ. ಆ ಪತ್ರಿಕೆಯವರು ತಮ್ಮನ್ನು ಅತ್ಯಂತ ಮುಕ್ತಧೋರಣೆ ಹೊಂದಿರುವವರೆಂದು ಬಿಂಬಿಸಿಕೊಳ್ಳುತ್ತಾರೆ.
ಆ ಪತ್ರಿಕೆಯವರೇ ನನ್ನ ಆ ಲೇಖನದಿಂದ ಸಿಡಿಮಿಡಿಗೊಂಡರಲ್ಲದೆ, ನಂತರ ನನ್ನ ಲೇಖನಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿಬಿಟ್ಟರು. ಇವುಗಳೇನೇ ಇದ್ದರೂ, ವಾಸ್ತವಗಳನ್ನು, ನಿಖರ ಮಾಹಿತಿಗಳನ್ನು ಎದುರಿಗಿಟ್ಟುಕೊಂಡು ಕಣ್ಣಾಮುಚ್ಚಾಲೆ ನಡೆಸಬೇಕಿಲ್ಲ.
ಈ ಬಗ್ಗೆ ತಮಿಳುನಾಡಿನಲ್ಲಿ ಹೆಚ್ಚು ಜನ ಕೋಪೋದ್ರಿಕ್ತರಾಗಿದ್ದಾರೆ. ಇದು ಸಹಜ. ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ ಈ ಜನರು ಶ್ರೀಲಂಕಾ ತಮಿಳರಿಗೆ ಅತಿ ಸಮೀಪದವರು. ಕೇಂದ್ರ ಸರ್ಕಾರ ಈ ವಿವಾದ, ಸಮಸ್ಯೆಯನ್ನು ಇನ್ನಷ್ಟೂ ವಸ್ತುನಿಷ್ಠವಾಗಿ ನೋಡಬಹುದು. ಇದು ಮನಮೋಹನ್ ಸಿಂಗ್ ಸರ್ಕಾರ ಇತರರಿಗಿಂತ ಭಿನ್ನ ಎಂಬುದನ್ನು ತೋರಿಸುತ್ತದೆ.
ಯುಪಿಎ ಸರ್ಕಾರದ ಮಿತ್ರಪಕ್ಷವಾದ ಡಿಎಂಕೆ ಈಚೆಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿತ್ತು. ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಗೊತ್ತುವಳಿಗೆ ಬೆಂಬಲಿಸಬೇಕೆಂದು ಡಿಎಂಕೆ ಪಕ್ಷವು ಕೇಂದ್ರವನ್ನು ಒತ್ತಾಯಿಸಿತ್ತು. ಕೊನೆಗೂ ಕರುಣಾನಿಧಿ ಆಗ್ರಹಕ್ಕೆ ಮನಮೋಹನ್ ಸಿಂಗ್ ಒಪ್ಪಿದ್ದಾರೆ.
ಶ್ರೀಲಂಕಾದ ರಾಜಕೀಯ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ನಿರಂತರವಾಗಿ ಗಮನಿಸುತ್ತಿರುವವರಿಗೆಲ್ಲಾ ಅಲ್ಲಿಂದ ವಲಸೆ ಹೋಗುತ್ತಿರುವವರ ಸಂಖ್ಯೆಯನ್ನು ಗಮನಿಸಿದಾಗ ಆತಂಕವೆನಿಸುತ್ತದೆ. ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಕಾಣಲಾಗುತ್ತಲೇ ಇಲ್ಲ.
ತನ್ನಲ್ಲಿರುವ ಜನಾಂಗೀಯ ಸಮಸ್ಯೆಯ ಬೆಂಕಿಯನ್ನು ನಂದಿಸುವಲ್ಲಿ ಶ್ರೀಲಂಕಾ ಸರ್ಕಾರ ತಪ್ಪು ಹಾದಿ ಹಿಡಿದಿದೆಯೇನೋ ಎಂದೆನಿಸುತ್ತದೆ. ಶತಶತಮಾನಗಳಿಂದ ತಾವು ಬಾಳಿ ಬದುಕುತ್ತಿರುವ ನೆಲದಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂಬ ಶ್ರೀಲಂಕಾ ತಮಿಳರ ಭಾವನೆಗಳಿಗೆ ಸರ್ಕಾರದ ಕೆಲವು ಧೋರಣೆಗಳು ಪುಷ್ಟಿ ನೀಡುವಂತಿವೆ.
ಬಹುಸಂಖ್ಯಾತ ಸಿಂಹಳೀಯ ಕೋಮಿಗೆ ಸೇರಿರುವ ರಾಜಪಕ್ಸೆ ಅವರು ತಾವು ಚುನಾವಣೆಯಲ್ಲಿ ನಿಚ್ಚಳ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಿದ ಮೇಲಾದರೂ ತಮಿಳರ ಪ್ರಶ್ನೆಗೆ ಸರಿಯಾಗಿ ಸ್ಪಂದಿಸಬೇಕಿತ್ತು.
ಆದರೆ ರಾಜಪಕ್ಸೆ ತಮಿಳು ಭಾಷೆಯಲ್ಲಿ ರಾಷ್ಟ್ರಗೀತೆ ಹಾಡುವುದಕ್ಕೂ ಇತಿಶ್ರೀ ಹೇಳಿಬಿಟ್ಟರು. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವಾಗಿತ್ತು.
ಇದು ಅಲ್ಪಸಂಖ್ಯಾತ ತಮಿಳರ ಮನದಲ್ಲಿ ಸಮಾನತೆಯ ಭಾವ ತಂದು ಕೊಡುವಂತಿತ್ತು. ತಾವು ಈ ನೆಲದಲ್ಲಿ ಎರಡನೇ ದರ್ಜೆಯ ಪ್ರಜೆಗಳಲ್ಲ ಎಂಬ ಭಾವ ಅವರ ಮನದಲ್ಲಿ ತುಂಬಿರುವಂತೆ ಮಾಡುತಿತ್ತು. ಈಗ ರಾಜಪಕ್ಸೆ ಆ ಭಾವನೆಗಳನ್ನೂ ಪುಡಿಗಟ್ಟಿ ಬಿಟ್ಟರು.
ಶ್ರೀಲಂಕಾದ ಉತ್ತರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ವಾಸಿಸುತ್ತಿದ್ದಾರೆ. ಇವರಲ್ಲಿ ಬಹಳ ಮಂದಿ ಎಲ್‌ಟಿಟಿಇ ಸಂಘಟನೆಯ ಬೆಂಬಲಿಗರೇನೂ ಆಗಿರಲಿಲ್ಲ. ವೇಲುಪಿಳ್ಳೈ ಪ್ರಭಾಕರನ್ ಇವರೆಲ್ಲರಿಗೂ ಹೀರೊ ಆಗಿರಲಿಲ್ಲ.
ತಮ್ಮ ಕಾರ್ಯತಂತ್ರಗಳಿಂದ ತಮಿಳರನ್ನು ಬಡತನದ ಕೂಪಕ್ಕೆ ತಳ್ಳಿದ ಪ್ರಭಾಕರನ್ ವಿರುದ್ಧ ಬಹಳಷ್ಟು ತಮಿಳರು ಟೀಕಾಸ್ತ್ರಗಳನ್ನು ಬಿಡುತ್ತಲೇ ಇದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.
ಪ್ರಭಾಕರನ್ ನಂತರವಾದರೂ ಕೊಲಂಬೊ ಮಂದಿ ಜಾಫ್ನಾ ಭಾಗದವರನ್ನು ಗೌರವದಿಂದ ನಡೆಸಿಕೊಳ್ಳಬಹುದು, ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂದುಕೊಂಡಿದ್ದವರಿಗೆಲ್ಲಾ ಈಗ ನಿರಾಸೆ ಉಂಟಾಗಿದೆ. ಪ್ರಭಾಕರನ್ ಪ್ರಭಾವದಿಂದ ದೂರ ಉಳಿದಿದ್ದವರ ಮೇಲೂ ಶ್ರೀಲಂಕಾ ಸರ್ಕಾರ ತನ್ನ ಸೇಡಿನ ಗದಾಪ್ರಹಾರ ನಡೆಸುತ್ತಲೇ ಇದೆ.
ಆದರೂ ಎಲ್‌ಟಿಟಿಇಯ ಬಗ್ಗೆ ಹೆದರಿಕೆ, ವಿದೇಶಗಳಲ್ಲಿ ನೆಲೆಸಿರುವ ಲಕ್ಷಾಂತರ ಸಂಖ್ಯೆಯ ತಮಿಳರ ಭಯದಿಂದ ಶ್ರೀಲಂಕಾ ಸರ್ಕಾರ ಒಂದೇ ರಾಷ್ಟ್ರ, ಒಂದೇ ಧ್ವಜ, ಒಂದೇ ರಾಷ್ಟ್ರಗೀತೆಯತ್ತ ಇಡುತ್ತಿದ್ದ ಹೆಜ್ಜೆಗಳು ನಿಧಾನವಾಗಿತ್ತಷ್ಟೆ.
ಪ್ರಭಾಕರನ್ ಹತ್ಯೆಯ ನಂತರ ಶ್ರೀಲಂಕಾ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳು ತಮಿಳರಿಗೆ ಭರವಸೆ ಮೂಡಿಸುವಂತಿರಲಿಲ್ಲ. ಸಹಜವಾಗಿಯೇ ತಮಿಳರು ಒಂಟಿತನ ಅನುಭವಿಸುವಂತಾಯಿತು, ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದೇವೆಂಬ ಭಾವ ಮೂಡತೊಡಗಿತು.
ಶ್ರೀಲಂಕಾದ ಒಕ್ಕೂಟ ವ್ಯವಸ್ಥೆಯಲ್ಲಿಯೂ ಅಧಿಕಾರದ ವಿಕೇಂದ್ರೀಕರಣವನ್ನು ಅಧ್ಯಕ್ಷ ರಾಜಪಕ್ಸೆ ವಿರೋಧಿಸುತ್ತಲೇ ಬಂದಿದ್ದಾರೆ. ಇದು ಶ್ರೀಲಂಕಾ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಯಾವತ್ತಿದ್ದರೂ ಅಪಾಯಕಾರಿಯೇ. ಇದರಿಂದ ಶ್ರೀಲಂಕಾದೊಳಗಿರುವ ಅಥವಾ ಹೊರಗಿರುವ ತಮಿಳರು ಒಂದಲ್ಲಾ ಒಂದು ದಿನ ಉಗ್ರಸ್ವರೂಪದಲ್ಲಿ ಮತ್ತೆ ಸಿಡಿದೆದ್ದರೆ ಅಚ್ಚರಿ ಏನಿಲ್ಲ.
ಎಲ್‌ಟಿಟಿಇ ವಿರುದ್ಧದ ಸಮರದ ಕೊನೆಯ ದಿನಗಳಲ್ಲಿ ಶ್ರೀಲಂಕಾ ಸೇನೆ ನಡೆಸಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ಭಾರತದ ಸಂಸತ್ತಿನಲ್ಲಿ ಪ್ರಸ್ತಾಪವಾದಾಗ ವ್ಯಕ್ತವಾದ ಕಟುವಾದ ಅಭಿಪ್ರಾಯಗಳು ಶ್ರೀಲಂಕಾದಲ್ಲಿನ ದೌರ್ಜನ್ಯದ ವಿರುದ್ಧದ ಅನಿಸಿಕೆಗಳು ಬೂದಿ ಮುಚ್ಚಿದ ಕೆಂಡದಂತಿವೆ ಎಂಬುದರ ದ್ಯೋತಕದಂತಿದೆ.
ಶ್ರೀಲಂಕಾ ಮಂದಿ ಅಥವಾ ಕೊಲಂಬೊ ಗದ್ದುಗೆಯ ಸುತ್ತ ಇರುವವರು ರಾಜಪಕ್ಸೆ ಅವರನ್ನೇ ಬದಲಿಸಬೇಕಿಲ್ಲ. ಆದರೆ ರಾಜಪಕ್ಸೆ ಮೂಗಿನ ನೇರದಲ್ಲೇ ನಡೆಯುತ್ತಿರುವ ಆಡಳಿತ ಪ್ರಕ್ರಿಯೆ, ಸರ್ವಾಧಿಕಾರಿ ವರ್ತನೆ, ವಂಶಪಾರಂಪರ್ಯಕ್ಕೆ ಪೂರಕವಾದ ಚಟುವಟಿಕೆಗಳಿಗೆಲ್ಲಾ ಕಡಿವಾಣ ಹಾಕಲೇ ಬೇಕಾಗಿದೆ.
ಎಲ್‌ಟಿಟಿಐ ವಿರುದ್ಧ ಶ್ರೀಲಂಕಾ ಸರ್ಕಾರ ನಡೆಸಿದ ಸಮರದಲ್ಲಿ ತೊಂದರೆಗೀಡಾದ ತಮಿಳರ ಪುನರ್‌ವಸತಿಗಾಗಿ ಭಾರತ ಸರ್ಕಾರ ಭಾರಿ ಮೊತ್ತದ ಹಣವನ್ನೇ ವೆಚ್ಚ ಮಾಡುತ್ತಿದೆ.
ಇಷ್ಟಾದರೂ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ತಮಿಳರು ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ರಸ್ತೆಬದಿ, ಬಯಲುಗಳಲ್ಲಿ ದಿನ ದೂಡುತ್ತಿದ್ದಾರೆ. ಯುದ್ಧ ಮುಗಿದು ವರ್ಷಗಳುರುಳಿದರೂ ನಿರಾಶ್ರಿತರ ಪರಿಸ್ಥಿತಿ ಅದೇ ರೀತಿ ಇದೆ. ತಮಿಳರ ಮೇಲೆ ಮಲತಾಯಿ ಧೋರಣೆ ಮುಂದುವರಿದೇ ಇದೆ.
ತಮ್ಮದು ಪ್ರಜಾಸತ್ತಾತ್ಮಕ ದೇಶ ಎಂದುಕೊಳ್ಳುತ್ತಿರುವ ಶ್ರೀಲಂಕಾದಲ್ಲಿ ಎಲ್ಲಾ ನಾಗರಿಕರನ್ನು ಸಮಾನವಾಗಿ ನೋಡಬೇಕಾದಂತಹ ಮನಸ್ಥಿತಿಯಾದರೂ ಇರಬೇಕಲ್ಲ. ಸಿಂಹಳೀಯರು ಬಹುಸಂಖ್ಯಾತರಿರಬಹುದು, ತಮಿಳರು ಅಲ್ಪಸಂಖ್ಯಾತರಿರಬಹುದು. ಆದರೆ ಇವರೆಲ್ಲರೂ ಸೇರಿಯೇ ರಾಷ್ಟ್ರವಾಗಿರುವುದು ತಾನೆ.
ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವವರು `ಕೊಲಂಬೊ ಆಡಳಿತಗಾರ~ರ ಜತೆಗೆ ಉತ್ತಮ ಬಾಂಧವ್ಯವನ್ನೇ ಇರಿಸಿಕೊಂಡಿದ್ದಾರೆ, ನಿಜ. ಆದರೆ ಶ್ರೀಲಂಕಾದಲ್ಲಿರುವ ತಮಿಳರ ಪರಿಸ್ಥಿತಿ ಸುಧಾರಿಸುವಂತೆ ಕೊಲಂಬೊ ಮೇಲೆ ಪ್ರಭಾವ ಬೀರಬೇಕೆಂದು ತಮಿಳುನಾಡಿನ ಮಂದಿ ಕೇಂದ್ರದ ಆಡಳಿತಗಾರರ ಮೇಲೆ ನಿರಂತರ ಪರಿಣಾಮಕಾರಿ ಒತ್ತಡ ಹೇರುತ್ತಲೇ ಬಂದಿದ್ದಾರೆ.
ಶ್ರೀಲಂಕಾದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತರ ಭಾಗದ ಮಂದಿಗೆ ತಾವು ದಕ್ಷಿಣದವರಷ್ಟೇ ಸುರಕ್ಷಿತ ಎಂಬ ಭಾವ ಮೂಡಿದರಷ್ಟೇ ಅದು ಯಶಸ್ವಿ ಪ್ರಜಾಪ್ರಭುತ್ವ ಎನಿಸುತ್ತದೆ ಎಂಬುದನ್ನು ಅಲ್ಲಿನ ಸರ್ಕಾರ ಅರಿತುಕೊಳ್ಳಬೇಕು.
ಇವೆಲ್ಲಾ ಚಿಂತನೆ, ರಾಜಕೀಯ ಆಗುಹೋಗುಗಳ ನಡುವೆಯೇ ರಾಜಪಕ್ಸೆ ಸರ್ಕಾರ ಭಾರತದ ಜತೆಗಿನ ಸಂಬಂಧವಷ್ಟೇ ಅಲ್ಲ, ಚೀನಾ ಮತ್ತು ಪಾಕಿಸ್ತಾನಗಳ ಜತೆಗೂ ಉತ್ತಮ ಬಾಂಧವ್ಯ ವೃದ್ಧಿಗೆ ಪ್ರಯತ್ನ ನಡೆಸಿದೆ.
ಚೀನಾ ಮತ್ತು ಪಾಕಿಸ್ತಾನಗಳ ಜತೆ ಭಾರತದ ಸಂಬಂಧ ಅಷ್ಟಕ್ಕಷ್ಟೆ. ಆದರೆ ಶ್ರೀಲಂಕಾ ಸರ್ಕಾರವು ಇದೀಗ ಟ್ರಿಂಕಾಮಲಿಯಲ್ಲಿ ಬಂದರೊಂದನ್ನು ಕಟ್ಟಲು ಚೀನಾಕ್ಕೆ ಅವಕಾಶ ನೀಡಿದೆಯಷ್ಟೇ ಅಲ್ಲ,
ಪಾಕಿಸ್ತಾನ ಸೇನೆಗೆ ಸೇರ್ಪಡೆಗೊಂಡ ಹೊಸಬರಿಗೆ ಶ್ರೀಲಂಕಾ ಸೇನಾ ಶಿಬಿರಗಳಲ್ಲಿ ತರಬೇತಿ ನೀಡಿ ಕಳುಹಿಸಲಾಗುತ್ತಿದೆ. ಇಂತಹ ಸಂಗತಿಗಳು ಭಾರತಕ್ಕೆ ಮುಜುಗರ ಉಂಟು ಮಾಡುವಂತಿದ್ದರೂ, ಭಾರತ ಸರ್ಕಾರ ಶ್ರೀಲಂಕಾ ಜತೆಗಿನ ತನ್ನ ಸ್ನೇಹಪರ ಸಂಬಂಧವನ್ನೇ ಮುಂದುವರಿಸಿದೆ.
ತಮಿಳರೂ ಅಲ್ಲಿನ ಮುಖ್ಯವಾಹಿನಿ ರಾಜಕಾರಣದಲ್ಲಿ ಪಾಲ್ಗೊಳ್ಳುವುದಕ್ಕೆ ಪೂರಕವಾದ ವಾತಾವರಣ ಮೂಡುವಂತೆ ಮಾಡಲು ಭಾರತ ನೆರವು ನೀಡುತ್ತಿದೆ. ಇದು ಕೊಲಂಬೊಕ್ಕೆ, ಸಿಂಹಳೀಯರಿಗೆ ಒಳ್ಳೆಯದು ಮಾಡುವಂತಹದ್ದೇ ಆಗಿದೆ.
(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.